ಬೆಂಗಳೂರು, ಏಪ್ರಿಲ್ 24: ರಾಜ್ಯ ರಾಜಾಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಪಕ್ಷಿಗಳ (Birds) ಸಂಖ್ಯೆ ಕಡಿಮೆಯಾಗುತ್ತಿದೆ. ಪಕ್ಷಿಗಳ ಸಂಖ್ಯೆ ಹೆಚ್ಚು ಮಾಡುವ ಸಲುವಾಗಿ ಲಾಲ್ ಬಾಗ್ (Lalbagh Botanical Garden) ತೋಟಗಾರಿಕೆ ಅಧಿಕಾರಿಗಳು ಹೊಸ ಯೋಜನೆಯೊಂದನ್ನು ಆರಂಭಿಸಿದ್ದಾರೆ. ಸದ್ಯ ಬಿಸಿಲಿನ ಪ್ರಮಾಣ ಹೆಚ್ಚಿರುವ ಕಾರಣ ಎಷ್ಟೋ ಬಗೆಯ ಪಕ್ಷಿಗಳು ವಲಸೆ ಹೋಗಿವೆ. ಈ ಮಧ್ಯೆ, ಪಕ್ಷಿಗಳ ಸಂತಾನೋತ್ಪತ್ತಿ ಹೆಚ್ಚಿಸುವ ದೃಷ್ಟಿಯಿಂದ ಕ್ರಮ ಕೈಗೊಂಡಿರುವ ತೋಟಗಾರಿಕಾ ಇಲಾಖೆ, ಲಾಲ್ ಬಾಗ್ನಲ್ಲಿ ‘ಇನ್ಸೆಕ್ಟ್ ಕೆಫೆ’ ಅಥವಾ ಕೀಟಗಳ ಕೆಫೆ (insect cafe) ಮಾಡಿದೆ!
ಪಕ್ಷಿಗಳ ಸಂಖ್ಯೆ ಕಡಿಮೆಯಾಗುತ್ತಿರುವ ಕಾರಣ ಅವುಗಳ ಸಂತಾನೋತ್ಪತ್ತಿ ಹೆಚ್ಚಿಸುವ ಸಲುವಾಗಿ ಲಾಲ್ ಬಾಗ್ನಲ್ಲಿ ನೂತನ ಪ್ರಯತ್ನ ಮಾಡಲಾಗುತ್ತಿದೆ. ಪಕ್ಷಿಗಳ ಸಂತಾನೋತ್ಪತ್ತಿ ಹೆಚ್ಚಿಸಲು ‘ಇನ್ಸೆಕ್ಟ್ ಕೆಫೆ’ಯನ್ನು ಲಾಲ್ ಬಾಗ್ ಅಧಿಕಾರಿಗಳು ನಿರ್ಮಿಸಿದ್ದಾರೆ.
ಲಾಲ್ ಬಾಗ್ನಲ್ಲಿ ನಿರ್ಮಾಣವಾಗಿರುವ ಈ ‘ಇನ್ಸೆಕ್ಟ್ ಕೆಫೆ’ಯಲ್ಲಿ ವೈವಿಧ್ಯಮಯ ಬ್ಯಾಂಬುಸ್, ಮರದ ರೆಂಬೆ ಕೊಂಬೆಗಳನ್ನು ಹಾಕಲಾಗಿದೆ. ಜತೆಗೆ ಕ್ರಿಮಿ ಕೀಟಗಳು ಇರುವಂತೆಯೂ ನೋಡಿಕೊಳ್ಳಲಾಗಿದೆ. ಹೀಗಾಗಿ ಇಲ್ಲಿಗೆ ಕೀಟಗಳನ್ನು ತಿನ್ನಲೂ ಪಕ್ಷಿಗಳು ಬರುತ್ತವೆ. ಇದರಿಂದ ಈ ಮರದ ರೆಂಬೆಕೊಂಬೆಗಳಲ್ಲಿ ಮೊಟ್ಟೆಯನ್ನಿಟ್ಟು ಮರಿ ಮಾಡಲು ಅವುಗಳಿಗೆ ಅನುಕೂಲವಾಗಲಿದೆ. ಸದ್ಯ ಲಾಲ್ ಬಾಗ್ನ ಒಟ್ಟು 8 ಕಡೆ ಈ ಕೆಫೆಗಳನ್ನು ಮಾಡಿದ್ದು, ಪಕ್ಷಿ ಪ್ರಿಯರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಸದ್ಯ ಲಾಲ್ ಬಾಗ್ನಲ್ಲಿ ತ್ಯಾಜ್ಯಾವಾಗುವಂಥ ರೆಂಬೆಕೊಂಬೆಗಳನ್ನು ಒಂದೆಡೆ ಸೇರಿಸಿ ಪಕ್ಷಿಗಳಿಗೆ ಅನುಕೂಲವಾಗುವ ರೀತಿ ಕೀಟಗಳ ಕೆಫೆ ಮಾಡಲಾಗಿದೆ. ಒಂದೊಂದು ಕೆಫೆಗೆ ಒಟ್ಟು 40 ರಿಂದ 50 ಸಾವಿರ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಈ ಮೂಲಕ ಎಕಾಲಾಜಿಕಲ್ ಬ್ಯಾಲೆನ್ಸ್ (ಪರಿಸರ ವ್ಯವಸ್ಥೆಯ ಸಮತೋಲನ ಕಾಯ್ದುಕೊಳ್ಳಲು) ಕಾಪಾಡಲು ಲಾಲ್ ಬಾಗ್ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ.
ಇದನ್ನೂ ಓದಿ: ಲಾಲ್ ಬಾಗ್ನಲ್ಲಿ ನೀರಿಲ್ಲದೆ ಒಣಗುತ್ತಿವೆ ಗಿಡಗಳು: ತೋಟಗಾರಿಕೆ ಇಲಾಖೆಗೂ ತಟ್ಟಿದ ನೀರಿನ ಬಿಕ್ಕಟ್ಟಿನ ಬಿಸಿ
ಅಧಿಕಾರಿಗಳ ಈ ಹೊಸ ಪ್ರಯತ್ನಕ್ಕೆ ಪರಿಸರ ಪ್ರೇಮಿಗಳು ಸಂತೋಷ ವ್ಯಕ್ತಪಡಿಸುತ್ತಿದ್ದಾರೆ. ನಗರದಲ್ಲಿ ಪಕ್ಷಿಗಳ ಸಂಖ್ಯೆ ಕಡಿಮೆಯಾಗಿದೆ. ಈ ಕೀಟಗಳ ಕೆಫೆಯಿಂದ ಪಕ್ಷಿಗಳ ಸಂಖ್ಯೆ ಹೆಚ್ಚಾಗಲಿದೆ. ಲಾಲ್ ಬಾಗ್ ಅಲ್ಲದೇ ಎಲ್ಲಾ ಪಾರ್ಕ್ಗಳಲ್ಲಿಯೂ ಈ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪರಿಸರ ಪ್ರೇಮಿಗಳು ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ