ಬೀದಿ ನಾಯಿ ಮೇಲೆ ಕಾರು ಹರಿಸಿದ ದುರುಳ; ಒದ್ದಾಡಿ ಪ್ರಾಣ ಬಿಟ್ಟ ನಾಯಿ

ಮುತ್ತುರಾಯ ನಗರದ ಸಪ್ತಗಿರಿ ಲೇಔಟ್​ನಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ರಸ್ತೆಯಲ್ಲಿ ಮಲಗಿದ್ದ ನಾಯಿ ಮೇಲೆ ದುರುಳನೊಬ್ಬ ಕಾರು ಚಲಾಯಿಸಿದ್ದಾನೆ. ಮೂಕ ನಾಯಿಯ ರೋಧನೆ ಅಯ್ಯೋ ಎನ್ನುವಂತಿದೆ.

ಬೀದಿ ನಾಯಿ ಮೇಲೆ ಕಾರು ಹರಿಸಿದ ದುರುಳ; ಒದ್ದಾಡಿ ಪ್ರಾಣ ಬಿಟ್ಟ ನಾಯಿ
ಬೆಂಗಳೂರು: ರಸ್ತೆ ಮೇಲೆ ಮಲಗಿದ್ದ ನಾಯಿ ಮೇಲೆ ಕಾರು ಚಲಾಯಿಸಿದ ದುಷ್ಕರ್ಮಿ
Follow us
TV9 Web
| Updated By: Rakesh Nayak Manchi

Updated on:Jan 09, 2023 | 2:00 PM

ಬೆಂಗಳೂರು: ನಗರದಲ್ಲಿ ನಡೆದ ಈ ಒಂದು ಕೃತ್ಯ ಇಡೀ ಮನುಕುಲವೇ ತಲೆತಗ್ಗಿಸುವಂತಾಗಿದೆ. ಹಾರ್ನ್ ಹಾಕಿದರೂ ಆ ನಾಯಿ ಎದ್ದು ಹೋಗುತ್ತಿತ್ತು ಅಥವಾ 10 ಸೆಕೆಂಡ್ ಕಾದರೂ ಸಾಕಿತ್ತು ಆ ನಾಯಿ ರಸ್ತೆ ಬಿಟ್ಟು ಬದಿಗೆ ಹೋಗುತ್ತಿತ್ತು. ಆದರೆ ಈ ದುರಳ ಮಾತ್ರ ರಸ್ತೆಯಲ್ಲಿ ಮಲಗಿದ್ದ ನಾಯಿಯನ್ನು ನೋಡಿ ವೇಗವಾಗಿ ಚಲಾಯಿಸಿ ಅದರ ಮೇಲೆ ಹರಿಸಿ (Miscreant drove car over street dog) ಪರಾರಿಯಾಗಿದ್ದಾನೆ. ಹೌದು, ಇಂತಹ ಅಮಾನವೀಯ ಘಟನೆ ಜ್ಞಾನಭಾರತಿ ಪೊಲೀಸ್ ಠಾಣೆ (Jnanabharathi police station) ವ್ಯಾಪ್ತಿಯ ಮುತ್ತುರಾಯ ನಗರದ ಸಪ್ತಗಿರಿ ಲೇಔಟ್​ನಲ್ಲಿ ನಡೆದಿದೆ.

ಸಪ್ತಗಿರಿ ಲೇಔಟ್​ನಲ್ಲಿ ಬೀದಿ ನಾಯಿಯೊಂದು ತನ್ನಷ್ಟಕ್ಕೆ ಮಲಗಿಕೊಂಡಿತ್ತು. ಆದರೆ ಪಕ್ಕದ ರಸ್ತೆಯಲ್ಲಿ KA 05 MP 5836 ಸಂಖ್ಯೆಯ ಕಾರು ಚಲಾಯಿಸಿಕೊಂಡು ಬಂದ ವ್ಯಕ್ತಿ ಉದ್ದೇಶಪೂರ್ವಕವಾಗಿ ನಾಯಿ ಮೇಲೆ ಕಾರು ಹರಿಸಿದ್ದಾನೆ. ಜನವರಿ 7ರಂದು ಬೆಳಗ್ಗೆ 11.10ರ ವೇಳೆಗೆ ನಡೆದಿರುವ ಘಟನೆ ಇದಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಜಿ ಸುಬ್ರಮಣ್ಯ ಕಾರು ಮಾಲೀಕನ ಹೆಸರಾಗಿದೆ.

ಇದನ್ನೂ ಓದಿ: Delhi Accident: ಕಾರಿಗೆ ಸಿಲುಕಿಕೊಂಡಿದ್ದ ಯುವತಿ ಮೃತದೇಹ ಬೇರ್ಪಡಿಸಲು ಅಂದು ಯುವಕರು ಮಾಡಿದ್ದೇನು?

ಘಟನೆಯ ದೃಶ್ಯಾವಳಿಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ವಿಡಿಯೋದಲ್ಲಿ ಕಾಣುವಂತೆ, ಕಾರು ಬರುವುದು ತನ್ನ ಅರಿವಿಗೆ ಬರುತ್ತಿದ್ದಂತೆ ರಸ್ತೆಯಿಂದ ಎದ್ದು ಬದಿಗೆ ಹೋಗಲು ನಾಯಿ ಮುಂದಾಗಿದೆ. ಆದರೆ ನಾಯಿ ಎದ್ದು ಹೋಗಲು ಯತ್ನಿಸುತ್ತಿರುವುದನ್ನು ನೋಡಿದ ಕೂಡಲೇ ದುಷ್ಕರ್ಮಿ ಕಾರಿನ ವೇಗ ಹೆಚ್ಚಿಸಿ ಅದರ ಸೊಂಟದ ಮೇಲೆ ಹರಿಸಿದ್ದಾನೆ. ಕಾರಿನ ಚಕ್ರಕ್ಕೆ ಸಿಕ್ಕು ಒದ್ದಾಡಿದ ನಾಯಿ ಕೊನೆಗೆ ಪ್ರಾಣಬಿಟ್ಟಿದೆ. ಘಟನೆ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಂತಹ ಘಟನೆಗಳು ಇದು ಮೊದಲೇನಲ್ಲ, ಈ ಹಿಂದೆಯೂ ನಡೆದಿವೆ. ಮಲಗಿದ್ದ ಬೀದಿ ನಾಯಿಯ ಮೇಲೆ ದುಷ್ಕರ್ಮಿ ಕಾರು ಹತ್ತಿಸಿರುವಂತಹ ಅಮಾನವೀಯ ಕೃತ್ಯ ಬೆಂಗಳೂರಿನ ಜಯನಗರ 9ನೇ ಬ್ಲ್ಯಾಕ್​ನಲ್ಲಿ ನಡೆದಿತ್ತು. 2022ರ  ಮೇ 27ರಂದು ನಡೆದಿರುವ ಘಟನೆ ಇದಾಗಿದೆ. ಇದಕ್ಕೂ ಮುನ್ನ ಅಂದರೆ ಫೆಬ್ರವರಿ 1ರಂದು ಬೀದಿ ನಾಯಿ ಲಾರಾ ಮೇಲೆ ಆದಿಕೇಶವಲು ಮೊಮ್ಮಗ ಕಾರು ಹತ್ತಿಸಿದ್ದನು. ಘಟನೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ನಾಯಿ ಒದ್ದಾಡಿಕೊಂಡೇ ಓಡಿತ್ತು. ಬಳಿಕ ನಾಯಿಯ ಮೃತದೇಹ ಪತ್ತೆಯಾಗಿತ್ತು. ಆಂಬುಲೆನ್ಸ್ ಮೂಲಕ ಸುಮ್ಮನಹಳ್ಳಿ ಚಿತಾಗಾರಕ್ಕೆ ಶ್ವಾನ ಲಾರಾ ಮೃತದೇಹವನ್ನು ತಂದು ಅಂತ್ಯಕ್ರಿಯೆ ಮಾಡಲಾಯಿತು. ಅಂತ್ಯಕ್ರಿಯೆಯಲ್ಲಿ ಸ್ಯಾಂಡಲ್​ವುಡ್​ನ ನಟಿ ರಮ್ಯಾ ಭಾಗಿಯಾಗಿ ಕಂಬನಿ ಮಿಡಿದಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:00 pm, Mon, 9 January 23