ಬೆಂಗಳೂರು, ಜುಲೈ 24: ರಾಜ್ಯದಲ್ಲಿ ಈ ವರ್ಷ ಡೆಂಗ್ಯೂ ಜ್ವರ ಜನರ ಜೀವ ಹಿಂಡುತ್ತಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ದಾಖಲೆಯ ಪ್ರಮಾಣದಲ್ಲಿ ಡೆಂಘೀ ಪ್ರಕರಣಗಳು ಮುನ್ನುಗ್ಗುತ್ತಿವೆ. ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 409 ಪಾಸಿಟಿವ್ ಪ್ರಕರಣ ದಾಖಲಾಗಿದ್ದು ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 409ಕ್ಕೆ ಏರಿಕೆಯಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಮಂಗಳವಾರ ಕೂಡಾ 181 ಡೆಂಗ್ಯೂ ಪಾಸಿಟಿವ್ ಕಂಡುಬಂದಿರವುದು ಆತಂಕ ಹೆಚ್ಚಿಸಿದೆ.
ಬೆಂಗಳೂರಿನಲ್ಲಿ ಡೆಂಗ್ಯೂ ಜ್ವರ ಹೆಚ್ಚಳ ಹಿನ್ನಲೆ ಬೌರಿಂಗ್ ಆಸ್ಪತ್ರಯ ವೈದ್ಯಕೀಯ ಅಧೀಕ್ಷಕ ಕೆಂಪರಾಜು ಎಲ್ಲ ವಿಭಾಗದ ವೈದ್ಯರ ಜೊತೆ ಸಮಾಲೋಚನೆ ನಡೆಸಿದ್ದಾರೆ. ಡೆಂಗ್ಯೂ ನಿಯಂತ್ರಣಕ್ಕೆ ವೈದ್ಯರಿಗೆ ಕೆಲವು ಸಲಹೆ ಸೂಚನೆ ಕೂಡಾ ನೀಡಿದ್ದಾರೆ. ಸೂಕ್ತ ಮತ್ತು ತ್ವರಿತ ಚಿಕಿತ್ಸೆ ನೀಡುವಂತೆ ಎಲ್ಲ ವಿಭಾಗದ ವೈದ್ಯರಿಗೆ ಸಲಹೆ ನೀಡಿದ್ದಾರೆ.
ರಾಜ್ಯಕ್ಕೆ ಕಳೆದೊಂದು ತಿಂಗಳಿನಿಂದ ವೈರಸ್ಗಳ ಹಾವಳಿ ಶುರುವಾಗಿದೆ. ಒಂದು ಕಡೆ ಡೆಂಗ್ಯೂ ಜ್ವರ ಬಿಟ್ಟು ಬಿಡದೆ ಜನರನ್ನ ಕಾಡುತ್ತಿದೆ. ಈ ನಡುವೆ ನಿಫಾ ವೈರಸ್ ಆತಂಕ ಶುರುವಾಗಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಕ್ಕೆ ನಿಫಾ ವೈರಸ್ ಆತಂಕ ಎದುರಾಗಿದೆ. ಈಗಾಗಲೇ ಪಕ್ಕದ ರಾಜ್ಯ ಕೇರಳದಲ್ಲಿ ನಿಫಾ ವೈರಸ್ಗೆ 14 ವರ್ಷದ ಬಾಲಕ ಮೃತಪಟ್ಟ ಬೆನ್ನಲ್ಲೇ ರಾಜ್ಯದ ಕೇರಳದ ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ. ಬಾವಲಿ ಮತ್ತು ಹಂದಿಗಳ ಮೈಯ ದ್ರವದ ಮೂಲಕ ಮನುಷ್ಯರಿಗೆ ಹರಡುವ ವೈರಸ್ ಇದಾಗಿದೆ. ಇದು ಮನುಷ್ಯರಿಂದ ಮನುಷ್ಯರಿಗೂ ಹರಡುತ್ತದೆ. ಕೋವಿಡ್ ಸೋಂಕಿನಂತೆ ಈ ನಿಫಾ ವೈರಸ್ ಸೋಂಕು ಗುಣಪಡಿಸಲು ಯಾವುದೇ ಚಿಕಿತ್ಸೆ ಇಲ್ಲ. ಮರಣ ಪ್ರಮಾಣ ಶೇ 70ರಷ್ಟಿದೆ. ಹೀಗಾಗಿ ಕೇರಳಕ್ಕೆ ಗಡಿ ಹಂಚಿಕೊಂಡಿರುವ ಕರ್ನಾಟಕ ಜಿಲ್ಲೆಗಳಲ್ಲೂ ಕೂಡ ಹೈ ಅಲರ್ಟ್ ಘೋಷಿಸಲಾಗಿದೆ.
ನಿಫಾ ವೈರಸ್ ಸೋಂಕು ತಗುಲಿದ ವ್ಯಕ್ತಿಗೆ ಮೊದಲು ಜ್ವರ ಬರುತ್ತದೆ. ತಲೆನೋವು, ವಾಂತಿ, ಉಸಿರಾಟ ತೊಂದರೆ ಕಾಣಿಸುತ್ತದೆ. ಮಿದುಳು ಉರಿಯೂತ, ಸ್ನಾಯು ಸೆಳೆತ ಇತ್ಯಾದಿ ಬಾಧೆ ಬರಬಹುದು. ರೋಗಿ ಕೋಮಾ ಸ್ಥಿತಿಗೆ ಜಾರಿ, ಮೃತಪಡಬಹುದು ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಮಳೆಗಾಲದಲ್ಲಿ ಅಸ್ತಮಾ ರೋಗಿಗಳಿಗೆ ಅಪಾಯ ಹೆಚ್ಚು: ಡಾ.ಅಂಕಿತ್ ಕುಮಾರ್
ಒಟ್ಟಿನಲ್ಲಿ ಡೆಂಗ್ಯೂ ನಡುವೆ ನಿಫಾ ಆತಂಕ ಎದುರಾಗಿದ್ದು, ಆರೋಗ್ಯ ಇಲಾಖೆ ಪ್ರಕರಣಗಳ ಪತ್ತೆಗೂ ಮುನ್ನವೇ ಮುಂಜಾಗ್ರತೆ ವಹಿಸಬೇಕಿದೆ. ಜನರು ಕೂಡಾ ಮನೆಗಳ ಬಳಿ ಸ್ವಚ್ಛತೆ ಕಾಪಾಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ