ಬೆಂಗಳೂರು-ಮೈಸೂರು ಪಾದಯಾತ್ರೆ: ಜೆಡಿಎಸ್ ನಾಯಕರಿಗೊಂದು ವಿಶೇಷ ಮನವಿ ಮಾಡಿದ ಅಶೋಕ್
Bangalore mysore Padayatra: ಮೈಸೂರು ಪಾದಯಾತ್ರೆಯಲ್ಲಿ ನಮ್ಮ ಪಕ್ಷದವರು(ಜೆಡಿಎಸ್) ಯಾರು ಭಾಗಿಯಾಗುವುದಿಲ್ಲ ಎಂದು ಕುಮಾರಸ್ವಾಮಿ ಅವರು ಖಡಕ್ ಆಗಿ ಹೇಳಿದ್ದರು. ಇದೀಗ ಬಿಜೆಪಿ ಹೈಕಮಾಂಡ್ ಹೆಚ್ಡಿಕೆ ಮನವಲಿಸುವಲ್ಲಿ ಯಶಸ್ವಿಯಾಗಿದೆ. ಆದರೆ, ಈ ಪಾದಯಾತ್ರೆಯಲ್ಲಿ ಪ್ರೀತಮ್ ಗೌಡ ಭಾಗಿಯಾಗಬಾರದು, ಹಾಗಿದ್ದರೆ ನಾವು ಬರುತ್ತೇವೆ ಎಂದು ಷರತ್ತು ಹಾಕಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ವಿಪಕ್ಷ ನಾಯಕ ಆರ್. ಅಶೋಕ, ‘ಜೆಡಿಎಸ್ ನಾಯಕರಿಗೆ ಮನವಿ ಮಾಡುತ್ತೇನೆ, ಪಾದಯಾತ್ರೆಗೆ ಬನ್ನಿ ಎಂದಿದ್ದಾರೆ.
ಬೆಂಗಳೂರು, ಆ.01: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ದ ಮುಗಿಬಿದ್ದಿರುವ ಉಭಯ ಪಕ್ಷಗಳು, ಆಗಸ್ಟ್ 3 ರಂದು ಬೆಂಗಳೂರಿನಿಂದ ಮೈಸೂರಿನವರೆಗೆ ಪಾದಯಾತ್ರೆ ನಡೆಸಲು ಮುಂದಾಗಿದೆ. ಆದರೆ, ಈ ಪಾದಯಾತ್ರೆಯಲ್ಲಿ ನಮ್ಮ ಪಕ್ಷದವರು(ಜೆಡಿಎಸ್) ಯಾರು ಭಾಗಿಯಾಗುವುದಿಲ್ಲ ಎಂದು ಕುಮಾರಸ್ವಾಮಿ ಅವರು ಖಡಕ್ ಆಗಿ ಹೇಳಿದ್ದರು. ಇದೀಗ ಬಿಜೆಪಿ ಹೈಕಮಾಂಡ್ ಹೆಚ್ಡಿಕೆ ಮನವಲಿಸುವಲ್ಲಿ ಯಶಸ್ವಿಯಾಗಿದೆ. ಆದರೆ, ಈ ಪಾದಯಾತ್ರೆಯಲ್ಲಿ ಪ್ರೀತಮ್ ಗೌಡ ಭಾಗಿಯಾಗಬಾರದು, ಹಾಗಿದ್ದರೆ ನಾವು ಬರುತ್ತೇವೆ ಎಂದು ಷರತ್ತು ಹಾಕಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ವಿಪಕ್ಷ ನಾಯಕ ಆರ್. ಅಶೋಕ(R ashoka), ‘ಜೆಡಿಎಸ್ ನಾಯಕರಿಗೆ ಮನವಿ ಮಾಡುತ್ತೇನೆ, ಇದಕ್ಕೆ ಲಾಜಿಕಲ್ ಎಂಡ್ ಕೊಡಬೇಕಿದೆ. ಅದಕ್ಕೆ ಪಾದಯಾತ್ರೆಗೆ ಬನ್ನಿ ಎಂದಿದ್ದಾರೆ.
ಇನ್ನು ಈ ವಿಚಾರವಾಗಿ ಕೇಂದ್ರದ ನಾಯಕರು ನಿನ್ನೆ ಫೋನ್ನಲ್ಲಿ ಮಾತನಾಡಿದರು. ಪಾದಯಾತ್ರೆ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ. ವಾಲ್ಮೀಕಿ ಹಗರಣ 187 ರೂ. ಕೋಟಿ, ಮುಡಾ 3 ಸಾವಿರ ಕೋಟಿ ಹಗರಣ ಆಗಿದೆ. ದರೋಡೆ ಮಾಡಿರುವ ಸರ್ಕಾರದ ವಿರುದ್ಧ ಪಾದಯಾತ್ರೆ ಒಳ್ಳೆಯದು. ಸಂಸತ್‌ನಲ್ಲೂ ಇದು ಚರ್ಚೆಯಾಗಿ ದೇಶದ ಸುದ್ದಿಯಾಗಿದೆ. ನಾನೂ ಹೆಚ್ಡಿಕೆ ಅವರೊಟ್ಟಿಗೆ ಮಾತನಾಡಿ ಬರುವಂತೆ ಮನವಿ ಮಾಡುತ್ತೇನೆ ಎಂದರು.
ಇದನ್ನೂ ಓದಿ:ಬಿಜೆಪಿ ಪಾದಯಾತ್ರೆಗೆ ಜೆಡಿಎಸ್ ಅಪಸ್ವರ: ಕುಮಾರಸ್ವಾಮಿ ಹೇಳಿಕೆಗೆ ಅಶೋಕ್ ಹೇಳಿದ್ದಿಷ್ಟು
ಪ್ರೀತಮ್ ಗೌಡ ವಿಚಾರ ಕುಮಾರಸ್ವಾಮಿ ಮಾತಾಡಿರುವುದು ನೋಡಿದೆ, ಸಣ್ಣ ಪುಟ್ಟ ವಿಚಾರ ಇಟ್ಟುಕೊಂಡು ಪಾದಯಾತ್ರೆ ಮಾಡದೇ ಇರುವುದು ಬೇಡ. ಕುಮಾರಸ್ವಾಮಿ, ನಿಖಿಲ್ ಅವರ ಜೊತೆ ಮಾತಾಡುತ್ತೇನೆ. ಒಟ್ಟಿಗೆ ಪಾದಯಾತ್ರೆ ಮಾಡಿ ಈ ಸರ್ಕಾರಕ್ಕೆ ಪಾಠ ಕಲಿಸೋಣ. ಈ ಮೂಲಕ ಎನ್‌ಡಿಎ ಒಗ್ಗಟ್ಟನ್ನು ತೋರಿಸೋಣ. ಶನಿವಾರ ಪಾದಯಾತ್ರೆ ಮಾಡಬೇಕು ಎಂದು ಪಕ್ಷದಲ್ಲಿ ಚರ್ಚೆ ನಡೆಯುತ್ತಿದೆ. ನನ್ನ ವೈಯಕ್ತಿಕ ಅಭಿಪ್ರಾಯ ಕೂಡಾ ಪಾದಯಾತ್ರೆ ಮಾಡಬೇಕು ಎನ್ನುವುದೇ ಆಗಿದೆ ಎಂದು ಸ್ಪಷ್ಟಪಡಿಸಿದರು.
ಇಡೀ ಕ್ಯಾಬಿನೆಟ್ ಮಂತ್ರಿಗಳು, ಸಿದ್ದರಾಮಯ್ಯ ರಕ್ಷಣೆಗೆ ನಿಂತಿದ್ದಾರೆ
ಇನ್ನು ಈ ಪ್ರಕರಣದಲ್ಲಿ ರಾಜ್ಯ ಸರ್ಕಾರ, ಇಡೀ ಕ್ಯಾಬಿನೆಟ್ ಮಂತ್ರಿಗಳು ಸಿದ್ದರಾಮಯ್ಯ ರಕ್ಷಣೆಗೆ ನಿಂತಿದ್ದಾರೆ. ನೋಟೀಸ್ ಕೊಟ್ಟಾಗ ಅದರ ಹಕ್ಕು ರಕ್ಷಣೆ ಮಾಡಬೇಕು. ಅದನ್ನು ರಾಜ್ಯಪಾಲರು ಮಾಡಿದ್ದಾರೆ. ಹೀಗೇ ಪದ ಬಳಕೆ ಮಾಡಬೇಕು ಎನ್ನುವುದು ಇವರ ಅರ್ಥ. ರಾಜ್ಯಪಾಲರಿಗಿಂತ ಇವರು ದೊಡ್ಡವರು, ರಾಜ್ಯಪಾಲರು ನೋಟೀಸ್ ನೀಡುವಾಗ ತಜ್ಞರ ಅಭಿಪ್ರಾಯ ಪಡೆದೇ ಕೊಟ್ಟಿರುತ್ತಾರೆ. ಕಾನೂನಾತ್ಮಕವಾಗಿ ಏನು ಮಾಡಬೇಕೋ ಮಾಡಿ. ಇದಕ್ಕೆ ಕ್ಯಾಬಿನೆಟ್ ಕರೆದು ರಾಜ್ಯಪಾಲರ ಮೇಲೆ ಒತ್ತಡ ಹಾಕುವ ಕೆಲಸ ಮಾಡಬೇಡಿ.
‘ಇದನ್ನೂ ಓದಿ: ಬಿಜೆಪಿ ಪಾದಯಾತ್ರೆಯಲ್ಲಿ ಭಾಗಿಯಾಗಲು ಹೆಚ್ಡಿ ಕುಮಾರಸ್ವಾಮಿ ಷರತ್ತು, ಹೈಕಮಾಂಡ್ ಗೆ ಖಡಕ್ ಸಂದೇಶ
ರಾಜ್ಯಪಾಲರು ಸಂವಿಧಾನದಲ್ಲಿ ಸುಪ್ರೀಂ, ರಾಜ್ಯಪಾಲರ ಆದೇಶದ ಮೇಲೆ ನಿರ್ಣಯ ಆಗಲಿದೆ. ಅವರಿಗೇ ಕಾನೂನು ಹೇಳಲು ಹೊರಟಿದ್ದೀರಾ?, ಇದರಲ್ಲಿ ಕೇಂದ್ರ ಸರ್ಕಾರ ಹಸ್ತಕ್ಷೇಪ ಮಾಡುತ್ತಾರೆ ಎನ್ನುವುದು ಸರಿಯಲ್ಲ. ನೀವು ತಪ್ಪೇ ಮಾಡಿಲ್ಲ ಅಂದ್ರೆ ವಿಧಾನಸಭೆಯಲ್ಲಿ ಚರ್ಚೆಗೆ ಅವಕಾಶ ಕೊಡಬಹುದಿತ್ತು. ಇಲ್ಲವೇ ಸದನದಲ್ಲೇ ಕಡತ ಇಡಬಹುದಿತ್ತು. ಅದು ಬಿಟ್ಟು ಓಡಿ ಹೋಗುವ ಕೆಲಸ ಮಾಡಿದರು. ತಪ್ಪು ಮಾಡಿಲ್ಲ ಅಂದ್ರೆ ಹೆದರುವ ಅವಶ್ಯಕತೆ ಇಲ್ಲ. ಯಡಿಯೂರಪ್ಪ, ಜನಾರ್ದನ ರೆಡ್ಡಿ ಮೇಲೆ ಕೇಸ್ ಹಾಕಿದಾಗ ಅದು ಕೂಡ ಖಾಸಗಿ ದೂರು ಆಗಿತ್ತು. ಅಂದು ರಾಜ್ಯಪಾಲರು, ಕೇಂದ್ರ ಸರ್ಕಾರ ಯಾರದ್ದು ಇತ್ತು?. ಕಾಂಗ್ರೆಸ್ ಸರ್ಕಾರ, ಕಾಂಗ್ರೆಸ್ ರಾಜ್ಯಪಾಲರು ಇದ್ದರು. ಅಂದು ನೋಟೀಸ್‌ಗೆ ನಾವು ಹೀಗೆ ಕೊಟ್ಟಿದ್ದು ಸರಿಯಲ್ಲ ಅಂತ ಹೇಳಲಿಲ್ಲ ಎಂದು ಹೇಳಿದರು.
ದೂರು ಕೊಟ್ಟಿರೊದು ಸಾಮಾಜಿಕ ಕಾರ್ಯಕರ್ತ
ಸಿಎಂ ವಿರುದ್ದ ಪ್ರಾಸಿಕ್ಯೂಷನ್ ವಿಚಾರ, ‘ಸಿಎಂ ಹೊರಗಿಟ್ಟು ಕ್ಯಾಬಿನೆಟ್ ಸಭೆ ಮಾಡುತ್ತಿದ್ದಾರೆ ಅಂದರೆ ಲೀಗಲ್ ಆಗಿ ನೋಡುತ್ತಿದ್ದಾರೆ. ಸಿಎಂ ಒಳಗೆ ಇದ್ದುಕೊಂಡು ಸಭೆ ಮಾಡಬೇಕಿತ್ತು. ದೂರು ಕೊಟ್ಟಿರುವುದು ಬಿಜೆಪಿ, ಜೆಡಿಎಸ್ ಪಕ್ಷದವರಲ್ಲ, ಒಬ್ಬ ಸಾಮಾಜಿಕ ಕಾರ್ಯಕರ್ತ. ಸಿಎಂ ಅವರೇ ವಾಲ್ಮೀಕಿ ಹಗರಣ ಒಪ್ಪಿಕೊಂಡಿದ್ದಾರೆ. ಜೊತೆಗೆ ಮುಡಾ ಹಗರಣದಲ್ಲಿಯೂ ಕೂಡ ನ್ಯಾಯಯುತವಾಗಿ ಸೈಟ್ ಪಡೆದಿರುವುದಾಗಿ ಒಪ್ಪಿಕೊಂಡಿದ್ದಾರೆ. ಇದು ಕಾನೂನಿನ ವಿರುದ್ಧವಾಗಿ ಮೇಲ್ನೋಟಕ್ಕೆ ಕಂಡುಬರುತ್ತಿದೆ. ಅರ್ಜಿ ಮೇಲೆ ರಾಜ್ಯಪಾಲರು ಕ್ರಮ ಕೈಗೊಳ್ಳುತ್ತಾರೆ. ಸಿಎಂ ಬಿಟ್ಟು ಕ್ಯಾಬಿನೆಟ್ ಕರೆದಿರುವುದು ಸಿಎಂ ತಪ್ಪು ಮಾಡಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ ಅಂತಾಗಲಿದೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:25 pm, Thu, 1 August 24