ಡೆಂಗ್ಯೂ ಏರಿಕೆಯ ಅಸಲಿ ಕಾರಣ ಪತ್ತೆ, ಖಾಸಗಿ ಆಸ್ಪತ್ರೆಗಳಲ್ಲಿ ಟೆಸ್ಟಿಂಗ್ ಮಾಡಿಸಿದವರಿಗೆಲ್ಲ ಪಾಸಿಟಿವ್!
ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಡೆಂಗ್ಯೂ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಇತ್ತ ಡೆಂಗ್ಯೂ ನಿಯಂತ್ರಿಸಲು ಹರಸಾಹಸ ಪಡುತ್ತಿದ್ದರೂ ಪ್ರಕರಣಗಳು ಇಳಿಕೆಯಾಗದೇ ಇರುವ ಕಾರಣ ಕಂಗಾಲಾದ ಪಾಲಿಕೆ ಇದೀಗ ಡೆಂಗ್ಯೂ ಪ್ರಕರಣಗಳ ಏರಿಕೆಗೆ ಅಸಲಿ ಕಾರಣವನ್ನು ಪತ್ತೆಹಚ್ಚಿದೆ. ಸುಖಾಸುಮ್ಮನೆ ಡೆಂಗ್ಯೂ ಪಾಸಿಟಿವ್ ರಿಪೋರ್ಟ್ ಕೊಡುವ ಖಾಸಗಿ ಆಸ್ಪತ್ರೆಗಳಿಗೆ ಬಿಸಿ ಮುಟ್ಟಿಸಲು ಸಜ್ಜಾಗಿದೆ.
ಬೆಂಗಳೂರು, ಜುಲೈ 24: ಆಗಾಗ ಮಳೆ, ಎಲ್ಲೆಂದರಲ್ಲಿ ನಿಂತ ಮಳೆ ನೀರಿನಿಂದ ಬೆಂಗಳೂರು ನಗರದಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಅತ್ತ ಡೆಂಗ್ಯೂಗೆ ಕಡಿವಾಣ ಹಾಕಲು ಫಾಗಿಂಗ್, ಔಷಧ ಸಿಂಪಡಣೆ ಮಾಡಿದರೂ ಪ್ರಕರಣ ಹೆಚ್ಚಾಗುತ್ತಲೇ ಇರುವುದು ಪಾಲಿಕೆಯನ್ನು ಆತಂಕಕ್ಕೆ ದೂಡಿದೆ. ಮತ್ತೊಂದೆಡೆ, ಡೆಂಗ್ಯೂವಿನಿಂದ ಸಾವನ್ನಪ್ಪಿದವರು ಎಂದು ಯಾರನ್ನು ಗುರ್ತಿಸಲಾಗುತ್ತಿದೆಯೋ ಅವರ ರಿಪೋರ್ಟ್ ಸರ್ಕಾರಿ ಆಸ್ಪತ್ರೆಗಳಲ್ಲಿ ನೆಗೆಟಿವ್ ಬರುತ್ತಿರುವುದು ಅಚ್ಚರಿ ಹುಟ್ಟಿಸಿದೆ.
ಸದ್ಯ ಬೆಂಗಳೂರಿನಲ್ಲಿ ಇದುವರೆಗೆ ಡೆಂಗ್ಯೂವಿನಿಂದ ಮೂವರು ಮೃತಪಟ್ಟಿರುವುದು ಆರೋಗ್ಯ ಇಲಾಖೆಯಿಂದ ದೃಢಪಟ್ಟಿದೆ. ಆದರೆ ಇತ್ತೀಚೆಗೆ ಖಾಸಗಿ ಆಸ್ಪತ್ರೆಗಳಲ್ಲಿ ಯಾರೇ ಮೃತಪಟ್ಟರೂ ಅವರ ಡೆಂಗ್ಯೂ ಟೆಸ್ಟಿಂಗ್ ರಿಪೋರ್ಟ್ ಪಾಸಿಟಿವ್ ಬರುತ್ತಿದೆ. ಈ ಬಗ್ಗೆ ನಿಗಾ ಇಟ್ಟಿರುವ ಪಾಲಿಕೆಗೆ ಅಸಲಿ ಕಾರಣ ಬಯಲಾಗಿದೆ. ಡೆಂಗ್ಯೂ ಪತ್ತೆಗಾಗಿ ಖಾಸಗಿ ಆಸ್ಪತ್ರೆಗಳಲ್ಲಿ ನಡೆಸೋ ಎನ್ಎಸ್1 ಟೆಸ್ಟ್ನಲ್ಲಿ ಬಹುತೇಕ ಪಾಸಿಟಿವ್ ರಿಪೋರ್ಟ್ ಬರುತ್ತಿದೆ. ಇತ್ತ ಅದೇ ಮಾದರಿಯನ್ನು ಸರ್ಕಾರಿ ಲ್ಯಾಬ್ನಲ್ಲಿ ಟೆಸ್ಟ್ ಮಾಡಿದಾಗ ನೆಗೆಟಿವ್ ಬರುತ್ತಿದ್ದು, ಪಾಸಿಟಿವ್ ರಿಪೋರ್ಟ್ ಕೊಟ್ಟ ಆಸ್ಪತ್ರೆಗಳ ವಿರುದ್ಧ ಕ್ರಮಕ್ಕೆ ಪಾಲಿಕೆ ಸಜ್ಜಾಗಿದೆ.
ಸದ್ಯ ಯಾವ್ಯಾವ ಖಾಸಗಿ ಆಸ್ಪತ್ರೆಗಳು ಮೃತಪಟ್ಟವರಿಗೆ ಪಾಸಿಟಿವ್ ರಿಪೋರ್ಟ್ ನೀಡಿವೆ ಎಂಬ ಬಗ್ಗೆ ನಿಗಾ ಇಟ್ಟಿರುವ ಪಾಲಿಕೆ, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಆರೋಗ್ಯ ಇಲಾಖೆಗೆ ಮನವಿ ಮಾಡಿದೆ. ಅಲ್ಲದೇ ಟೆಸ್ಟ್ ಮೂಲಕ ಜನರಿಗೆ ಆತಂಕ ಮೂಡಿಸದಂತೆ ಖಾಸಗಿ ಆಸ್ಪತ್ರೆಗಳಿಗೆ ಬಿಸಿ ಮುಟ್ಟಿಸಲು ಮುಂದಾಗಿದೆ.
ಇದನ್ನೂ ಓದಿ: ಬೆಂಗಳೂರು: ನಗರಕ್ಕೆ ನಿಫಾ ವೈರಸ್ ಭೀತಿ, ಡೆಂಗ್ಯೂ ಮಧ್ಯೆ ಮತ್ತೊಂದು ಆತಂಕ
ಒಟ್ಟಿನಲ್ಲಿ ಒಂದೆಡೆ ಡೆಂಗ್ಯೂ ಪ್ರಕರಣ ಏರಿಕೆಯಾಗುತ್ತಿದ್ದರೆ, ಮತ್ತೊಂದೆಡೆ ಕೆಲ ಖಾಸಗಿ ಆಸತ್ರೆಗಳ ಯಡವಟ್ಟಿನಿಂದ ಜನರು ಆತಂಕಪಡುವಂತಾಗಿದೆ. ಸದ್ಯ ಈಗ ಅಲರ್ಟ್ ಆಗಿರುವ ಪಾಲಿಕೆ ಆರೋಗ್ಯ ಇಲಾಖೆಯ ಮೊರೆಹೋಗಿದ್ದು, ಪಾಸಿಟಿವ್ ರಿಪೋರ್ಟ್ ಕೊಟ್ಟ ಆಸ್ಪತ್ರೆಗಳ ಮೇಲೆ ಯಾವ ರೀತಿ ಕ್ರಮ ಕೈಗೊಳ್ಳಲಿದೆ ಎಂದು ಕಾದುನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ