ಬೆಂಗಳೂರಿನ ಅಂದ್ರಹಳ್ಳಿ ಶಾಲಾ ಮಕ್ಕಳಿಂದ ಶೌಚಾಲಯ ಕ್ಲೀನಿಂಗ್; ಸಿದ್ದರಾಮಯ್ಯ ಕಾಲದಲ್ಲೇ ಇವೆಲ್ಲ ನಡೆಯೋದು ಎಂದ ಆರ್ ಅಶೋಕ್

| Updated By: ಆಯೇಷಾ ಬಾನು

Updated on: Dec 22, 2023 | 2:13 PM

ಬೆಂಗಳೂರಿನ ಪೀಣ್ಯ ಬಳಿಯಿರುವ ಅಂದ್ರಹಳ್ಳಿ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಂದ್ಲೇ ಶೌಚಾಲಯ ಕ್ಲೀನ್ ಮಾಡಿಸಲಾಗಿದೆ. ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು ಪ್ರಜಾಪ್ರಭುತ್ವ ವಿರೋಧಿ ಘಟನೆ ಸಿದ್ದರಾಮಯ್ಯ ಕಾಲದಲ್ಲೇ ಈ ಘಟನೆಗಳು ನಡೆಯುತ್ತಿವೆ ಎಂದಿದ್ದಾರೆ.

ಬೆಂಗಳೂರಿನ ಅಂದ್ರಹಳ್ಳಿ ಶಾಲಾ ಮಕ್ಕಳಿಂದ ಶೌಚಾಲಯ ಕ್ಲೀನಿಂಗ್; ಸಿದ್ದರಾಮಯ್ಯ ಕಾಲದಲ್ಲೇ ಇವೆಲ್ಲ ನಡೆಯೋದು ಎಂದ ಆರ್ ಅಶೋಕ್
ಶಾಲಾ ಮಕ್ಕಳಿಂದ ಶೌಚಾಲಯ ಕ್ಲೀನಿಂಗ್
Follow us on

ಬೆಂಗಳೂರು, ಡಿ.22: ವಿದ್ಯಾರ್ಥಿಗಳ ಕೈಯಲ್ಲಿ ಶಿಕ್ಷಕರು ಶೌಚಾಲಯ ಕ್ಲೀನ್ (Toilet Cleaning) ಮಾಡಿಸಿದ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಪೀಣ್ಯ ಬಳಿಯಿರುವ ಅಂದ್ರಹಳ್ಳಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರು ಮಕ್ಕಳ (Students) ಕೈಯಲ್ಲಿ ಶೌಚಾಲಯ ಕ್ಲೀನ್ ಮಾಡಿಸಿದ್ದು ಈ ಸಂಬಂಧ ಶಾಲೆಯ ಶಿಕ್ಷಕರ (Teacher) ವಿರುದ್ಧ ಸ್ಥಳೀಯ ನಿವಾಸಿಗಳು ಆಕ್ರೋಶ ಹೊರ ಹಾಕಿದ್ದಾರೆ. ಮತ್ತೊಂದೆಡೆ ಈ ಘಟನೆ ರಾಜಕೀಯ ತಿರುವು ಪಡೆದುಕೊಳ್ಳುತ್ತಿದೆ. ಡಿಸಿಎಂ ಡಿಕೆ ಶಿವಕುಮಾರ್, ಗೃಹ ಇಲಾಖೆ ಸಚಿವ ಡಾ.ಜಿ.ಪರಮೇಶ್ವರ್, ಸಮಾಜಕಲ್ಯಾಣ ಸಚಿವ H.C.ಮಹದೇವಪ್ಪ ಈ ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿದ್ದು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು ಪ್ರಜಾಪ್ರಭುತ್ವ ವಿರೋಧಿ ಘಟನೆ ಸಿದ್ದರಾಮಯ್ಯ ಕಾಲದಲ್ಲೇ ಈ ಘಟನೆಗಳು ನಡೆಯುತ್ತಿವೆ ಎಂದಿದ್ದಾರೆ.

ಬೆಂಗಳೂರಿನ ಪೀಣ್ಯ ಬಳಿಯಿರುವ ಅಂದ್ರಹಳ್ಳಿ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಂದ್ಲೇ ಶೌಚಾಲಯ ಕ್ಲೀನ್ ಮಾಡಿಸಲಾಗಿದೆ. ಒಬ್ಬ ವಿದ್ಯಾರ್ಥಿ ಕ್ಲೀನಿಂಗ್ ಆ್ಯಸಿಡ್ ಹಾಕ್ತಿದ್ರೆ, ಮತ್ತೊಬ್ಬ ಪೊರಕೆ ಹಿಡಿದು ಗುಡಿಸ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ಈ ವಿಚಾರ ಗೊತ್ತಾಗುತ್ತಿದ್ದಂತೆ ಪೋಷಕರು ಶಾಲೆಗೆ ಆಗಮಿಸಿ ಮುಖ್ಯಶಿಕ್ಷಕಿಯನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಸ್ಥಳೀಯರು ಪ್ರತಿಭಟನೆಯನ್ನ ಮಾಡಿದ್ದಾರೆ.

ಖಂಡಿತವಾಗಿ ಈ ರೀತಿಯ ಘಟನೆ ನಡೆಯಬಾರದು

ಇನ್ನು ಈ ಘಟನೆ ಸಂಬಂಧ ವಿಧಾನಸೌಧದಲ್ಲಿ ಗೃಹ ಇಲಾಖೆ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ. ಅಂದ್ರಹಳ್ಳಿ ಶಾಲೆ ಘಟನೆ ಬಗ್ಗೆ ಶಿಕ್ಷಣ ಸಚಿವರ ಗಮನಕ್ಕೆ ತರುತ್ತೇನೆ. ಖಂಡಿತವಾಗಿ ಈ ರೀತಿಯ ಘಟನೆ ನಡೆಯಬಾರದು. ಶಾಲಾ ಮಕ್ಕಳನ್ನು ಈ ರೀತಿಯ ಕೆಲಸಗಳಿಗೆ ಬಳಸಿಕೊಳ್ಳಬಾರದು. ಇಂತಹ ಕೆಲಸ ಮಾಡಿಸಿದವರ ವಿರುದ್ಧ ಕ್ರಮಕ್ಕೆ ಸೂಚನೆ ನೀಡುತ್ತೇನೆ ಎಂದರು.

ಎಲ್ಲವನ್ನೂ ಗಮನಿಸಲು ವಿಚಕ್ಷಣ ದಳ ರಚಿಸಲು ಸೂಚಿಸಿದ್ದೇನೆ

ಶಾಲೆಗಳು, ಹಾಸ್ಟೆಲ್ ಹಂತದಲ್ಲಿ ಏನಾಗಿದೆ ಅಂತಾ ಗೊತ್ತಾಗಲ್ಲ. ಎಲ್ಲವನ್ನೂ ಗಮನಿಸಲು ವಿಚಕ್ಷಣ ದಳ ರಚಿಸಲು ಸೂಚಿಸಿದ್ದೇನೆ. ಬೆಂಗಳೂರು ಶಾಲೆಯಲ್ಲಿ ನಡೆದ ಘಟನೆ ನನ್ನ ಗಮನಕ್ಕೆ ಬಂದಿಲ್ಲ.ಅಲ್ಲೊಂದು, ಇಲ್ಲೊಂದು ಘಟನೆಗಳು ನಡೆಯುತ್ತವೆ. ಇಂತಹ ಪ್ರಕರಣದಲ್ಲಿ ಯಾರನ್ನೂ ಬಿಡುವುದಿಲ್ಲ ಎಂದು ಮೈಸೂರಿನಲ್ಲಿ ಸಮಾಜಕಲ್ಯಾಣ ಸಚಿವ H.C.ಮಹದೇವಪ್ಪ ತಿಳಿಸಿದರು.

ಇದನ್ನೂ ಓದಿ: ಕೋಲಾರ ಮೊರಾರ್ಜಿ ವಸತಿ ಶಾಲೆಯಲ್ಲಿ ಇದೆಂತ ಕೃತ್ಯ; ಮಕ್ಕಳನ್ನು ಮಲದ ಗುಂಡಿಗೆ ಇಳಿಸಿ ಸ್ವಚ್ಛತೆ

ಪ್ರಜಾಪ್ರಭುತ್ವ ವಿರೋಧಿ ಘಟನೆ ಸಿದ್ದರಾಮಯ್ಯ ಕಾಲದಲ್ಲೇ ನಡೆಯುತ್ತಿದೆ

ಈ ಘಟನೆ ಸಂಬಂಧ ವಿಧಾನಸೌಧದಲ್ಲಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿದ್ದು, ಕೋಲಾರದ ಬಳಿಕ ಬೆಂಗಳೂರಿನಲ್ಲಿ ಕೂಡಾ ಶೌಚಾಲಯ ಗುಂಡಿಗೆ ಮಕ್ಕಳನ್ನು ಇಳಿಸಿರುವ ಘಟನೆ ಆಗಿದೆ. ಪ್ರಜಾಪ್ರಭುತ್ವ ವಿರೋಧಿ ಘಟನೆಗಳು ಸಿದ್ದರಾಮಯ್ಯನವರ ಕಾಲದಲ್ಲೇ ಆಗುತ್ತಿವೆ. ನಾನು‌ ಇದರ ಬಗ್ಗೆ ಎಲ್ಲಾ ಮಾಹಿತಿ ತರಿಸಿಕೊಳ್ಳುತ್ತೇನೆ. ಆದರೆ ಇವತ್ತೇ ಬೆಂಗಳೂರಿನ ಅಂದ್ರಹಳ್ಳಿ ಶಾಲೆಗೆ ಭೇಟಿ ನೀಡಿ ಮಾಹಿತಿ ಪಡೆಯುತ್ತೇನೆ. ಸದನದಲ್ಲಿ ಮಾಲೂರು ಘಟನೆ ಚರ್ಚೆ ಆಗಬಾರದೆಂದು ವಿಡಿಯೋ ಮಾಡಿದವನ ಜೊತೆ ಮಾತನಾಡಿ ಮುಚ್ಚಿ ಹಾಕಿದ್ದಾರೆ ಎಂದರು.

ವಿಧಾನಸೌಧದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಸಭೆ

ಅಂದ್ರಹಳ್ಳಿ ಶಾಲೆಯಲ್ಲಿ ಮಕ್ಕಳಿಂದ ಶೌಚಾಲಯ ಸ್ವಚ್ಛ ವಿಚಾರ ಸಂಬಂಧ ಡಿಕೆ ಶಿವಕುಮಾರ್ ದಿಢೀರ್ ಸಭೆ ಕರೆದಿದ್ದಾರೆ. ಶಿಕ್ಷಣ ಇಲಾಖೆ ಅಧಿಕಾರಿಗಳು, ಬಿಬಿಎಂಪಿ ಅಧಿಕಾರಿಗಳ ಜೊತೆ ವಿಧಾನಸೌಧದಲ್ಲಿ ಸಭೆ ನಡೆಸಲಿದ್ದಾರೆ. ಮತ್ತೊಂದೆಡೆ ಘಟನೆ ಸಂಬಂಧ ಡಿಕೆಶಿ ಮಾತನಾಡಿದ್ದು, ಶಾಲಾ ಮಕ್ಕಳು ಶೌಚಾಲಯ ಕ್ಲೀನ್​ ಮಾಡಬಾರದು. ಘಟನೆ ಸಂಬಂಧ ಯಾರನ್ನೂ ರಕ್ಷಣೆ ಮಾಡಲು ಹೋಗಲ್ಲ. ಯಾರೇ ತಪ್ಪು ಮಾಡಿದರೂ ಅವರ ವಿರುದ್ಧ ಕ್ರಮ ಕೈಗೊಳ್ತೇವೆ ಎಂದಿದ್ದಾರೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:12 pm, Fri, 22 December 23