ಜಲಮಂಡಳಿ ಅರೆಬರೆ ಕಾಮಗಾರಿಯಿಂದ ನಿವಾಸಿಗಳಿಗೆ ಸಂಕಷ್ಟ; ಪೈಪ್ ಲೈನ್ ಹಳ್ಳದಿಂದ ಇಲಿ-ಹೆಗ್ಗಣಗಳ ಕಾಟ
ಪೈಪ್ ಲೈನ್ ಕಾಮಗಾರಿಗೆ ರಸ್ತೆ ಅಗೆದಿದ್ದ ಜಲಮಂಡಳಿಯ ಕೆಲಸಕ್ಕೆ ರಾಜಾಜಿನಗರದ ಮಂಜುನಾಥನಗರ ನಿವಾಸಿಗಳು ಸಂಕಷ್ಟ ಅನುಭವಿಸುವಂತಾಗಿದೆ. ಕಾಮಗಾರಿಗೆ ತೆಗೆದಿದ್ದ ರಸ್ತೆಗೆ ಟಾರ್ ಹಾಕದೇ ಬಿಟ್ಟಿರುವುದರಿಂದ ಅಪಘಾತಗಳ ಜೊತೆಗೆ ಮಳೆಯಿಂದ ಅವಾಂತರ ಸೃಷ್ಟಿಯಾಗ್ತಿದೆ.
ಬೆಂಗಳೂರು, ಮೇ.13: ಬೇಸಿಗೆ ಮುಗಿದು ಮಳೆಗಾಲದ ಸುಳಿವು ಸಿಗ್ತಿದ್ರು ರಾಜ್ಯ ರಾಜಧಾನಿಯ ಜನರಿಗೆ ಗುಂಡಿ ಕಂಟಕ ತಪ್ಪಿಲ್ಲ. ಜಲಮಂಡಳಿ ಮಾಡಿದ ಯಡವಟ್ಟಿಗೆ ಆ ಏರಿಯಾ ಜನ ನಿತ್ಯ ಸಂಕಷ್ಟ ಅನುಭವಿಸುವಂತಾಗಿದೆ. ಜಲಮಂಡಳಿ (BWSSB) ಪೈಪ್ ಲೈನ್ ಕಾಮಗಾರಿಗೆ ತೆಗೆದಿದ್ದ ರಸ್ತೆಗೆ ಟಾರ್ ಹಾಕದೇ ಬಿಟ್ಟಿರುವುದರಿಂದ ಅಪಘಾತಗಳ ಜೊತೆಗೆ ಮಳೆಯಿಂದ ಅವಾಂತರ ಸೃಷ್ಟಿಯಾಗ್ತಿರೋದು ಜನರನ್ನ ಹೈರಾಣಾಗಿಸಿದೆ.
ಪೈಪ್ ಲೈನ್ ಕಾಮಗಾರಿಗೆ ರಸ್ತೆ ಅಗೆದಿದ್ದ ಜಲಮಂಡಳಿಯ ಕೆಲಸಕ್ಕೆ ರಾಜಾಜಿನಗರದ ಮಂಜುನಾಥನಗರ ನಿವಾಸಿಗಳು ಸಂಕಷ್ಟ ಅನುಭವಿಸುವಂತಾಗಿದೆ. ಪೈಪ್ ಲೈನ್ ಕಾಮಗಾರಿ ಬಳಿಕ ರಸ್ತೆ ಅಗೆದ ಜಾಗದಲ್ಲಿ ಜಲ್ಲಿ ತುಂಬಿ ಹೋಗಿದ್ದರು. ಆದರೆ ಮಳೆ ಬಂದಾಗ ಜಲ್ಲಿ ಕೂಡ ಕೊಚ್ಚಿ ಹೋಗಿದ್ದು ಮಳೆನೀರು ನಿಂತು ಸಮಸ್ಯೆ ಅನುಭವಿಸುವಂತಾಗಿದೆ. ಅತ್ತ ರಸ್ತೆಯಲ್ಲೇ ಹಳ್ಳ ಬಿದ್ದಿರುವುದರಿಂದ ಹಲವು ವಾಹನ ಸವಾರರು ಬಿದ್ದು ಗಾಯವಾಗ್ತಿದ್ದು, ಜಲಮಂಡಳಿಯ ವಿರುದ್ಧ ಜನರು ಕಿಡಿಕಾರುತ್ತಿದ್ದಾರೆ.
ಇದನ್ನೂ ಓದಿ: ರಾಮನಗರದಲ್ಲಿ ರಣಬಿಸಿಲು: 500 ಕೋಟಿ ಮೌಲ್ಯದ ಮಾವು ಲಾಸ್! 28 ಸಾವಿರ ರೈತ ಕುಟುಂಬಗಳು ಸಂಷಕ್ಟದಲ್ಲಿ
ಇತ್ತ ರಸ್ತೆ ಅಗೆದು ಬರೀ ಜಲ್ಲಿ ತುಂಬಿದ್ದರಿಂದ ಎಲ್ಲೆಂದರಲ್ಲಿ ಇಲಿಗಳು ಬಿಲ ತೆಗೆದು ಜನರಿಗೆ ಕಾಟ ಕೊಡಲಾರಂಭಿಸಿವೆ. ರಾತ್ರಿ ವೇಳೆ ಮನೆಗಳಿಗೆ ಇಲಿಗಳು ಬರುತ್ತಿದ್ದಾವೆ. ಜೊತೆಗೆ ಮಳೆ ಬಂದ್ರೆ ಮಳೆ ನೀರು ಕೂಡ ನಿಲ್ಲುತ್ತಿರುವುದರಿಂದ ಜನರು ಬೇಸತ್ತುಹೋಗಿದ್ದಾರೆ. ಅತ್ತ ಚರಂಡಿಗಳನ್ನ ಕೂಡ ಸರಿಯಾಗಿ ನಿರ್ಮಿಸದೇ ಇರೋದು ಮತ್ತಷ್ಟು ಸಮಸ್ಯೆ ತಂದಿಟ್ಟಿದೆ.
ಸದ್ಯ ಇರುವ ಅರೆಬರೆ ರಸ್ತೆಯಲ್ಲೂ ಹಳ್ಳಗಳು ಸೃಷ್ಟಿಯಾಗಿದ್ದು, ಮ್ಯಾನ್ ಹೋಲ್ಗಳ ಬಳಿ ಮಣ್ಣು ಕೂಡ ಕುಸಿದಿದೆ. ಇಷ್ಟಾದ್ರೂ ಬರೀ ಜಲ್ಲಿ ಸುರಿದು ಸೈಲೆಂಟ್ ಆದ ಜಲಮಂಡಳಿ, ರಸ್ತೆ ಹಾಕೋದು ನಮ್ಮ ಕೆಲಸವಲ್ಲ, ಪಾಲಿಕೆಯವರು ಮಾಡಬೇಕು ಅಂತಾ ಸಬೂಬು ಕೊಟ್ಟು ಸುಮ್ಮನಾಗ್ತಿರೋದು ಜನರನ್ನ ಕಂಗಾಲಾಗಿಸಿದೆ. ಸದ್ಯ ಮಳೆಗಾಲದಲ್ಲಿ ಮತ್ತಷ್ಟು ಅನಾಹುತ ಆಗೋ ಮೊದಲೇ ಜಲಮಂಡಳಿ ಹಾಗೂ ಪಾಲಿಕೆ ನಮ್ಮ ಸಮಸ್ಯೆಗೆ ಮುಕ್ತಿ ಕೊಡಲಿ ಅಂತಾ ಜನರು ಆಗ್ರಹಿಸಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ