ಪಿಂಕ್ಲೈನ್ ಮೆಟ್ರೋ ಸಾರ್ವಜನಿಕ ಸಂಚಾರ ಶುರು: ರೈಲಿನಲ್ಲಿ ಸಂಚಾರ ಮಾಡಿದ ಸಚಿವ ಕೃಷ್ಣಭೈರೇಗೌಡ
ಬನ್ನೇರುಘಟ್ಟ ಮಾರ್ಗದ ಜನರ ಬಹುದಿನದ ಕನಸಾಗಿದ್ದ ನಮ್ಮ ಮೆಟ್ರೋ ಪಿಂಕ್ ಲೈನ್ ಸಂಚಾರ ಆರಂಭಗೊಂಡಿದೆ. ಕಾಳೇನ ಅಗ್ರಹಾರದಿಂದ ಸುದ್ದಗುಂಟೆಪಾಳ್ಯದವರೆಗೆ ಸಾಗುವ ಈ ಮಾರ್ಗ, ಸಾರ್ವಜನಿಕರ ಓಡಾಟಕ್ಕೆ ಮುಕ್ತವಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾರ ಉದ್ಘಾಟಿಸಿದ್ದು, ಹೊಸ ಮಾರ್ಗ ಹಲವು ವಿಶೇಷತೆಗಳೊಂದಿಗೆ ಪ್ರಯಾಣಿಕರಿಗೆ ಸೇವೆ ನೀಡಲು ಆರಂಭವಾಗಿದೆ.
ಬೆಂಗಳೂರು, ನವೆಂಬರ್ 14: ಬೆಂಗಳೂರಿನ ಬನ್ನೇರುಘಟ್ಟ ಮಾರ್ಗದ ಜನರ ಬಹುದಿನದ ಕನಸಾಗಿದ್ದ ನಮ್ಮ ಮೆಟ್ರೋ ಪಿಂಕ್ ಲೈನ್ ಇದೀಗ ನನಸಾಗಿದೆ. ಕಾಳೇನ ಅಗ್ರಹಾರದಿಂದ ಸುದ್ದಗುಂಟೆಪಾಳ್ಯದವರೆಗೆ ಪಿಂಕ್ ಲೈನ್ ವಾಣಿಜ್ಯ ಸಂಚಾರ ಅಧಿಕೃತವಾಗಿ ಆರಂಭಗೊಂಡಿದೆ. ಈ ಹೊಸ ಮಾರ್ಗವು ಕಾಳೇನ ಅಗ್ರಹಾರ, ಹುಳಿಮಾವು, ಐಐಎಂಬಿ-ಬೀಳೇಕಹಳ್ಳಿ, ಎನ್.ಎಸ್.ಪಾಳ್ಯ, ಜೆ.ಪಿ.ನಗರ 4ನೇ ಹಂತ, ಜಯದೇವ ಆಸ್ಪತ್ರೆ ಮತ್ತು ಎಸ್.ಜಿ.ಪಾಳ್ಯ ನಿಲ್ದಾಣಗಳನ್ನು ಸಂಪರ್ಕಿಸುತ್ತದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾರ ಪಿಂಕ್ ಮೆಟ್ರೋ ಮಾರ್ಗವನ್ನು ಉದ್ಘಾಟಿಸಿದ್ದರು. ಹಲವು ವಿಶೇಷತೆಗಳಿಂದ ಕೂಡಿರುವ ಈ ಪಿಂಕ್ ಲೈನ್, 2000ಕ್ಕೂ ಅಧಿಕ ಪ್ರಯಾಣಿಕರನ್ನು ಹೊತ್ತು ಸಾಗುವ ಸಾಮರ್ಥ್ಯವನ್ನು ಹೊಂದಿದೆ. ಪಿಂಕ್ ಮೆಟ್ರೋದ ಸೂಚನಾ ಫಲಕಗಳಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ನೀಡಲಾಗಿದೆ. ಬೆಳಗ್ಗೆ 6 ಗಂಟೆಯಿಂದ ಮೆಟ್ರೋ ಸಂಚಾರ ಆರಂಭವಾಗಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೊದಲ ದಿನ ಮೆಟ್ರೋ ಸಿಬ್ಬಂದಿಗಳು ಪ್ರಯಾಣಿಕರನ್ನು ಪಿಂಕ್ ಬಣ್ಣದ ಗುಲಾಬಿ ನೀಡಿ ಸ್ವಾಗತಿಸಿದರು. ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಬೆಳಗ್ಗೆಯೇ ಮೆಟ್ರೋದಲ್ಲಿ ಪ್ರಯಾಣಿಸಿ ಗಮನ ಸೆಳೆದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

