
ಬೆಂಗಳೂರು, ನವೆಂಬರ್ 14: ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಲೋಕಾರ್ಪಣೆಗೊಳಿಸಿದ್ದ ನಮ್ಮ ಮೆಟ್ರೋ ಪಿಂಕ್ ಲೈನ್ ಮಾರ್ಗ ಇಂದಿನಿಂದ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಿದೆ. ಕಾಳೇನ ಅಗ್ರಹಾರದಿಂದ ಎಸ್.ಜಿ. ಪಾಳ್ಯ (ಸುದ್ದುಗುಂಟೆಪಾಳ್ಯ)ವರೆಗಿನ ಹೊಸ ಮೆಟ್ರೋ ಮಾರ್ಗದಲ್ಲಿ ಶನಿವಾರ ಬೆಳಗ್ಗೆಯಿಂದಲೇ ವಾಣಿಜ್ಯ ಸಂಚಾರ ಆರಂಭವಾಗಿದೆ. ಪಿಂಕ್ ಲೈನ್ ಮೆಟ್ರೋ ಬಳಸಲು ಯೋಜಿಸುತ್ತಿರುವ ಪ್ರಯಾಣಿಕರಿಗಾಗಿ ಮಾರ್ಗ, ರೈಲು ಸಮಯ, ಸಂಚಾರದ ಫ್ರೀಕ್ವೆನ್ಸಿ ಹಾಗೂ ಟಿಕೆಟ್ ದರದ ಸಂಪೂರ್ಣ ಮಾಹಿತಿ ಇಲ್ಲಿದೆ.
ಹೊಸದಾಗಿ ಆರಂಭವಾಗಿರುವ ಪಿಂಕ್ ಲೈನ್ ಮಾರ್ಗವು ಕಾಳೇನ ಅಗ್ರಹಾರದಿಂದ ಎಸ್.ಜಿ. ಪಾಳ್ಯ (ಸುದ್ದುಗುಂಟೆಪಾಳ್ಯ) ವರೆಗೆ ಸಂಪರ್ಕ ಕಲ್ಪಿಸುತ್ತದೆ. ಈ ಮಾರ್ಗದಲ್ಲಿ ಕಾಳೇನ ಅಗ್ರಹಾರ, ಹುಳಿಮಾವು, ಐಐಎಂಬಿ (ಬಿಳೇಕಹಳ್ಳಿ), ಎನ್.ಎಸ್. ಪಾಳ್ಯ-ಜೆ.ಪಿ.ನಗರ 4ನೇ ಹಂತ, ಜಯದೇವ ಆಸ್ಪತ್ರೆ ಹಾಗೂ ಎಸ್.ಜಿ. ಪಾಳ್ಯ ಸೇರಿದಂತೆ ಪ್ರಮುಖ ನಿಲ್ದಾಣಗಳಿವೆ.
ಪಿಂಕ್ ಲೈನ್‌ನಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಿರುವ ಪೀಕ್ ಅವರ್‌ಗಳಲ್ಲಿ ಪ್ರತಿ 8 ನಿಮಿಷಕ್ಕೊಮ್ಮೆ ರೈಲು ಸಂಚರಿಸಲಿದೆ. ಇತರೆ ಸಮಯದಲ್ಲಿ ಕಾಳೇನ ಅಗ್ರಹಾರ ಮತ್ತು ಎಸ್.ಜಿ. ಪಾಳ್ಯ ನಡುವಿನ ಮಾರ್ಗದಲ್ಲಿ ಪ್ರತಿ 10 ನಿಮಿಷಕ್ಕೊಮ್ಮೆ ರೈಲು ಸೇವೆ ಲಭ್ಯವಿರಲಿದೆ.
ಶನಿವಾರ ಮತ್ತು ಭಾನುವಾರ ರೈಲುಗಳು ಪ್ರತಿ 10 ನಿಮಿಷಕ್ಕೊಮ್ಮೆ ಸಂಚರಿಸಲಿವೆ.
ಇದನ್ನೂ ಓದಿ: ಪಿಂಕ್ಲೈನ್ ಮೆಟ್ರೋ ಸಾರ್ವಜನಿಕ ಸಂಚಾರ ಶುರು: ರೈಲಿನಲ್ಲಿ ಸಂಚಾರ ಮಾಡಿದ ಸಚಿವ ಕೃಷ್ಣಭೈರೇಗೌಡ
ಬೆಂಗಳೂರಿನ ಬನ್ನೇರುಘಟ್ಟ ರಸ್ತೆ ಭಾಗದ ಜನರ ಬಹುದಿನದ ನಿರೀಕ್ಷೆಯಾಗಿದ್ದ ಪಿಂಕ್ ಲೈನ್ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಿರುವುದರಿಂದ, ಈ ಭಾಗದ ನಗರ ಸಂಪರ್ಕ ಮತ್ತು ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಮತ್ತಷ್ಟು ಬಲ ಸಿಗುವ ನಿರೀಕ್ಷೆಯಿದೆ. ಇಂದಿನಿಂದ ಬೆಳಗ್ಗೆಯಿಂದಲೇ ಪ್ರಯಾಣಿಕರು ಹೊಸ ಮಾರ್ಗದಲ್ಲಿ ಮೆಟ್ರೋ ಸೇವೆಯನ್ನು ಬಳಸಲು ಆರಂಭಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ