ಬೆಂಗಳೂರು: ಶುಕ್ರವಾರ ಸುರಿದ ಮಳೆಯಿಂದ ಬೆಸ್ಕಾಂಗೆ 1.18 ಕೋಟಿ ರೂ. ನಷ್ಟ

|

Updated on: May 05, 2024 | 5:09 PM

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಶುಕ್ರವಾರ ಮಳೆಯಾಗಿದೆ. ಬಿಸಿಲಿನಿಂದ ಕಾದ ಹಂಚಾಗಿದ್ದ ಬೆಂಗಳೂರುನ್ನು ತಂಪಾಗಿಸಿದೆ. ಬಿಸಿಲಿನಿಂದ ನೆತ್ತಿ ಸುಟ್ಟುಕೊಂಡಿದ್ದ ಜನರು ಮಳೆಯಲ್ಲಿ ನೆಂದು ತಂಪಾಗಿದ್ದಾರೆ. ಇದು ಒಂದಡೆಯಾದರೇ, ಮತ್ತೊಂದಡೆ ಮಳೆಯಿಂದ ಬೆಸ್ಕಾಂಗೆ 1.18 ಕೋಟಿ ರೂ. ನಷ್ಟವಾಗಿದೆ.

ಬೆಂಗಳೂರು: ಶುಕ್ರವಾರ ಸುರಿದ ಮಳೆಯಿಂದ ಬೆಸ್ಕಾಂಗೆ 1.18 ಕೋಟಿ ರೂ. ನಷ್ಟ
ಮಳೆ-ಗಾಳಿಗೆ ವಿದ್ಯುತ್​ ಕಂಬ ಧರಶಾಹಿ
Follow us on

ಬೆಂಗಳೂರು, ಮೇ 05: ಸುದೀರ್ಘ ಐದು ತಿಂಗಳ ನಂತರ ಶುಕ್ರವಾರ (ಮೇ 3) ರಂದು ಬೆಂಗಳೂರು (Bengaluru) ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆಯಾಗಿದೆ (Rain). ಇದು ರಾಜಧಾನಿ ಜನರ ಸಂತಸಕ್ಕೆ ಕಾರಣವಾಗಿದೆ. ಆದರೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಗೆ (BESCOM) 1.18 ಕೋಟಿ ರೂ. ನಷ್ಟವಾಗಿದೆ. ಹವಾಮಾನ ವೈಪರೀತ್ಯದಿಂದ 33 ಹೈಟೆನ್ಷನ್ ಕಂಬಗಳು, 29 ಲೋಟೆನ್ಷನ್ ಕಂಬಗಳು, 11 ಟ್ರಾನ್ಸ್​ಫಾರ್ಮರ್​ಗಳು ಸೇರಿದಂತೆ 305 ವಿದ್ಯುತ್ ಕಂಬಗಳು ಹಾನಿಯಾಗಿವೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ. ದುರಸ್ತಿಗೆ 25.63 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಇದಲ್ಲದೆ, 57 ಟ್ರಾನ್ಸ್‌ಫಾರ್ಮರ್‌ಗಳು ಮತ್ತು 18 ಡಬಲ್ ಕಂಬಗಳು ಹಾನಿಗೊಳಗಾಗಿದ್ದು, ಕ್ರಮವಾಗಿ 86.20 ಲಕ್ಷ ರೂ. ಮತ್ತು 6.67 ಲಕ್ಷ ರೂ. ದುರಸ್ತಿ ವೆಚ್ಚವಾಗಿದೆ. ವಿದ್ಯುತ್​ ಸಂಪರ್ಕ ಕಡಿತಗೊಂಡ ತಕ್ಷಣ ನಮ್ಮ ಸಿಬ್ಬಂದಿ ಕೂಡಲೆ ಸ್ಥಳಕ್ಕೆ ಧಾವಿಸಿ ಶುಕ್ರವಾರ ರಾತ್ರಿ 9 ಗಂಟೆಗೆ ವಿದ್ಯುತ್ ಪೂರೈಕೆಯನ್ನು ಪುನಃಸ್ಥಾಪಿಸಲಾಯಿತು. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುತ್ತದೆ ಎಂದು ಬೆಸ್ಕಾಂ ತಿಳಿಸಿದೆ.

ಹಾನಿಯಿಂದಾಗಿ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಶುಕ್ರವಾರ ಗಂಟೆಗಟ್ಟಲೆ ವಿದ್ಯುತ್ ಪೂರೈಕೆಯಾಗಲಿಲ್ಲ. ಬೆಸ್ಕಾಂ ಸಹಾಯವಾಣಿಗೆ ವಿದ್ಯುತ್ ಕಡಿತದ ಬಗ್ಗೆ 16,500 ದೂರುಗಳು ಬಂದಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಶನಿವಾರ ಕೂಡ ಹೆಚ್‌ಎಸ್‌ಆರ್ ಲೇಔಟ್, ವೈಟ್‌ಫೀಲ್ಡ್, ಎಲೆಕ್ಟ್ರಾನಿಕ್ಸ್ ಸಿಟಿ, ಮಾರತ್ತಹಳ್ಳಿ ಮತ್ತು ಪೂರ್ವ ಬೆಂಗಳೂರಿನ ಇತರ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ.

ಇದನ್ನೂ ಓದಿ: Rain Alert: ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಭಾರೀ ಮಳೆಯ ಮುನ್ಸೂಚನೆ

ಮೇ8ರ ನಂತರ ಮಳೆ ಸಾಧ್ಯತೆ

ಸತತ ಎರಡು ದಿನಗಳ ನಂತರ ಬೆಂಗಳೂರಿನಲ್ಲಿ ಶನಿವಾರ ಮಳೆಯಾಗಿಲ್ಲ. ಭಾನುವಾರ ಮಳೆಯಾಗುವ ಸಾಧ್ಯತೆ ಕಡಿಮೆಯಿದ್ದರೂ, ಸೋಮವಾರ ಸ್ವಲ್ಪ ಮಳೆಯಾಗುವ ಸಾಧ್ಯತೆಗಳಿವೆ ಮತ್ತು ಮೇ 8 ರ ನಂತರ ಉತ್ತಮ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಅಧಿಕಾರಿಗಳು ತಿಳಿಸಿದ್ದಾರೆ.

ಮೇ 8 ರಿಂದ ದಕ್ಷಿಣ ಒಳನಾಡಿನಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯಿದೆ. ಅದರ ನಂತರ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ತಾಪಮಾನವು 2 ರಿಂದ 3 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗುತ್ತದೆ. ಉತ್ತರ ಒಳನಾಡಿನಲ್ಲಿ ಮೇ 10 ರ ನಂತರ ತಾಪಮಾನ ಕಡಿಮೆಯಾಗಲಿದೆ ಎಂದು ಐಎಂಡಿ ಬೆಂಗಳೂರು ನಿರ್ದೇಶಕ ಸಿಎಸ್ ಪಾಟೀಲ್ ಹೇಳಿದ್ದಾರೆ.

ಶನಿವಾರ, ಬೆಂಗಳೂರು ನಗರದಲ್ಲಿ ಗರಿಷ್ಠ ತಾಪಮಾನ 37 ಡಿಗ್ರಿ ಸೆಲ್ಸಿಯಸ್ ಆಗಿದ್ದರೆ, ಕನಿಷ್ಠ 23.3 ಡಿಗ್ರಿ ಸೆಲ್ಸಿಯಸ್ ಇತ್ತು. ಎಚ್ ಎಎಲ್ ವಿಮಾನ ನಿಲ್ದಾಣದಲ್ಲಿ ತಾಪಮಾನ 36.6 ಡಿಗ್ರಿ ಸೆಲ್ಸಿಯಸ್ ಮತ್ತು 22.6 ಡಿಗ್ರಿ ಸೆಲ್ಸಿಯಸ್ ನಡುವೆ ಇತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 4:41 pm, Sun, 5 May 24