ಬೆಂಗಳೂರು, ಮಾರ್ಚ್ 19: ನಗರತ್ಪೇಟೆಯಲ್ಲಿ (Nagarathpet) ಮೊಬೈಲ್ ಅಂಗಡಿಯಲ್ಲಿ ಹನುಮಾನ್ ಚಾಲಿಸಾ (Hanuman Chalisa) ಹಾಡು ಹಾಕಿದ್ದಕ್ಕೆ ಯುವಕನ ಮೇಲೆ ಹಲ್ಲೆ ನಡೆಸಿದ್ದನ್ನು ಖಂಡಿಸಿ ಘಟನಾ ಸ್ಥಳದಲ್ಲಿ ಹನುಮ ಭಕ್ತರು ರ್‍ಯಾಲಿ ನಡೆಸಲು ನಿರ್ಧರಿಸಿದ್ದಾರೆ. ಈ ರ್‍ಯಾಲಿಯಲ್ಲಿ ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಸಿ.ಕೆ ರಾಮಮೂರ್ತಿ, ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ (Tejasvi Surya) , ಬಿಜೆಪಿ ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್ ಹರೀಶ್, ಬಿಜೆಪಿ ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ ಸೇರಿದಂತೆ ಶಾಸಕರು ಹಾಗೂ ಹಲವು ನಾಯಕರು ಮತ್ತು ಹನುಮ ಭಕ್ತರು ಪಾಲ್ಗೊಳ್ಳಲಿದ್ದಾರೆ.
ಈ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಈಗಾಗಲೇ ಘಟನಾ ಸ್ಥಳದಲ್ಲಿ ಹಿಂದೂ ಹನುಮ ಭಕ್ತರು ಜಮಾಯಿಸ್ತಿದ್ದಾರೆ. ಜೊತೆಗೆ ಸ್ಥಳಕ್ಕೆ ರಾಜಾಜಿನಗರದ ಬಿಜೆಪಿ ಶಾಸಕ ಸುರೇಶ್ ಕುಮಾರ್ ಭೇಟಿ ನೀಡಿದ್ದಾರೆ. ಹಲ್ಲೆಗೊಳಗಾದ ಯುವಕ ಮುಖೇಶ್ ಅಂಗಡಿ ಕೃಷ್ಣ ಟೆಲಿಕಾಂ ಮುಂಭಾಗ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಜಮಾವಣೆಯಾಗಿದ್ದಾರೆ.
ಹಲ್ಲೆಗೊಳಗಾದ ಮುಖೇಶ್ನನ್ನು ಪೊಲೀಸರು ಜೀಪ್ನಲ್ಲಿ ಕರೆದೊಯ್ಯಲು ಮುಂದಾಗಿದ್ದರು. ಈ ವೇಳೆ ಪೊಲೀಸ್ ವಾಹನದ ಮುಂದೆ ನಿಂತು ಶಾಸಕ ಸುರೇಶ್ಕುಮಾರ್ ಪ್ರತಿಭಟನೆ ನಡೆಸಿದರು. ಈ ವೇಳೆ ತಳ್ಳಾಟ, ನೂಕಾಟ ನಡೆದಿದ್ದು, ಶಾಸಕ ಸುರೇಶ್ಕುಮಾರ್ ಮತ್ತು ಪೊಲೀಸರ ನಡುವೆ ವಾಗ್ವಾದ ನಡೆಯಿತು. ನೀತಿ ಸಂಹಿತೆ ಜಾರಿಯಾಗಿದೆ ಪ್ರತಿಭಟನೆ ಮಾಡಲು ಅವಕಾಶ ಇಲ್ಲ ಎಂದು ಪೊಲೀಸರು ಹೇಳಿದರು. ಇದಕ್ಕೆ ಹಿಂದೂ ಸಂಘಟನೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಕೊನೆಗೆ ಹಿಂದೂ ಕಾರ್ಯಕರ್ತರು ಮುಖೇಶ್ನನ್ನು ಪೊಲೀಸ್ ವಾಹನದಿಂದ ಕೆಳಗೆ ಇಳಿಸಿಕೊಂಡರು.
ಇದನ್ನೂ ಓದಿ: ಮೊಬೈಲ್ ಶಾಪ್ನಲ್ಲಿ ಹನುಮಾನ್ ಚಾಲೀಸಾ ಹಾಕಿದ್ದಕ್ಕೆ ಯುವಕನ ಮೇಲೆ ಹಲ್ಲೆ ಮಾಡಿದ್ದ ಐವರು ಅರೆಸ್ಟ್
ಅಸಹನೆ ಅನ್ನೋದು ಈ ಮಟ್ಟಕ್ಕೆ ಹೋಗಬಾರದು. ಇದು ಉದ್ದೇಶ ಪೂರ್ವಕವಾಗಿ ಮಾಡಿರುವ ಹಲ್ಲೆಯಾಗಿದೆ. ತನ್ನ ಪಾಡಿಗೆ ಇದ್ದ ಯುವಕನ ಮೇಲೆ ಹೀಗೆ ಹಲ್ಲೆ ಮಾಡಿದ್ದಾರೆ. ಒಟ್ಟಾರೆಯಾಗಿ ಸಮಾಜದ ಶಾಂತಿ ಕದಡಿದಂತಾಗಿದೆ. ಇದೊಂದು ನೆಪ, ಉದ್ದೇಶಪೂರ್ವಕವಾಕವಾಗಿ ಮಾಡಿದಂತಿದೆ. ಹಲ್ಲೆ ಮಾಡಿದವರಿಗೆ ಸೂಕ್ತ ಶಿಕ್ಷೆ ಆಗಬೇಕು. ಆ ಸಮಯದಲ್ಲಿ ಆತನ ರಕ್ಷಣೆಗೂ ಯಾರು ಇರಲಿಲ್ಲ ಅಂತ ಕೇಳ್ಪಟ್ಟೆ. ಎಲ್ಲ ಸಮುದಾಯದವರು ಈ ವಿಷಯವಾಗಿ ಮುಂದೆ ಬರಬೇಕು. ಈ ರೀತಿಯಾಗಿ ನಡೆಯುತ್ತಿರುವ ಸರಣಿ ಪ್ರಕರಣಗಳ ಬಗ್ಗೆ ಪೊಲೀಸ್ ಇಲಾಖೆಯವರು ಹೆಚ್ಚು ಕಾರ್ಯ ಪ್ರವೃತ್ತರಾಗಬೇಕು. ಇವರೆಲ್ಲ ಬೇಕು ಅಂತ ಈ ರೀತಿ ಮಾಡುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಸುರೇಶ್ ಕುಮಾರ್ ವಾಗ್ದಾಳಿ ಮಾಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ