ರೇವಣ್ಣ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಿ, ಪ್ರಜ್ವಲ್ ಗೆದ್ರೆ ನಾವು ಕ್ರಮ ಕೈಗೊಳ್ಳುತ್ತೇವೆ: ಅಶೋಕ್
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಹಾಗೂ ಎಚ್ಡಿ ರೇವಣ್ಣ ಅವರ ವಿರುದ್ಧ ಕಿಡ್ನ್ಯಾಪ್ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಈಗಾಗಲೇ ಎಸ್ಐಟಿ ಅಧಿಕಾರಿಗಳು ಸಂತ್ರಸ್ತೆ ಮಹಿಳೆಯ ಕಿಡ್ನ್ಯಾಪ್ ಪ್ರಕರಣದಲ್ಲಿ ರೇವಣ್ಣ ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಇದು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದು, ಈ ಬಗ್ಗೆ ಮೈತ್ರಿ ನಾಯಕ ಅಶೋಕ್ ಪ್ರತಿಕ್ರಿಯಿಸಿ ರೇವಣ್ಣ ಬಂಧನವನ್ನು ಸಮರ್ಥಿಸಿಕೊಂಡಿದ್ದಾರೆ. ಅಲ್ಲದೇ ಪ್ರಜ್ವಲ್ ರೇವಣ್ಣ ಅವರು ಗೆದ್ದರೆ ಕ್ರಮಕೈಗೊಳ್ಳುವ ಮಾತುಗಳನ್ನಾಡಿದ್ದಾರೆ.
ಬೆಂಗಳೂರು, (ಮೇ 05): ಪ್ರಜ್ವಲ್ ರೇವಣ್ಣ ಹಾಗೂ ಎಚ್ಡಿ ರೇವಣ್ಣ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಈ ಪ್ರಕರಣದ ಹಿಂದೆ ರಾಜಕೀಯ ಕುತಂತ್ರ ಇದೆ ಎಂದು ಜೆಡಿಎಸ್ ನಾಯಕರು ಹಾಗೂ ಕೆಲ ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದ್ರೆ, ವಿಪಕ್ಷ ನಾಯಕ ಆರ್ ಅಶೋಕ್, ಅವರು ಪ್ರಜ್ವಲ್ ಮತ್ತು ರೇವಣ್ಣ ವಿಚಾರದಲ್ಲಿ ಖಡಕ್ ಮಾತುಗಳನ್ನಾಡಿದ್ದು ಅಚ್ಚರಿಗೆ ಕಾರಣವಾಗಿದೆ. ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್, ಮಾಜಿ ಸಚಿವ ಹೆಚ್.ಡಿ.ರೇವಣ್ಣರನ್ನು ಬಂಧಿಸಿದ್ದು ಸರಿಯಾಗಿದೆ. ಇನ್ನು ನಮ್ಮ ಹೊಂದಾಣಿಕೆಯಲ್ಲಿ ಪ್ರಜ್ವಲ್ ರೇವಣ್ಣ ಇನ್ನೂ ಗೆದ್ದಿಲ್ಲ. ಗೆದ್ದರೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ. ಈ ಮೂಲಕ ರಾಜ್ಯ ರಾಜಕಾರಣದಲ್ಲಿ ಹಲ್ಚಲ್ ಎಬ್ಬಿಸಿದ್ದಾರೆ.
ಮಹಿಳೆ ಕಿಡ್ನ್ಯಾಪ್ ಕೇಸ್‌ನಲ್ಲಿ ರೇವಣ್ಣ ಬಂಧನದ ಬಗ್ಗೆ ಮಾತನಾಡಿರುವ ಅಶೋಕ್, ಮಾಜಿ ಸಚಿವ ಹೆಚ್.ಡಿ.ರೇವಣ್ಣರನ್ನು ಬಂಧಿಸಿದ್ದು ಸರಿಯಾಗಿದೆ. ಪೊಲೀಸರ ಕಾರ್ಯಕ್ಕೆ ನಾನು ಶ್ಲಾಘಿಸುತ್ತೇನೆ. ಬಂಧಿತ ಎಚ್.ಡಿ.ರೇವಣ್ಣ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಸಂತ್ರಸ್ತೆ ಹೇಳಿಕೆ ಮೇಲೆ ರೇವಣ್ಣ ಕಿಡ್ನ್ಯಾಪ್ ಕೇಸ್ ಭವಿಷ್ಯ, ಅಪ್ಪ-ಮಗನ ಹಣೆಬರಹ ಬರೆಯಲಿರುವ ಮಹಿಳೆ
ಇನ್ನು ಪ್ರಜ್ವಲ್ ರೇವಣ್ಣ ಅವರ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಅಶೋಕ್ ಅವರು, ಪ್ರಜ್ವಲ್ ಅವರು ಗೆದ್ರೆ ಅವರ ವಿರುದ್ಧ ನಾವು ಕಠಿಣ ಕ್ರಮ ಕೈಗೊಳ್ಳುತ್ತೇವೆ. ಅವರನ್ನ ಉಚ್ಚಾಟನೆ ಮಾಡುತ್ತೇವೆ. ನಮ್ಮ ಹೊಂದಾಣಿಕೆಯಲ್ಲಿ ಪ್ರಜ್ವಲ್ ರೇವಣ್ಣ ಇನ್ನೂ ಗೆದ್ದಿಲ್ಲ. ಪ್ರಜ್ವಲ್ ಗೆದ್ದರೆ ಅವರ ಪಕ್ಷದ ನಾಯಕರು ಕ್ರಮ ಕೈಗೊಳ್ಳಲಿ. ನಾವು ಕೂಡ ಕಾನೂನು ರೀತಿ ಕ್ರಮ ಕೈಗೊಳ್ಳುತ್ತೇವೆ ಎಂದು ಖಡಕ್ ಆಗಿ ಹೇಳಿದರು.
ಜೆಡಿಎಸ್ ಜತೆ ಹೊಸದಾಗಿ ನಮ್ಮ ಮೈತ್ರಿ ಆಗಿದೆ. ಹೀಗಾಗಿ ಪ್ರಜ್ವಲ್ ಗೆ ಟಿಕೆಟ್ ಕೊಡಲಾಗಿದ್ದು, ಈಗಾಗಲೇ ಜೆಡಿಎಸ್ ಅವರನ್ನ ಸಸ್ಪೆಂಡ್ ಸಹ ಮಾಡಿದೆ. ಆದ್ರೆ, ಪ್ರಜ್ವಲ್ ಗೆದ್ದ ಮೇಲೆ ಜೆಡಿಎಸ್ ಸಂಸದ ಆಗುತ್ತಾರಾ? ಅಥವಾ ಎನ್‌ಡಿಎ ಸಂಸದರಾಗುತ್ತಾರಾ ಎಂಬ ಗೊಂದಲ ಇದೆ. ಈ ಬಗ್ಗೆ ವರುಷ್ಠರಿಂದ ಸ್ಪಷ್ಟನೆ ಪಡೆಯುತ್ತೇವೆ. ನಂತರ ನೋಡಿಕೊಂಡು ಪ್ರಜ್ವಲ್ ವಿರುದ್ಧ ಕ್ರಮದ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
2016ರಲ್ಲಿ ಸ್ವತಃ ಸಿದ್ದರಾಮಯ್ಯ ಅವರೇ ಪ್ರಜ್ವಲ್ ರೇವಣ್ಣ ಅವರನ್ನ ಪಕ್ಕದಲ್ಲಿ ಕೂರಿಸಿಕೊಂಡು ಪ್ರಚಾರ ಮಾಡಿದ್ದರು. ಕಡೂರಿನ ಎಪಿಎಂಸಿ ಮೈದಾನದಲ್ಲಿ ಸಿದ್ದರಾಮಯ್ಯ, ಪ್ರಜ್ವಲ್ ಪರ ಪ್ರಚಾರ ಮಾಡಿದ್ದರು. ಪ್ರಜ್ವಲ್ ಯಂಗ್ ಇರ್ತಾರೆ, ಓಡಾಡ್ತಾರೆ, ಕೆಲಸ ಮಾಡ್ತಾರೆ.. ಹೀಗಾಗಿ ಅವರನ್ನ ಗೆಲ್ಲಿಸಿಕೊಡಿ ಎಂದು ಕರೆ ಕೊಟ್ಟಿದ್ದರು. ಪ್ರಜ್ವಲ್ ರನ್ನ ಹಾಡಿಹೊಗಳಿ ಟ್ವೀಟ್ ಮಾಡ್ತಾರೆ. ಈ ಮೂಲಕ ಅಂದು ತೆನೆ ಹೊತ್ತ ಮಹಿಳೆಗೆ ಮತ ನೀಡಿ ಎಂದು ಹೇಳಿದ್ದರು ಎಂದು ಸಿದ್ದರಾಮಯ್ಯಗೆ ಟಾಂಗ್ ಕೊಟ್ಟರು.
ಏನೇ ಆಗಲಿ ಸದ್ಯ ಪ್ರಜ್ವಲ್ ರೇವಣ್ಣ ಮತ್ತು ಎಚ್ಡಿ ರೇವಣ್ಣ ಅವರ ಪ್ರಕರಣವನ್ನ ಮಿತ್ರ ಪಕ್ಷ ಬಿಜೆಪಿ ಒಪ್ಪುತ್ತಿಲ್ಲ ನಿಜ. ಆದ್ರೆ, ಈ ಪ್ರಕರಣಗಳ ಹಿಂದೆ ರಾಜಕೀಯ ಪಿತೂರಿ ಇದೆ ಎಂದು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದ್ರೆ, ಅಶೋಕ್ ಅವರು ಈ ಪ್ರಕರಣದಲ್ಲಿ ಖಡಕ್ ಮಾತುಗಳನ್ನಾಡಿದ್ದು ಅಚ್ಚರಿಗೆ ಕಾರಣವಾಗಿದೆ. ಅಲ್ಲದೇ ಇದು ಮಿತ್ರ ಪಕ್ಷ ಜೆಡಿಎಸ್ ನಾಯಕರಿಗೆ, ಕಾರ್ಯಕರ್ತರಿಗೆ ಶಾಕ್ ಕೊಟ್ಟಂತಾಗಿದೆ.
ಪ್ರಜ್ವಲ್ ಕೇಸ್, ರೇವಣ್ಣ ಬಂಧನದಿಂದ ಮೈತ್ರಿ ಮೇಲೆ ಪರಿಣಾಮ ವಿಚಾರದ ಬಗ್ಗೆ ಮಾತನಾಡಿದ ಅಶೋಕ್, ಈ ಬಗ್ಗೆ ಎಚ್ ಡಿ ಕುಮಾರಸ್ವಾಮಿ ಮತ್ತು ಅಮಿತ್ ಶಾ ಅವರು ಏನು ಮಾತಾಡಿದ್ದಾರೆ ಎನ್ನುವುದು ಗೊತ್ತಿಲ್ಲ. ಮೈತ್ರಿ ಕೇಂದ್ರದ ಮಟ್ಟದಲ್ಲಿ ಆಗಿರುವುದು. ಮೈತ್ರಿ ಮುಂದುವರೆಸುವ ಬಗ್ಗೆ ವರಿಷ್ಠರೇ ತೀರ್ಮಾನ ಮಾಡುತ್ತಾರೆ. ಪದವೀಧರ, ಶಿಕ್ಷಕರ ಕ್ಷೇತ್ರಗಳ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಕೇಂದ್ರದ ನಾಯಕರ ಜತೆ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.