ಆನೇಕಲ್, ಏಪ್ರಿಲ್ 18: ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರು (HD Deve Gowda) ಕ್ಷುಲ್ಲಕ ರಾಜಕಾರಣ ಮಾಡುವುದಕ್ಕೆ ಹೆಸರುವಾಸಿಯಾದವರು. ಅವರು ಹಿರಿಯರು, ಹಾಗಾಗಿ ಹೆಚ್ಚು ಮಾತನಾಡಲು ಹೋಗುವುದಿಲ್ಲ. ಅವರ ಆರೋಪಕ್ಕೆ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ಕೊಡುತ್ತೇವೆ ಎಂದು ಕಾಂಗ್ರೆಸ್ (Congress) ಸಂಸದ ಡಿಕೆ ಸುರೇಶ್ (DK Suresh) ತಿರುಗೇಟು ನೀಡಿದರು. ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಸರ್ಜಾಪುರದಲ್ಲಿ ಮಾತನಾಡಿದ ಅವರು, ನಾನು ಮತ್ತು ಡಿಕೆ ಶಿವಕುಮಾರ್ ಕಲ್ಲು ಹೊಡೆದರು ಎಂದು ಆರೋಪಿಸುತ್ತಾರಲ್ಲವೇ, ಅವರ ಕುಟುಂಬದಲ್ಲಿ ಯಾಱರು ಕಲ್ಲು ಹೊಡೆದಿದ್ದಾರೆ ತೋರಿಸುತ್ತೇನೆ. ಯಾಱರ ಜಮೀನನ್ನು ವಶಪಡಿಸಿಕೊಂಡಿದ್ದಾರೆ ಎಂಬುದನ್ನು ತೋರಿಸುತ್ತೇನೆ ಎಂದರು.
ಹಾಸನದಲ್ಲಿ ಬುಧವಾರ ಮಾತನಾಡಿದ್ದ ದೇವೇಗೌಡರು, ಹಿಂದೊಮ್ಮ ಡಿಕೆ ಶಿವಕುಮಾರ್ ಆಸ್ತಿಗಾಗಿ 9 ವರ್ಷದ ಬಾಲಕಿಯನ್ನು ಅಪಹರಿಸಿ ಬೆದರಿಕೆ ಹಾಕಿದ್ದರು. ಆ ಮೂಲಕ ಮಹಿಳೆಯೊಬ್ಬರನ್ನು ಬೆದರಿಸಿ ಬೆಂಗಳೂರು ಮೈಸೂರು ಹೆದ್ದಾರಿ ಬಳಿ ಆಸ್ತಿ ಬರೆಸಿಕೊಂಡಿದ್ದರು. ಈ ವಿಚಾರದಲ್ಲಿ ಹೈಕೋರ್ಟ್, ಸುಪ್ರೀಂ ಕೋರ್ಟ್ನಲ್ಲಿಯೂ ಅವರಿಗೆ ಹಿನ್ನಡೆಯಾಗಿದೆ. ಇದಕ್ಕೆ ದಾಖಲೆಗಳು ಇವೆ ಎಂದು ಹೇಳಿದ್ದರು.
ಬೆಂಗಳೂರಿನಲ್ಲಿ ಮಂಗಳವಾರ ಮಾತನಾಡಿದ್ದ ಕುಮಾರಸ್ವಾಮಿ ಸಹ ಇದೇ ಆರೋಪ ಮಾಡಿದ್ದರು. ಡಿಕೆ ಶಿವಕುಮಾರ್ ಮಹಿಳೆಯನ್ನು ಅಪಹರಿಸಿ ಬೆದರಿಸಿ ಜಮೀನು ಬರೆಸಿಕೊಂಡಿದ್ದು ನಿಜ. ಆ ಘಟನೆ ನಡೆದದ್ದು 1996-97 ರಲ್ಲಿ, ಅದರ ದಾಖಲೆಗಳಿವೆ ಎಂದು ಹೇಳಿದ್ದರು.
ಚುನಾವಣೆಯಲ್ಲಿ ಸೋಲಿನ ಭೀತಿಯಿಂದ ನಮ್ಮ ಮೇಲೆ ಐಟಿ, ಇ.ಡಿ ದಾಳಿ ಮಾಡಿಸಲಾಗುತ್ತಿದೆ ಎಂದು ಡಿಕಡ ಸುರೇಶ್ ಆರೋಪಿಸಿದರು. ಐಟಿ, ಇ.ಡಿ ಅಧಿಕಾರಿಗಳ ಮುಖಾಂತರ ಕಾರ್ಯಕರ್ತರನ್ನು ಬೆದರಿಸುತ್ತಿದ್ದಾರೆ. ನಿನ್ನೆ ಐಟಿ ಅಧಿಕಾರಿಗಳು ನಮ್ಮ ಮುಖಂಡರನ್ನು ಗುರಿಯಾಗಿಸಿ ದಾಳಿ ಮಾಡಿದ್ದಾರೆ. ಬೆದರಿಕೆ ಹಾಕುವುದು, ಬಿಜೆಪಿ ಪರವಾಗಿ ಕೆಲಸ ಮಾಡುವುದು ಸರಿಯಲ್ಲ ಎಂದು ಈ ಮೂಲಕ ಐಟಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡುತ್ತಿದ್ದೇನೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಡಿಕೆಶಿ ಮಹಿಳೆಯ ಅಪಹರಿಸಿ ಬೆದರಿಸಿ ಜಮೀನು ಬರೆಸಿಕೊಂಡಿದ್ದಕ್ಕೆ ದಾಖಲೆ ಇದೆ: ಮತ್ತೆ ಗುಡುಗಿದ ಹೆಚ್ಡಿ ಕುಮಾರಸ್ವಾಮಿ
ಬಿಜೆಪಿಗರು ಮಾಡುವ ತಂತ್ರಗಾರಿಕೆ ಅಕ್ಷಮ್ಯ ಅಪರಾಧ. ಐಟಿ ಹಾಗೂ ಇಡಿ ಬಿಜೆಪಿ & ದೇವೇಗೌಡರ ಕೈಬೊಂಬೆಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಆರೋಪ ಮಾಡುವುದು ನಡೆಯುತ್ತಿದೆ. ದೇವೇಗೌಡರು ತಮ್ಮ ಆಸ್ತಿ ಉಳಿಸಿಕೊಳ್ಳಲು ರಾಜಕಾರಣ ಮಾಡುತ್ತಿದ್ದಾರೆ ಎಂದು ಡಿಕೆ ಸುರೇಶ್ ಕಿಡಿಕಾರಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:55 pm, Thu, 18 April 24