
ಬೆಂಗಳೂರು, ಅಕ್ಟೋಬರ್ 30: ಮೆಟ್ರೋ ರೈಲೊಂದು ಕೆಟ್ಟು ನಿಂತ ಕಾರಣ ನಮ್ಮ ಮೆಟ್ರೋದ (Namma Metro) ಚಲ್ಲಘಟ್ಟದಿಂದ ವೈಟ್ ಫೀಲ್ಡ್ಗೆ ಸಂಚರಿಸುವ ನೇರಳೆ ಮಾರ್ಗದಲ್ಲಿ ಗುರುವಾರ ಬೆಳಗ್ಗೆ ಸಂಚಾರ ವ್ಯತ್ಯಯವಾಗಿದೆ. ಚಲ್ಲಘಟ್ಟದಿಂದ ಹಾಗೂ ವೈಟ್ಫೀಲ್ಡ್ನಿಂದ ಹೊರಟ ಮೆಟ್ರೋ ರೈಲುಗಳು ಎಲ್ಲೆಲ್ಲಿ ಇವೆಯೋ ಆ ನಿಲ್ದಾಣಗಳಲ್ಲಿಯೇ ಸುಮಾರು 10 ನಿಮಿಷಗಳಿಗೂ ಹೆಚ್ಚು ಸಮಯ ನಿಲ್ಲುವಂತಾಯಿತು. ಮೆಟ್ರೋ ರೈಲು ಸುಮಾರು 10 ನಿಮಿಷಗಳಿಂದಲೂ ನಿಲ್ದಾಣದಲ್ಲಿಯೇ ನಿಂತಿದ್ದು, ಆನಂತರ ಪ್ರಯಾಣ ಆರಂಭಿಸಿತು ಎಂದು ಪ್ರಯಾಣಿಕರು ತಿಳಿಸಿದ್ದಾರೆ. ಮೆಟ್ರೋ ರೈಲು ಮುಂದಕ್ಕೆ ಚಲಿಸದೆ ಇರುವ ಬಗ್ಗೆ ಸ್ಥಳದಲ್ಲಿರುವ ಸಿಬ್ಬಂದಿ ಕಾರಣ ನೀಡಿಲ್ಲ. ಆದರೆ, ನಂತರ ಬಿಎಂಆರ್ಸಿಎಲ್ (BMRCL) ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.
‘ವಿಳಂಬಕ್ಕಾಗಿ ನಾವು ಕ್ಷಮೆಯಾಚಿಸುತ್ತೇವೆ. ಮುಂದಿನ ಮಾಹಿತಿ ಸಿಕ್ಕ ತಕ್ಷಣ ನಿಮಗೆ ತಿಳಿಸುತ್ತೇವೆ’ ಎಂದು ಮೆಟ್ರೋ ರೈಲಿನಲ್ಲಿ ಅನೌನ್ಸ್ ಮಾಡಲಾಗಿದೆ. ಸದ್ಯ ಮೆಟ್ರೋ ರೈಲು ಸಂಚಾರ ಶುರುವಾಗಿದ್ದು, ವಿಳಂಬವಾಗಿ ಸಂಚರಿಸುತ್ತಿದೆ.
ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ತಾಂತ್ರಿಕ ಸಮಸ್ಯೆಯ ಕಾರಣ ರೈಲು ಸಂಚಾರ ವಿಳಂಬವಾಗಿದೆ. ಬೆಳಗ್ಗೆ 8.50ರಿಂದ ಮೆಟ್ರೋ ರೈಲು ಸಂಚಾರದಲ್ಲಿ ವ್ಯತ್ಯಯವಾಗಿದೆ. ಈ ಬಗ್ಗೆ ಬಿಎಂಆರ್ಸಿಎಲ್ ಅಧಿಕಾರಿಗಳು ‘ಟಿವಿ9’ಗೆ ಮಾಹಿತಿ ನೀಡಿದ್ದು, ಚಲ್ಲಘಟ್ಟ-ವೈಟ್ ಫೀಲ್ಡ್ ಮಾರ್ಗದಲ್ಲಿ ಸಂಚಾರ ವ್ಯತ್ಯಯವಾಗಿದೆ. ವಿಜಯನಗರ -ಹೊಸಹಳ್ಳಿ ನಿಲ್ದಾಣಗಳ ನಡುವೆ ವ್ಯತ್ಯಯವಾಗಿದೆ. ತಾಂತ್ರಿಕ ಸಮಸ್ಯೆಯಿಂದಾಗಿ ರೈಲೊಂದು ಕೆಟ್ಟು ನಿಂತಿದ್ದೇ ಇದಕ್ಕೆ ಕಾರಣ. ಕೆಟ್ಟುನಿಂತ ರೈಲನ್ನು ಚಲ್ಲಘಟ್ಟ ನಿಲ್ದಾಣಕ್ಕೆ ಸ್ಥಳಾಂತರಿಸಲಾಗುತ್ತಿದೆ. ಆನಂತರ ಮೆಟ್ರೋ ರೈಲು ಸಂಚಾರ ಸಹಜ ಸ್ಥಿತಿಗೆ ಬರಲಿದೆ ಎಂದು ತಿಳಿಸಿದ್ದಾರೆ.
ಪೀಕ್ ಅವರ್ನಲ್ಲೇ ಮೆಟ್ರೋ ಸಂಚಾರ ವ್ಯತ್ಯಯವಾಗಿದ್ದರಿಂದ ಪ್ರಯಾಣಿಕರು ಪರದಾಟ ಪಡುವಂತಾಯಿತು. ಕೆಲವು ಪ್ರಯಾಣಿಕರು ಮೆಟ್ರೋದಿಂದ ಅರ್ಧದಲ್ಲೇ ಇಳಿದು ಹೊರ ಹೋದರೂ ಕ್ಯಾಬ್ ಸಿಗದೆ ಪರದಾಡಿದರು. ಸದ್ಯ ಮೆಟ್ರೋ ಸಂಚಾರ ಆರಂಭವಾಗಿದ್ದರೂ ಒಂದು ತಾಸಿನಿಂದ ಕಾಯುತ್ತಿದ್ದವರು ಏಕಾಏಕಿ ನಿಲ್ದಾಣಗಳಿಗೆ ಮುಗಿಬೀಳುತ್ತಿರುವುದರಿಂದ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿದೆ.
ಇದನ್ನೂ ಓದಿ: ಬೆಂಗಳೂರು ಪೊಲೀಸರಿಂದ ಭರ್ಜರಿ ಬೇಟೆ: ಕಳವಾಗಿದ್ದ 3 ಕೋಟಿ ರೂ. ಮೌಲ್ಯದ 1949 ಮೊಬೈಲ್ ವಶಕ್ಕೆ
ಪ್ರಯಾಣಿಕರ ದಟ್ಟಣೆ ನಿರ್ವಹಿಸಲು ಮೆಟ್ರೋ ಸಿಬ್ಬಂದಿ ಹರಸಾಹಸ ಪಡುತ್ತಿದ್ದು, ಸದ್ಯ ನೇರಳೆ ಮಾರ್ಗದ ಅನೇಕ ಮೆಟ್ರೋ ನಿಲ್ದಾಣಗಳಲ್ಲಿ ಪ್ರಯಾಣಿಕರನ್ನು ಒಳಬಿಡುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.
Published On - 9:42 am, Thu, 30 October 25