ಬೆಂಗಳೂರಿಗರೇ ಇನ್ಮುಂದೆ 18 ಗಂಟೆಯಲ್ಲಿ ಮುಂಬೈ ತಲುಪಬಹುದು! ಅದು ಹೇಗೆ ಗೊತ್ತಾ?

ಬೆಂಗಳೂರು-ಮುಂಬೈ ನಡುವಿನ ಪ್ರಯಾಣದ ಅವಧಿಯನ್ನು ಗಣನೀಯವಾಗಿ ಕಡಿತಗೊಳಿಸಲು ಭಾರತೀಯ ರೈಲ್ವೆ ದುರಂತೋ ಎಕ್ಸ್‌ಪ್ರೆಸ್ ಆರಂಭಿಸುವ ಚಿಂತನೆ ನಡೆಸಿದೆ. ಇದು ಕಾರ್ಯರೂಪಕ್ಕೆ ಬಂದರೆ, 24 ಗಂಟೆಗಳ ಬದಲು 18 ಗಂಟೆಗಳಲ್ಲಿ ಮುಂಬೈ ತಲುಪಬಹುದು. ಕಡಿಮೆ ನಿಲ್ದಾಣಗಳು, ವೇಗದ ಸಂಚಾರ ಹಾಗೂ ಟಿಕೆಟ್‌ನಲ್ಲಿ ಊಟದ ಸೌಲಭ್ಯ ಈ ರೈಲಿನ ವಿಶೇಷತೆಯಾಗಿರಲಿದೆ.

ಬೆಂಗಳೂರಿಗರೇ ಇನ್ಮುಂದೆ 18 ಗಂಟೆಯಲ್ಲಿ ಮುಂಬೈ  ತಲುಪಬಹುದು! ಅದು ಹೇಗೆ ಗೊತ್ತಾ?
ಬೆಂಗಳೂರು-ಮುಂಬೈ ಡುರೊಂಟೊ ಎಕ್ಸ್‌ಪ್ರೆಸ್‌
Edited By:

Updated on: Jan 16, 2026 | 12:10 PM

ಬೆಂಗಳೂರು, ಜನವರಿ 16: ಬೆಂಗಳೂರು–ಮುಂಬೈ ನಡುವೆ ಪ್ರಯಾಣಿಸುವ ಪ್ರಯಾಣಿಕರಿಗೆ ಭಾರತೀಯ ರೈಲ್ವೆ ಶೀಘ್ರದಲ್ಲೇ ಸಿಹಿ ಸುದ್ದಿ ನೀಡುವ ಸಾಧ್ಯತೆ ಇದೆ. ಎರಡು ಮಹಾನಗರಗಳ ನಡುವಿನ ಪ್ರಯಾಣದ ಅವಧಿಯನ್ನು ಗಣನೀಯವಾಗಿ ಕಡಿತಗೊಳಿಸುವ ಉದ್ದೇಶದಿಂದ ದುರಂತೋ ಎಕ್ಸ್‌ಪ್ರೆಸ್ ರೈಲು ಆರಂಭಿಸುವ ಕುರಿತು ರೈಲ್ವೆ ಮಂಡಳಿ ಚಿಂತನೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ. ಈ ರೈಲು ಸೇವೆ ಆರಂಭವಾದರೆ, ಬೆಂಗಳೂರು–ಮುಂಬೈ ಪ್ರಯಾಣದ ಸಮಯ ಸುಮಾರು 18 ಗಂಟೆಗಳವರೆಗೆ ಇಳಿಯುವ ಸಾಧ್ಯತೆ ಇದೆ.

ಏನೆಲ್ಲಾ ಸೌಲಭ್ಯ ನೀಡಲಿದೆ ದುರಂತೋ ಎಕ್ಸ್‌ಪ್ರೆಸ್‌?

ಇತ್ತೀಚೆಗೆ ಬೆಂಗಳೂರು ಎಸ್‌ಎಂವಿಟಿ ಮತ್ತು ಮುಂಬೈನ ಲೋಕಮಾನ್ಯ ತಿಲಕ್ ಟರ್ಮಿನಸ್ (LTT) ನಡುವೆ ವಾರಕ್ಕೆ ಎರಡು ಬಾರಿ ಸಂಚರಿಸುವ ಹೊಸ ಸೂಪರ್‌ಫಾಸ್ಟ್ ರೈಲು ಸೇವೆಗೆ ಅನುಮೋದನೆ ದೊರೆತಿತ್ತು. 1,209 ಕಿಲೋಮೀಟರ್ ದೂರವನ್ನು ಈ ರೈಲು ಕ್ರಮಿಸಿದರೂ, ಸುಮಾರು 24 ಗಂಟೆಗಳ ಪ್ರಯಾಣ ಸಮಯ ಹೊಂದಿರುವುದರಿಂದ ಪ್ರಯಾಣಿಕರ ಅಸಮಾಧಾನಕ್ಕೆ ಕಾರಣವಾಗಿತ್ತು. ಡಿಸೆಂಬರ್ 9 ರಂದು ಆರಂಭವಾದ ಈ ರೈಲು ಹುಬ್ಬಳ್ಳಿ, ಪುಣೆ ಸೇರಿದಂತೆ 14 ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿದೆ.

ಈ ಹಿನ್ನೆಲೆ, ಕೆಎಸ್‌ಆರ್ ಬೆಂಗಳೂರು ಮತ್ತು ಸಿಎಸ್ಎಂಟಿ ಮುಂಬೈ ನಡುವೆ ದುರಂತೋ ಎಕ್ಸ್‌ಪ್ರೆಸ್ ಆರಂಭಿಸುವ ಪ್ರಸ್ತಾವನೆಯನ್ನು ಪರಿಶೀಲಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ತುಮಕೂರು, ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿ, ಮೀರಜ್ ಹಾಗೂ ಪುಣೆ ಮಾರ್ಗವಾಗಿ ಈ ರೈಲು ಸಂಚರಿಸುವ ಸಾಧ್ಯತೆ ಇದೆ. ನಿಲ್ದಾಣದ ಸಂಖ್ಯೆ ಕಡಿಮೆಯಿದ್ದು, ವೇಗದ ಸಂಚಾರ ಹಾಗೂ ಟಿಕೆಟ್‌ ಜೊತೆ ಊಟದ ಸೌಲಭ್ಯವೂ ಇರುವ ದುರಂತೋ ರೈಲುಗಳು ದೂರ ಪ್ರಯಾಣಕ್ಕೆ ಹೇಳಿ ಮಾಡಿಸಿದ್ದಾಗಿದೆ.

ತಾತ್ಕಾಲಿಕ ವೇಳಾಪಟ್ಟಿ

ರೈಲು ಸಂಜೆ 4.30ಕ್ಕೆ ಬೆಂಗಳೂರಿನಿಂದ ಹೊರಟು ಮರುದಿನ ಬೆಳಿಗ್ಗೆ 10.30ಕ್ಕೆ ಮುಂಬೈ ತಲುಪಬಹುದು. 3ಎಸಿ ಟಿಕೆಟ್ ದರ ಸುಮಾರು 2,500 ರೂ. ಇರಲಿದೆ ಎಂದು ಅಂದಾಜಿಸಲಾಗಿದೆ. ಆದರೆ ಈ ಬಗ್ಗೆ ರೈಲ್ವೆ ಅಧಿಕಾರಿಗಳು ಇನ್ನೂ ಅಧಿಕೃತ ಘೋಷಣೆ ಮಾಡಿಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 11:29 am, Fri, 16 January 26