ಬೆಂಗಳೂರು, ಮೇ.13: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಆಗಾಗ ಆನ್‌ಲೈನ್ ವಂಚನೆ (Online Fraud) ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಸೈಬರ್ ಖದೀಮರು (Cyber Crime) ಕೂಡ ಜನರನ್ನು ವಂಚಿಸಲು ಹೊಸ ಹೊಸ ಮಾರ್ಗಗಳಲ್ಲಿ ಕಾಯುತ್ತಿರುತ್ತಾರೆ. ಇತ್ತೀಚೆಗೆ ಸ್ಕ್ರ್ಯಾಚ್ ಕಾರ್ಡ್‌ಗಳನ್ನು ಕಳುಹಿಸಿ ಲೂಟಿ ಮಾಡುತ್ತಿರುವ ಹಗರಣವೊಂದು ಬೆಳಕಿಗೆ ಬಂದಿತ್ತು. ಈಗ ಮತ್ತೊಂದೆಡೆ ದೂರಸಂಪರ್ಕ ಇಲಾಖೆಯ (Department of Telecommunications) ಅಧಿಕಾರಿಗಳೆಂದು ಹೇಳಿಕೊಂಡು ಮಹಿಳೆಗೆ 30 ಲಕ್ಷ ಮೋಸ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಫೆಡ್‌ಎಕ್ಸ್ ಮತ್ತು ಆದಾಯ ತೆರಿಗೆ ಇಲಾಖೆ ಹೆಸರಿನಲ್ಲಿ ಎಸಗುತ್ತಿರುವ ದುಷ್ಕೃತ್ಯಗಳ ಬಗ್ಗೆ ಜನರಿಗೆ ಅರಿವಾಗುತ್ತಿದ್ದಂತೆಯೇ ಸೈಬರ್ ವಂಚಕರು ಈಗ ದೂರಸಂಪರ್ಕ ಇಲಾಖೆಯ ಅಧಿಕಾರಿಗಳಂತೆ ಬಿಂಬಿಸಿ ಸಾರ್ವಜನಿಕರಿಂದ ಹಣ ಲಪಟಾಯಿಸುತ್ತಿದ್ದಾರೆ.
ನಾವು ದೂರಸಂಪರ್ಕ ಇಲಾಖೆ ಅಧಿಕಾರಿಗಳು. ನಿಮ್ಮ ಆಧಾರ್ ಬಯೋಮೆಟ್ರಿಕ್ ದುರ್ಬಳಕೆಯಾಗಿದೆ ಮತ್ತು ಬ್ಯಾಂಕ್ ಖಾತೆಗಳ ಪರಿಶೀಲನೆ ಮಾಡಬೇಕಿದೆ ಎಂದು ಕಥೆ ಕಟ್ಟಿ ನಂಬಿಸಿ ಬೆಂಗಳೂರು ಮೂಲಕ ಮಹಿಳೆಯೊಬ್ಬರಿಗೆ ಸುಮಾರು 14 ದಿನಗಳ ಕಾಲ ಸಂಪರ್ಕ ಮಾಡಿ 30 ಲಕ್ಷ ರೂಪಾಯಿ ವಂಚನೆ ಮಾಡಲಾಗಿದೆ.
ಮಹಿಳೆ ದಾಖಲಿಸಿದ ಎಫ್‌ಐಆರ್ ಪ್ರಕಾರ, ನಿದಾ (ಹೆಸರು ಬದಲಾಯಿಸಲಾಗಿದೆ) ಏಪ್ರಿಲ್ 8 ರಂದು 08146849478 ರಿಂದ ದೂರವಾಣಿ ಕರೆಯನ್ನು ಸ್ವೀಕರಿಸಿದ್ದಾರೆ. ವ್ಯಕ್ತಿಯು ತನ್ನನ್ನು ದೂರಸಂಪರ್ಕ ಅಧಿಸೂಚನೆ ಘಟಕದ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದಾನೆ. ಅಪರಿಚಿತ ವ್ಯಕ್ತಿಗಳು ಮುಂಬೈನಲ್ಲಿ ಸಿಮ್ ಕಾರ್ಡ್‌ಗಳನ್ನು ಖರೀದಿಸಲು ನಿಮ್ಮ ಆಧಾರ್ ಬಯೋಮೆಟ್ರಿಕ್ ಅನ್ನು ಬಳಸಿದ್ದಾರೆ. ಆ ಸಿಮ್ ಕಾರ್ಡ್ ಕಾನೂನುಬಾಹಿರ ಜಾಹೀರಾತುಗಳನ್ನು ಪ್ರಚಾರ ಮಾಡಲು ಮತ್ತು ಅಪರಾಧ ಚಟುವಟಿಕೆಗಳನ್ನು ನಡೆಸಲು ಬಳಸಲಾಗುತ್ತಿದೆ ಎಂದು ವಂಚಕರು ನಿದಾಗೆ ತಿಳಿಸಿದ್ದಾರೆ.
ಇದರಿಂದ ಗಾಬರಿಗೊಂಡ ನಿದಾ ವ್ಯಕ್ತಿಯ ಮಾತನ್ನು ನಂಬಿ ಅವರು ಹೇಳಿದಂತೆ ಮಾಡಿದ್ದಾರೆ. ವಂಚಕ ವ್ಯಕ್ತಿ ನಿದಾ ಅವರಿಗೆ ಬೇರೊಂದು ನಂಬರ್ ಕೊಟ್ಟ ಸಂಪರ್ಕ ಮಾಡಲು ತಿಳಿಸಿದ್ದಾನೆ. ಅದರಂತೆ ನಿದಾ ಕರೆ ಮಾಡಿದ್ದು, ಆತ ತಾನು ಮುಂಬೈನ ಅಂಧೇರಿ ಪೊಲೀಸ್ ಠಾಣೆಯ ಅಧಿಕಾರಿ ಎಂದು ಹೇಳಿಕೊಂಡಿದ್ದಾನೆ.
ಇದನ್ನೂ ಓದಿ: ಜಲಮಂಡಳಿ ಅರೆಬರೆ ಕಾಮಗಾರಿಯಿಂದ ನಿವಾಸಿಗಳಿಗೆ ಸಂಕಷ್ಟ; ಪೈಪ್ ಲೈನ್ ಹಳ್ಳದಿಂದ ಇಲಿ-ಹೆಗ್ಗಣಗಳ ಕಾಟ
ನಂತರ ವಂಚಕರು ನಿದಾ ಅವರ ಫೋನ್‌ಗೆ 9686071308 ಮತ್ತು 8735028302 ರಿಂದ ವೀಡಿಯೊ ಕರೆಗಳನ್ನು ಮಾಡಿದ್ದಾರೆ. ಆಕೆಯ ಹೆಸರನ್ನು ಬಳಸಿಕೊಂಡು ಖರೀದಿಸಿದ ಸಿಮ್‌ಗಳನ್ನು ಅಕ್ರಮ ಜಾಹೀರಾತುಗಳಿಗೆ ಮತ್ತು ಬಹು ಬ್ಯಾಂಕ್ ಖಾತೆಗಳನ್ನು ತೆರೆಯಲು ಬಳಸಲಾಗಿದೆ ಎಂದು ಹೇಳಿದ್ದಾರೆ. ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸಲು ಇಂತಹ ಖಾತೆಗಳನ್ನು ನಿರ್ವಹಿಸಲಾಗುತ್ತದೆ ಎಂದು ಹೇಳಿ ಭಯ ಹುಟ್ಟಿಸಿ ತಮ್ಮನ್ನು ನಂಬುವಂತೆ ಮಾಡಿದ್ದಾರೆ.
ಇನ್ನು ತಾನೊಬ್ಬ ಪೊಲೀಸ್ ಎಂದು ಹೇಳಿಕೊಂಡ ವಂಚಕ, ತನಿಖೆಯ ಬಗ್ಗೆ ಬೇರೆ ಯಾರಿಗಾದರೂ ತಿಳಿದರೆ ನಿಮ್ಮ ಕುಟುಂಬದವರನ್ನು ಸೈಬರ್ ವಂಚಕರು ಟಾರ್ಗೆಟ್ ಮಾಡುತ್ತಾರೆ ಎಂದು ಹೇಳಿ ಭಯ ಹುಟ್ಟಿಸಿದ್ದಾನೆ. ನಿದಾ ಅವರು ಇದನ್ನು ನಂಬುತ್ತಿದ್ದಂತೆ, ವಂಚಕರು ತನಿಖೆಯ ಭಾಗವಾಗಿ ಆಕೆಯ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಬೇಕಾಗಿದೆ ಎಂದು ಹೇಳಿದ್ದಾರೆ. ನಿದಾ ಅವರಿಗೆ ಮೊದಲು ಸ್ವಲ್ಪ ಹಣವನ್ನು ಕಳುಹಿಸುವಂತೆ ಹೇಳಿ ಹಣ ವರ್ಗಾಹಿಸಿಕೊಂಡಿದ್ದಾರೆ. ನಂತರ, ಆಕೆಯ ಬ್ಯಾಂಕ್ ಖಾತೆಗಳು ಯಾವುದೇ ಕಾನೂನುಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ ಎಂದು ಖಚಿತಪಡಿಸಿಕೊಳ್ಳಲು ಹೆಚ್ಚಿನ ವಹಿವಾಟುಗಳನ್ನು ಮಾಡುವಂತೆ ಕೇಳಿದ್ದಾರೆ.
ನಿದಾ ಅವರು ಏಪ್ರಿಲ್ 8 ರಿಂದ 21 ರ ನಡುವೆ ಹಲವಾರು ವಹಿವಾಟುಗಳನ್ನು ನಡೆಸಿ ಒಟ್ಟು 30 ಲಕ್ಷ ರೂ.ಗಳನ್ನು ಕಳುಹಿಸಿದ್ದಾರೆ. ಅಂತಿಮವಾಗಿ 14 ದಿನಗಳ ಬಳಿಕ ನಿದಾ ಅವರಿಗೆ ವಂಚನೆಯಾಗಿರುವುದು ತಿಳಿದಿದ್ದು ಮೇ 6 ರಂದು ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾರೆ.
ಐಟಿ ಕಾಯಿದೆ ಮತ್ತು ಐಪಿಸಿ ಸೆಕ್ಷನ್ 420 (ವಂಚನೆ ಮತ್ತು ಅಪ್ರಾಮಾಣಿಕವಾಗಿ ಆಸ್ತಿ ವಿತರಣೆಯನ್ನು ಪ್ರೇರೇಪಿಸುವುದು) ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪೊಲೀಸರು ಎಫ್‌ಐಆರ್ ಅನ್ನು ದಾಖಲಿಸಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ