ಬೆಂಗಳೂರು: 1 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಕೊಲೆ; ಆರೋಪಿಗೆ ಮರಣದಂಡನೆ ವಿಧಿಸಿದ ಕೋರ್ಟ್
1 ವರ್ಷದ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ ಎಸಗಿ, ಹತ್ಯೆ ಮಾಡಿದ ಕಾಮುಕನಿಗೆ ಬೆಂಗಳೂರಿನ 1ನೇ ಎಫ್ಟಿಎಸ್ಸಿ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿದೆ.
ಬೆಂಗಳೂರು: 1 ವರ್ಷದ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ ಎಸಗಿ, ಹತ್ಯೆ ಮಾಡಿದ ಕಾಮುಕನಿಗೆ ಬೆಂಗಳೂರಿನ 1ನೇ ಎಫ್ಟಿಎಸ್ಸಿ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿದೆ. ಮೂರ್ತಿ ಅಲಿಯಾಸ್ ಹಲ್ಲುಜ್ಜ ಕೊಲೆ ಮಾಡಿದ ಅಪರಾಧಿ. ಬಾಲಕನ ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡಲು ಕಾನೂನು ಸೇವಾ ಪ್ರಾಧಿಕಾರಕ್ಕೆ ಕೋರ್ಟ್ ಸೂಚನೆ ನೀಡಿದೆ.
ಪ್ರಕರಣದ ಹಿನ್ನೆಲೆ
ಮೃತ ಬಾಲಕನ ತಂದೆಗೆ ಆರೋಪಿ ಮೂರ್ತಿ ಅಲಿಯಾಸ್ ಹಲ್ಲುಜ್ಜು ಎಂಬಾತ ಪರಿಚಯವಿದ್ದನು. ಹೀಗಾಗಿ 2015ರ ಸೆಪ್ಟೆಂಬರ್ 12ನೇ ತಾರೀಕಿನಂದು ಮಧ್ಯಾಹ್ನ 2ಗಂಟೆ ಸುಮಾರಿಗೆ ಉಲ್ಲಾಸ್ ಚಿತ್ರಮಂದಿರ ಬಳಿ ಮೂರ್ತಿಗೆ, ಬಾಲಕ ಮತ್ತು ಆತನ ತಂದೆ ಸಿಕ್ಕಿದ್ದರು. ಈ ವೇಳೆ ಬಾಲಕನ ತಂದೆಗೆ ತುರ್ತು ಕೆಲಸ ಬಂದಿದೆ. ಹೀಗಾಗಿ ಬಾಲಕನನ್ನು ಸುರಕ್ಷಿತವಾಗಿ ನೋಡಿಕೊಳ್ಳುವಂತೆ ಮೂರ್ತಿ ಅಲಿಯಾಸ್ ಹಲ್ಲುಜ್ಜುಗೆ ಹೇಳಿ ಹೋಗಿದ್ದಾರೆ.
ನಂತರ ಮೂರ್ತಿ ಅಲಿಯಾಸ್ ಹಲ್ಲುಜ್ಜು ಬಾಲಕನನ್ನು ಕರೆದುಕೊಂಡು ಗೊರಗುಂಟೆಪಾಳ್ಯದ ಏರ್‌ಪೋರ್ಸ್ ಬಳಿಯ ನಿರ್ಜನ ಪ್ರದೇಶಕ್ಕೆ ಹೋಗಿದ್ದಾನೆ. ಅಲ್ಲಿ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಇದರಿಂದ ಭಯಪಟ್ಟ ಬಾಲಕ ಜೋರಾಗಿ ಅಳೋದಕ್ಕೆ ಶುರು ಮಾಡಿದ್ದಾನೆ. ಇದರಿಂದ ಗಾಬರಿಗೊಂಡ ಮೂರ್ತಿ ಅಲಿಯಾಸ್ ಹಲ್ಲುಜ್ಜು ಅಲ್ಲೇ ಬಿದ್ದಿದ್ದ ಸುಮಾರು 40 ಕೆಜಿ ತೂಕದ ಸಿಮೆಂಟ್ ಮೌಲ್ಡ್ ಕಲ್ಲನ್ನು ಮಗುವಿನ ತಲೆ ಮೇಲೆ ಎತ್ತಿ ಹಾಕಿ, ಬರ್ಬರವಾಗಿ ಕೊಲೆ ಮಾಡಿದ್ದಾನೆ. ಬಳಿಕ ಅಲ್ಲೇ ಬಿದ್ದಿದ್ದ ಕಸ ಇತ್ಯಾದಿಗಳನ್ನು ಮಗುವಿನ ಮೇಲೆ ಸುರಿದು ಬೆಂಕಿ ಹಚ್ಚಿದ್ದಾನೆ.
ಈ ಸಂಬಂಧ ರಾಜಗೋಪಾಲನಗರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿತ್ತು. ಪ್ರಕರಣದ ಆರೋಪಿಗಾಗಿ ಬಲೆ ಬೀಸಿದ್ದ ಪೊಲೀಸರು, ಯಶವಂತಪುರದ ತ್ರಿವೇಣಿ ರಸ್ತೆಯಲ್ಲಿರುವ ಕರೀಮಣಿ ಕೊಳಚೆ ಪ್ರದೇಶದ ನಿವಾಸಿ ಮೂರ್ತಿ ಅಲಿಯಾಸ್ ಹಲ್ಲುಜ್ಜ ಎಂಬಾತನನ್ನು ಬಂಧಿಸಿ, ವಿಚಾರಣೆ ನಡೆಸಿದರು. ವಿಚಾರಣೆ ವೇಳೆ ಆರೋಪಿ ಬಾಯಿ ಬಿಟ್ಟಿದ್ದಾನೆ.
ತನಿಖೆ ಪೂರ್ಣಗೊಳಿಸಿದ ಪೊಲೀಸರು ದೋಷಾರೋಪ ಪಟ್ಟಿಸಲ್ಲಿಸಿದ್ದರು. ಪ್ರಕರಣವನ್ನು ಸುದೀರ್ಘವಾಗಿ ವಿಚಾರಣೆ ನಡೆಸಿದ ಬೆಂಗಳೂರಿನ 1ನೇ ಎಫ್ಟಿಎಸ್ಸಿ ನ್ಯಾಯಾಧೀಶೆ ಕೆ.ಎನ್.ರೂಪ ದೋಷಿಗೆ ಮರಣ ದಂಡನೆ ವಿಧಿಸಿ ಆದೇಶ ಹೊರಡಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:13 pm, Sat, 19 November 22