ಬಾಲ ಕಾರ್ಮಿಕನಾಗಿದ್ದ ಮಗನನ್ನು ಬಚಾವು ಮಾಡಿದ್ದ ಅಧಿಕಾರಿಗಳ ವಿರುದ್ಧವೇ ತಿರುಗಿಬಿದ್ದ ತಾಯಿ; ಕಹಿಯಾದರೂ ಇದು ಸತ್ಯ

| Updated By: guruganesh bhat

Updated on: Sep 04, 2021 | 10:08 PM

ಹೇಗಿದ್ದರೂ ಶಾಲೆಗಳಿಲ್ಲ, ಮಕ್ಕಳನ್ನು ಕೆಲಸಕ್ಕೆ ಕಳಿಸಬಹುದು ಎಂಬ ಮನೋಭಾವ ಹೊಂದಿದ್ದ ಈಕೆ, ಅಧಿಕಾರಿಗಳ ವಿರುದ್ಧವೇ ತಿರುಗಿಬಿದ್ದಿದ್ದಾಳೆ.

ಬಾಲ ಕಾರ್ಮಿಕನಾಗಿದ್ದ ಮಗನನ್ನು ಬಚಾವು ಮಾಡಿದ್ದ ಅಧಿಕಾರಿಗಳ ವಿರುದ್ಧವೇ ತಿರುಗಿಬಿದ್ದ ತಾಯಿ; ಕಹಿಯಾದರೂ ಇದು ಸತ್ಯ
ಬಾಲ ಕಾರ್ಮಿಕನ ಪೋಷಕರು
Follow us on

ನೆಲಮಂಗಲ: ಕೊವಿಡ್ ಲಾಕ್​ಡೌನ್​ನಿಂದ ಬಹಳ ಕಾಲದಿಂದ ಶಾಲೆಗಳು ಸ್ಥಗಿತಗೊಂಡಿದ್ದವು. ಇದು ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿಗಳ ಮೇಲೆ ಬಹಳವೇ ದುಷ್ಪರಿಣಾಮ ಬೀರಿತ್ತು ಎಂಬುದು ನಾನಾ ಕಾರಣಗಳಿಂದ ಸಾಬೀತಾಗುತ್ತಲೇ ಇದೆ. ಇದಕ್ಕೆ ತಾಜಾ ಉದಾಹರಣೆ ಜಿಲ್ಲಾ ಮಕ್ಕಳ ರಕ್ಷಣ ಘಟಕ, ಸಮಾಜ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆ ಮತ್ತು ಮಕ್ಕಳ‌ ಸಹಾಯವಾಣಿಯಿಂದ ನಡೆದ ಜಂಟಿ ಕಾರ್ಯಾಚರಣೆಯಲ್ಲಿ ಇಂದು ನೆಲಮಂಗಲ ನಗರದ ವಿವಿಧ ಗ್ಯಾರೇಜ್‌ಗಳಲ್ಲಿ ಕೆಲಸ ಮಾಡುತ್ತಿದ್ದ ಐವರು ಬಾಲ ಕಾರ್ಮಿಕರನ್ನು ರಕ್ಷಿಸಲಾಗಿತ್ತು. ಈವೇಳೆ 8 ಬಾಲ ಕಾರ್ಮಿಕರು ಅಧಿಕಾರಿಗಳ ಕೈಗೆ ಸಿಗದೇ ಓಡಿಯೂ ಹೋಗಿದ್ದರು. ಅಧಿಕಾರಿಗಳು ರಕ್ಷಿಸಿದ ಬಾಲ ಕಾರ್ಮಿಕರನ್ನು ಜಿಲ್ಲಾ ಬಾಲ ಮಂದಿರಕ್ಕೆ ಸೇರಿಸಲಾಗಿದೆ. ಆದರೆ, ಬಾಲ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಚಿಕ್ಕ ಹುಡುಗನ ತಾಯಿಯೇ ಅಧಿಕಾರಿಗಳ ವಿರುದ್ಧ ತಿರುಗಿಬಿದ್ದ ಘಟನೆ ನಡೆದಿದೆ.

ನೆಲಮಂಗಲ ನಗರದ ಒಂದು ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿದ್ದ ಮಗನನ್ನು ಅಧಿಕಾರಿಗಳು ರಕ್ಷಿಸಿದ್ದಕ್ಕೆ ನನ್ನ ಮಗನನ್ನು ಬಿಟ್ಟು ಬಿಡಿ ಎಂದು ಓರ್ವ ಮಹಿಳೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ನಗರದ ನೆಲಮಂಗಲ ಟೌನ್ ಪೊಲೀಸ್ ಠಾಣೆ ಮುಂಭಾಗದಲ್ಲಿ ಅತ್ತು ಗೋಗರೆದಿದ್ದಾಳೆ. ಹೇಗಿದ್ದರೂ ಶಾಲೆಗಳಿಲ್ಲ, ಮಕ್ಕಳನ್ನು ಕೆಲಸಕ್ಕೆ ಕಳಿಸಬಹುದು ಎಂಬ ಮನೋಭಾವ ಹೊಂದಿದ್ದ ಈಕೆ, ಅಧಿಕಾರಿಗಳ ವಿರುದ್ಧವೇ ತಿರುಗಿಬಿದ್ದಿದ್ದಾಳೆ.

ಬಾಲಕರ ರಕ್ಷಣೆ ನಂತರ ಅವರ ಆರೋಗ್ಯ ತಪಾಸಣೆ ನಡೆಸಿ ಬಾಲ ಮಂದಿರಕ್ಕೆ ರವಾನಿಸುವ ಪ್ರಕ್ರಿಯೆಯ ನಡುವೆ ಆಸ್ಪತ್ರೆಗೆ ದೌಡಾಯಿಸಿದ್ದ ಹೆತ್ತವರು ಅಧಿಕಾರಿಗಳೊಂದಿಗೆ ಮಾತಿನ ಚಕಮಕಿಗೆ ಇಳಿದಿದ್ದರು. ಆಸ್ಪತ್ರೆ ಬಳಿ ಪ್ರಾರಂಭವಾಗಿದ್ದ ಜಗಳ ಪೊಲೀಸ್ ಠಾಣೆ ಅಂಗಳಕ್ಕೆ ರವಾನೆಯಾಗಿ ಠಾಣೆ ಬಳಿ ಕ್ಷಣೆಗೆ ಒಳಗಾದ ಬಾಲಕನ ತಾಯಿ ನಡೆಸಿದ ರಗಳೆ ರಂಪಾಟಕ್ಕೆ ಪೊಲೀಸ್ ಠಾಣೆ ಸಾಕ್ಷಿಯಾಯಿತು. ಇಂತಹ ಘಟನೆಗಳ ಮೂಲಕ ಕೊವಿಡ್ ಲಾಕ್​ಡೌನ್​ನಿಂದ ಶಾಲಾ ವಿದ್ಯಾರ್ಥಿಗಳು ಬಾಲ ಕಾರ್ಮಿಕರಾಗಿ ಬದಲಾಗುತ್ತಿರುವುದು ಬೆಳಕಿಗೆ ಬರುತ್ತಿದೆ. ಆದರೆ ಬಾಲ ಕಾರ್ಮಿಕರನ್ನು ಅಧಿಕಾರಿಗಳು ರಕ್ಷಿಸಿದರೂ ಅವರ ಪಾಲಕರು ವಿರೋಧ ವ್ಯಕ್ತಪಡಿಸುತ್ತಿರುವ ಕಹಿ ಸತ್ಯವೂ ಹೊರಬರುತ್ತಿದೆ.

ಇದನ್ನೂ ಓದಿ: 

ಬೆಂಗಳೂರಿನ ಜನ ಎಷ್ಟು ಭಾಷೆ ಮಾತಾಡುತ್ತಾರೆ ಗೊತ್ತಾ?; ಭಾರತದಲ್ಲೇ ಅತಿ ಹೆಚ್ಚು ಭಾಷಿಗರಿರುವ ನಗರ ಬೆಂಗಳೂರು

ಗಲ್ಲಿಗಲ್ಲಿಯಲ್ಲಿ ಗಣೇಶ ಮೂರ್ತಿ ಕೂರಿಸುವಂತಿಲ್ಲ; ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಎಚ್ಚರಿಕೆ

Published On - 10:03 pm, Sat, 4 September 21