ಬೆಂಗಳೂರು, ಮಾ.22: ನಮ್ಮ ಮೆಟ್ರೋ (Bengaluru Namma Metro) ಟ್ರ್ಯಾಕ್ ಮೇಲೆ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ (Suicide) ಮಾಡಿಕೊಂಡ ಘಟನೆ ಗುರುವಾರ ನಡೆದಿತ್ತು. ಈ ರೀತಿ ಮೆಟ್ರೋ ನಿಲ್ದಾಣದಲ್ಲಿ ಆತ್ಮಹತ್ಯೆ ಮಾಡಿಕೊಂಡ ಮೊದಲ ಪ್ರಕರಣವಾಗಿದೆ. ಆದರೆ, ಮೆಟ್ರೋ ಟ್ರ್ಯಾಕ್ಗೆ ಪ್ರಯಾಣಿಕರು ಜಿಗಿಯುವುದು, ಮೆಟ್ರೋ ಹಳಿಯಲ್ಲಿ ಕಾಣಿಸಿಕೊಳ್ಳುವುದು ಈ ಹಿಂದೆ ಅನೇಕ ಘಟನೆಗಳು ನಡೆದಿವೆ. ಕಳೆದ ಮೂರು ತಿಂಗಳಲ್ಲಿ ಇಂತಹ ಐದು ಘಟನೆಗಳು ನಡೆದಿವೆ.
ಪ್ರಯಾಣಿಕರು ಪದೇ ಪದೇ ಮೆಟ್ರೋ ಟ್ರ್ಯಾಕ್ಗೆ ಜಿಗಿಯುತ್ತಿರುವುದರಿಂದ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಉಂಡಾಗುತ್ತಿದೆ. ಇದರಿಂದಾಗಿ ಪ್ರಯಾಣಿಕರು ಪರದಾಡುವಂತಾಗುತ್ತದೆ. ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಮಾತ್ರವೇ ಬಿಎಂಆರ್ಸಿಎಲ್ ಸೆಕ್ಯುರಿಟಿಗಳು ಆಲರ್ಟ್ ಆಗೋದು? ಸೆಕ್ಯುರಿಟಿಗಳ ನಿರ್ಲಕ್ಷ್ಯದಿಂದಲೇ ಇಂತಹ ಘಟನೆಗಳು ನಡೆಯುತ್ತಿವೆ ಎಂದು ಪ್ರಯಾಣಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.
ಇದನ್ನೂ ಓದಿ: ಮೆಟ್ರೋ ಟ್ರ್ಯಾಕ್ ಮೇಲೆ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ; ಯುಡಿಆರ್ ಪ್ರಕರಣ ದಾಖಲು
ಆದರೆ, ಇಷ್ಟೆಲ್ಲಾ ಅವಾಂತರಕ್ಕೆ ಮೆಟ್ರೋ ವ್ಯವಸ್ಥೆಯ ಅವ್ಯವಸ್ಥೆಯೇ ಕಾರಣ ಎನ್ನಲಾಗುತ್ತಿದೆ. ನಮ್ಮ ಮೆಟ್ರೋ ವ್ಯವಸ್ಥೆಯ ಒಳಗಿನ ಅವ್ಯವಸ್ಥೆ ಕುರಿತು ನಿಮ್ಮ ಟಿವಿ9 ಬಿಚ್ಚಿಡುತ್ತಿದೆ.
ಈಗಾಗಲೇ ದೆಹಲಿ, ಚೆನ್ನೈ ಮೆಟ್ರೋದಲ್ಲಿ ಪಿಎಸ್ಡಿ ಡೋರ್ ಅಳವಡಿಸಲಾಗಿದೆ. ಆದರೆ ನಮ್ಮ ಮೆಟ್ರೋದಲ್ಲಿ ಮಾತ್ರ ಇನ್ನೂ ಪಿಎಸ್ಡಿ (ಫ್ಲಾಟ್ ಫಾರಂ ಸ್ಕ್ರೀನಿಂಗ್ ಡೋರ್) ಅಳವಡಿಸಿಲ್ಲ. ಪಿಎಸ್ಡಿ ಅಳವಡಿಸುವುದರಿಂದ ಟ್ರ್ಯಾಕ್ಗೆ ಪ್ರಯಾಣಿಕರು ಜಿಗಿಯುವ ಪ್ರಕರಣಗಳು ತಪ್ಪುತ್ತವೆ. ಮೆಟ್ರೋ ರೈಲು ನಿಲ್ದಾಣಕ್ಕೆ ಬಂದಾಗ ಮಾತ್ರ ಈ ಪಿಎಸ್ಡಿ ಡೋರ್ಗಳು ಓಪನ್ ಆಗುತ್ತವೆ. ಮೆಟ್ರೋ ಆರಂಭವಾಗಿ ಹದಿಮೂರು ವರ್ಷಗಳು ಕಳೆದಿವೆ. ಆದರೂ ಪ್ರಯಾಣಿಕರು ಟ್ರ್ಯಾಕ್ಗೆ ಇಳಿಯದಂತೆ ನೋಡಿಕೊಳ್ಳಲು ಟ್ರ್ಯಾಕ್ಗೆ ಇದುವರೆಗೆ ಯಾವುದೇ ಭದ್ರತೆ ಕಲ್ಪಿಸಿಲ್ಲ.
ಪ್ರಕರಣ 1
ದಿನಾಂಕ 1, ಜನವರಿ 2024
ಸ್ಥಳ: ಇಂದಿರಾ ನಗರ ಮೆಟ್ರೋ ನಿಲ್ದಾಣ
ಘಟನೆ: ಮೊಬೈಲ್ ಹೆಕ್ಕಿಕೊಳ್ಳಲು ಟ್ರ್ಯಾಕ್ಗೆ ಇಳಿದ ಮಹಿಳೆ
ಇಂದಿರಾನಗರ ಮೆಟ್ರೋ ನಿಲ್ದಾಣದ ಪ್ಲಾಟ್ಫಾರ್ಮ್ 1 ರಲ್ಲಿ ಮೆಟ್ರೋ ರೈಲಿಗಾಗಿ ಮಹಿಳಾ ಪ್ರಯಾಣಿಕರೊಬ್ಬರು ಕಾಯುತ್ತಿದ್ದರು. ಈ ವೇಳೆ ಆಕಸ್ಮಿಕವಾಗಿ ಆಕೆಯ ಮೊಬೈಲ್ ರೈಲು ಹಳಿ ಮೇಲೆ ಬಿದ್ದಿದೆ. ಹೈ ವೋಲ್ಟೇಜ್ ವಿದ್ಯುತ್ ಇದೆ ಎಂಬುದನ್ನು ಲೆಕ್ಕಿಸದೆ ಟ್ರ್ಯಾಕ್ಗೆ ಹಾರಿದ್ದಾರೆ. ಇದನ್ನು ಗಮನಿಸಿದ ಮೆಟ್ರೋ ಸಿಬ್ಬಂದಿ ತಕ್ಷಣ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿದ್ದಾರೆ. ಬಳಿಕ ಮಹಿಳೆಯನ್ನು ಮೇಲಕ್ಕೆತ್ತಲಾಗಿದೆ. ಇದರ ಪರಿಣಾಮವಾಗಿ ಪೀಕ್ ಅವರ್ನಲ್ಲಿ 15 ನಿಮಿಷಗಳ ಕಾಲ ರೈಲು ಸಂಚಾರ ಸ್ಥಗಿತಗೊಂಡಿತ್ತು.
ಪ್ರಕರಣ 2
ದಿನಾಂಕ 5, ಜನವರಿ 2024
ಸ್ಥಳ: ಜಾಲಹಳ್ಳಿ ಮೆಟ್ರೋ ನಿಲ್ದಾಣ
ಘಟನೆ: ಮೆಟ್ರೋ ಹಳಿಗೆ ಹಾರಿ ಯುವಕನಿಂದ ಆತ್ಮಹತ್ಯೆಗೆ ಯತ್ನ, ಐಸಿಯುನಲ್ಲಿ ಚಿಕಿತ್ಸೆ
ಜಾಲಹಳ್ಳಿ ಮೆಟ್ರೋ ಹಳಿ ಮೇಲೆ ಜಿಗಿದಿ ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದ ಘಟನೆ ಜನವರಿ 5 ರಂದು ನಡೆದಿತ್ತು. ಕೇರಳ ಮೂಲದ 23 ವರ್ಷದ ಶ್ಯಾರೊನ್ ಎಂಬ ಯುವಕ ಆತ್ಮಹತ್ಯೆಗೆ ಯತ್ನಿಸಿದವನಾಗಿದ್ದಾನೆ.
ಸ್ನೇಹಿತನ ಜೊತೆ ಜಾಲಹಳ್ಳಿ ಮೆಟ್ರೋ ನಿಲ್ದಾಣಕ್ಕೆ ಬಂದಿದ್ದ ಶ್ಯಾರೊನ್ ಮೆಜೆಸ್ಟಿಕ್ಗೆ ಹೋಗಲು ಟಿಕೆಟ್ ಸಹ ಪಡೆದುಕೊಂಡಿದ್ದ. ಮೆಟ್ರೊ ಟ್ರೈನ್ ಬಂದಾಗ ಏಕಾಏಕಿ ಹಳಿಗೆ ಶ್ಯಾರೊನ್ ಹಾರಿದ್ದಾನೆ. ಈ ವೇಳೆ ಮೆಟ್ರೋ ಟ್ರೈನ್ ಡಿಕ್ಕಿ ಹೊಡೆದಿತ್ತು. ಈ ಘಟನೆಯಿಂದ ಹಸಿರು ಮಾರ್ಗದಲ್ಲಿ ಕೆಲಕಾಲ ಮೆಟ್ರೋ ಸಂಚಾರ ಸ್ಥಗಿತವಾಗಿತ್ತು.
ಇದನ್ನೂ ಓದಿ: ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಪ್ಲಾಟ್ಫಾರ್ಮ್ ಸ್ಕ್ರೀನ್ ಡೋರ್, ಗೇಟ್ ಅಳವಡಿಕೆ ಒತ್ತಡ
ಪ್ರಕರಣ 3
ದಿನಾಂಕ 6, ಜನವರಿ 2024
ಸ್ಥಳ: ಜೆ.ಪಿ.ನಗರ ಮೆಟ್ರೋ ನಿಲ್ದಾಣ‘
ಘಟನೆ: ಮೆಟ್ರೋ ಟ್ರ್ಯಾಕ್ ಮೇಲೆ ಬೆಕ್ಕು ಪ್ರತ್ಯಕ್ಷ, ಆತಂಕಗೊಂಡ ಪ್ರಯಾಣಿಕರು
ಜೆಪಿ ನಗರ ಮೆಟ್ರೋ ಟ್ರ್ಯಾಕ್‌ನಲ್ಲಿ ಕಪ್ಪು ಬಣ್ಣದ ಬೆಕ್ಕು ಕಾಣಿಸಿಕೊಂಡಿತ್ತು. ಪ್ರಯಾಣಿಕರು ಆತಂಕಗೊಂಡಿರುವಂತಹ ಘಟನೆ ಜೆ.ಪಿ.ನಗರ ಮೆಟ್ರೋ ನಿಲ್ದಾಣದಲ್ಲಿ ಕಂಡುಬಂದಿತ್ತು. ಕೂಡಲೇ ಪ್ರಯಾಣಿಕರು ಸಿಬ್ಬಂದಿ ಗಮನಕ್ಕೆ ತಂದರು. ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಟ್ರ್ಯಾಕ್ನಲ್ಲಿದ್ದ ಬೆಕ್ಕನ್ನ ಓಡಿಸಲು ಸಿಬ್ಬಂದಿಗಳು ಮುಂದಾದರು. ಮೆಟ್ರೋ ಸಿಬ್ಬಂದಿ ನಡೆಗೆ ಎಕ್ಸ್ ಎಂಬ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿತ್ತು.
ಪ್ರಕರಣ 4
ದಿನಾಂಕ 12, ಮಾರ್ಚ್ 2024
ಸ್ಥಳ: ಜ್ಞಾನ ಭಾರತಿ ಮೆಟ್ರೋ ನಿಲ್ದಾಣ
ಘಟನೆ: ವಯಾಡಕ್ಟ್‌ನಲ್ಲಿ ಕಾಣಿಸಿಕೊಂಡಿದ್ದ ಅಪರಿಚಿತ ವ್ಯಕ್ತಿ
ಜ್ಞಾನಭಾರತಿ ಮೆಟ್ರೋ ಸ್ಟೇಷನ್ ನಿಂದ ಪಟ್ಟಣಗೆರೆ ಮೆಟ್ರೋ ಸ್ಟೇಷನ್ ನಡುವಿನ ಮೆಟ್ರೋ ಹಳಿಯ ಮೇಲಿನ ವಯಾಡಕ್ಟ್‌ನಲ್ಲಿ ವ್ಯಕ್ತಿಯೊಬ್ಬನ ಚಲನವಲನ ಕಂಡು ಬಂದಿತ್ತು. ಇದರಿಂದಾಗಿ ಹಲವು ಮೆಟ್ರೋ ರೈಲುಗಳ ಸಂಚಾರವನ್ನೇ ಸ್ಥಗಿತಗೊಳಿಸುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ ಸಾವಿರಾರು ಜನ ಪರದಾಡಿದ ಘಟನೆ ನಡೆದಿತ್ತು.
ಪ್ರಕರಣ 5
ದಿನಾಂಕ 21, ಮಾರ್ಚ್ 2024
ಸ್ಥಳ : ಅತ್ತಿಗುಪ್ಪೆ
ಸಮಯ: 2.10 pm
ಘಟನೆ: ಮೆಟ್ರೋ ಹಳಿ ಮೇಲೆ ಬಿದ್ದು ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ ವಿದ್ಯಾರ್ಥಿ
ನಮ್ಮ ಮೆಟ್ರೋ ಟ್ರ್ಯಾಕ್ ಮೇಲೆ ಜಿಗಿದು ವಿದ್ಯಾರ್ಥಿ ಧ್ರುವ್ (19) ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದಲ್ಲಿ ಮಾ.21 ರಂದು ಮಧ್ಯಾಹ್ನ ನಡೆದಿದೆ. ನ್ಯಾಷನಲ್ ಲಾ ಕಾಲೇಜಿನಲ್ಲಿ ಮೊದಲನೇ ವರ್ಷ ವ್ಯಾಸಂಗ ಮಾಡುತ್ತಿದ್ದ ಧ್ರುವ್ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಎನ್ನುವ ಪ್ರಾಥಮಿಕ ಮಾಹಿತಿ ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಚಂದ್ರಾಲೇಔಟ್ ಠಾಣೆಯಲ್ಲಿ ಯುಡಿಆರ್ (ಅಸಹಜ ಸಾವು) ಪ್ರಕರಣ ದಾಖಲು ಮಾಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:10 am, Fri, 22 March 24