ಬೆಂಗಳೂರಿನಲ್ಲಿ ರೋಡ್ ರೇಜ್ ಕಿರಿಕ್: ಕಾರಿನಿಂದ ಗುದ್ದಿ ಬೈಕ್ ಸವಾರನ ಕೊಲೆ; ದಂಪತಿ ಬಂಧನ
ಬೆಂಗಳೂರಿನ ಶ್ರೀರಾಮ ಲೇಔಟ್‌ನಲ್ಲಿ ಭೀಕರ ರೋಡ್ ರೇಜ್ಗೆ ಕೊಲೆ ನಡೆದಿದೆ. ಅ. 25ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಲೆ ಮಾಡಿದ ಕಾರು ಚಾಲಕನ ಮತ್ತು ಸಾಕ್ಷಿ ನಾಶಕ್ಕೆ ಸಹಾಯ ಮಾಡಿದ ಆತನ ಪತ್ನಿಯನ್ನು ಬಂಧಿಸಿದ್ದಾರೆ.

ಬೆಂಗಳೂರು, ಅಕ್ಟೋಬರ್ 29: ನಗರದ ರಸ್ತೆಗಳಲ್ಲಿ ರೋಡ್ ರೋಜ್ (road rage) ಗಲಾಟೆಗಳು ಸರ್ವೇಸಾಮಾನ್ಯವಾಗಿವೆ. ಪೊಲೀಸರು ಎಷ್ಟೇ ಕೇಸ್ ಹಾಕಿ ಬುದ್ಧಿ ಹೇಳಿದರೂ ಕಿರಿಕ್ಗಳು ಮಾತ್ರ ನಿಲ್ಲುತ್ತಿಲ್ಲ. ಅದೇ ರೀತಿ ಇಲ್ಲೊಂದು ರೋಡ್ ರೇಜ್ ಕಿರಿಕ್ ತಾರಕಕ್ಕೇರಿ ಓರ್ವನ ಕೊಲೆಯಲ್ಲಿ (kill) ಅಂತ್ಯವಾಗಿರುವಂತಹ ಘಟನೆ ಶ್ರೀರಾಮ ಲೇಔಟ್‌ನಲ್ಲಿ ನಡೆದಿದೆ.
ಬೈಕ್ಗೆ ಕಾರಿನಿಂದ ಡಿಕ್ಕಿ ಹೊಡೆದು ಓರ್ವ ಯುವಕನ ಕೊಲೆ ಮಾಡಲಾಗಿದೆ. ಈ ರೋಡ್ ರೇಜ್ ಕಿರಿಕ್ನಲ್ಲಿ ಕೊಲೆಯಾದ ಬೈಕ್ ಸವಾರನ ಹೆಸರು ದರ್ಶನ್. ಹೀಗೆ ಸಣ್ಣ ವಿಚಾರಕ್ಕೆ ಬೈಕ್ ಸವಾರನ ಪ್ರಾಣ ಬಲಿ ಪಡೆದಾತ ಮನೋಜ್. ಸಾಕ್ಷಿ ನಾಶಕ್ಕೆ ಸಹಾಯ ಮಾಡಿರುವ ಪತ್ನಿ ಆರತಿ. ಸದ್ಯ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ನಡೆದದ್ದೇನು?
ಅ. 25ರಂದು ರಾತ್ರಿ 11.20ರ ಸುಮಾರಿಗೆ ದರ್ಶನ್ ಮತ್ತು ಆತನ ಸ್ನೇಹಿತ ವರುಣ್ ಪುಟ್ಟೇನಹಳ್ಳಿಯ ಶ್ರೀರಾಮ ಬಡಾವಣೆಯಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದರು. ಇದೇ ವೇಳೆ ಮನೋಜ್ ಕಾರಿನಲ್ಲಿ ಹೋಗುತ್ತಿದ್ದು, ಯುವಕರ ಬೈಕ್ ಕಾರಿನ ಮಿರರ್ಗೆ ಟಚ್ ಆಗಿ ಡ್ಯಾಮೇಜ್ ಆಗಿತ್ತು. ಈ ವೇಳೆ ಇಬ್ಬರ ಮಧ್ಯೆ ಸ್ವಲ್ಪ ಮಾತಿನ ಚಕಮಕಿಯಾಗಿದೆ. ನಂತರ ದರ್ಶನ್ ಮತ್ತು ವರುಣ್ ಇಬ್ಬರು ತಮ್ಮ ಬೈಕ್‌ನಲ್ಲಿ ಮುಂದೆ ಹೋಗಿದ್ದು, ಎರಡು ಕಿಮೀ ನಷ್ಟು ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದ ಮನೋಜ್, ಏಕಾಏಕಿ ಬೈಕ್ಗೆ ಗುದ್ದಿದ್ದಾರೆ. ಈ ವೇಳೆ ತೀವ್ರ ಗಾಯಗೊಂಡ ಸವಾರ ದರ್ಶನ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ವರುಣ್ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.
ಇದನ್ನೂ ಓದಿ: ಕಾರ್ ಮಿರರ್ ಹೊಡೆದಿದ್ದಕ್ಕೆ ಬೈಕ್ ಸವಾರನ ಹತ್ಯೆ: ಕಾರಿನಿಂದ ಗುದ್ದಿದ ದೃಶ್ಯ ಸಿಸಿಟಿವಿಯಲ್ಲಿ ಇಲ್ಲಿದೆ
ಘಟನೆ ಬಗ್ಗೆ ಕೆಲ ಸ್ಥಳೀಯರು ಜೆಪಿ ನಗರ ಸಂಚಾರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಅಪಘಾತ ಎಂದು ಕೇಸ್ ದಾಖಲಿಸಿದ್ದರು. ಆದರೆ ತನಿಖೆ ನಡೆಸಿದ್ದ ಪೊಲೀಸರಿಗೆ ಇದೊಂದು ಕೊಲೆ ಎಂದು ಗೊತ್ತಾಗಿದೆ. ಅಪಘಾತ ನಡೆದ ಸ್ಥಳದ ಸಿಸಿಟಿವಿಗಳ ಪರಿಶೀಲನೆ ನಡೆಸಿದಾಗ ಆರೋಪಿಗಳು ಬಂದು ಹೋಗಿರುವುದು ಕಂಡು ಬಂದಿದೆ.
ಅಲ್ಲದೇ ಉದ್ದೇಶಪೂರ್ವಕವಾಗಿ ಕಾರಿನಲ್ಲಿ ಫಾಲೋ ಮಾಡಿ ಡಿಕ್ಕಿ ಹೊಡೆದಿದ್ದು, ಒಮ್ಮೆ ಬೈಕ್‌ನಲ್ಲಿ ಇದ್ದವರು ಮಿಸ್ ಆಗಿದ್ದರಂತೆ. ನಂತರ ಮತ್ತೆ ಯೂ ಟರ್ನ್ ಮಾಡಿಕೊಂಡು ಬಂದು ಡಿಕ್ಕಿ ಹೊಡೆದು ಕೊಲೆ ಮಾಡಿದ್ದಾರೆ. ಘಟನೆ ನಡೆದ ಕೆಲ ಸಮಯದ ನಂತರ ದಂಪತಿಗಳಿಬ್ಬರು ಮುಖಕ್ಕೆ ಮಾಸ್ಕ್ ಹಾಕಿಕೊಂಡು ವಾಪಸ್ ಸ್ಥಳಕ್ಕೆ ಬಂದಿದ್ದಾರೆ. ಸ್ಥಳದಲ್ಲಿ ಕಾರಿನ ಕೆಲ ಪಾರ್ಟ್ಸ್ ಬಿದ್ದಿರುವುದನ್ನ ಗಮಸಿನಿ ಅವುಗಳನ್ನು ಎತ್ತಿಕೊಂಡು ಹೋಗಿರುವುದು ಗೊತ್ತಾಗಿದೆ.
ಇದನ್ನೂ ಓದಿ: ರೇಣುಕಾಸ್ವಾಮಿ ರೀತಿಯಲ್ಲೇ ಸಾಯ್ತೀಯಾ: ವ್ಯಕ್ತಿಯೊಬ್ಬರನ್ನು ಕಿಡ್ನ್ಯಾಪ್ ಮಾಡಿ ಧಮ್ಕಿ
ಆರೋಪಿಗಳ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದು ಅಪಘಾತವಲ್ಲ, ಕೊಲೆ ಅನ್ನೋದು ಗೊತ್ತಾಗಿದೆ. ಇದೀಗ ಪುಟ್ಟೇನಹಳ್ಳಿ ಪೊಲೀಸರು ಕೇಸ್ ದಾಖಲು ಮಾಡಿ ದಂಪತಿಯನ್ನ ಅರೆಸ್ಟ್ ಮಾಡಿದ್ದಾರೆ. ಇಂತಹ ಸಣ್ಣಪುಟ್ಟ ವಿಚಾರವನ್ನ ಅಲ್ಲಿಗೆ ಬಿಟ್ಟಿದ್ದರೆ ಒಂದು ಪ್ರಾಣವು ಉಳಿಯುತ್ತಿತ್ತು. ಜೊತೆಗೆ ಜೈಲು ವಾಸವು ತಪ್ಪುತ್ತಿತ್ತು.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:07 pm, Wed, 29 October 25



