ಆನೇಕಲ್, ಸೆ.2: ಮನೆಗಳಿಗೆ ನುಗ್ಗಿ ಮನೆಯಲ್ಲಿದ್ದವರ ಕೈಕಾಲು ಕಟ್ಟಿಹಾಕಿ ದರೋಡೆ ನಡೆಸುತ್ತಿದ್ದ ಗ್ಯಾಂಗ್ ಅನ್ನು ಬಂಧಿಸಿದ ಘಟನೆ ಬೆಂಗಳೂರು (Bengaluru) ನಗರ ಜಿಲ್ಲೆಯ ಆನೇಕಲ್ ತಾಲೂಕಿನಲ್ಲಿ ನಡೆದಿದೆ. ಒಟ್ಟು ಮೂರು ಪ್ರಕರಣಗಳಿಗೆ ಸಂಬಂಧಿಸಿದಂತೆ ಆನೇಕಲ್ ಉಪವಿಭಾಗದ ಅತ್ತಿಬೆಲೆ ಠಾಣಾ ಪೊಲೀಸರು, ಆರು ಮಂದಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಎನ್.ಸತೀಶ್ ಕುಮಾರ್, ಮಣಿಕಂಠನ್, ಸತೀಶ್, ಅಯ್ಯನಾರ್, ಕಿರಣ್, ಸತೀಶ್ ಅಲಿಯಾಸ್ ಮಟನ್ ಸತೀಶ್ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರೆಲ್ಲರು ತಮಿಳುನಾಡಿನ ಹೊಸೂರು ಮೂಲದವರಾಗಿದ್ದಾರೆ. ಆರೋಪಿಗಳು ನಡೆಸಿದ ದರೋಡೆ ಪ್ರಕರಣಗಳ ವಿವರಗಳು ಇಲ್ಲಿವೆ.
ಅತ್ತಿಬೆಲೆಯ ಕುಮಾರ್ ಲೇಔಟ್ನಲ್ಲಿ ಕಳೆದ ವರ್ಷ ನವೆಂಬರ್ 28 ರಂದು ಎಲ್ಐಸಿ ಏಜೆಂಟ್ ಆಗಿದ್ದ ದೇವರಾಜೇಗೌಡ ಅವರ ಮನೆಯಲ್ಲಿ ದರೋಡೆ ನಡೆಸಲಾಗಿತ್ತು. ಎಲ್ಐಸಿ ಪಾಲಿಸಿ ಮಾಡಿಸಬೇಕೆಂದು ಮನೆಗೆ ಎರಡು ಮೂರು ಬಾರಿ ಬಂದು ಹೋಗಿದ್ದ ಅಸಾಮಿಗಳು, ನಂತರ ಮನೆಯಲ್ಲಿ ದೇವರಾಜೇಗೌಡ ಹಾಗೂ ಪತ್ನಿ ಮಂಜುಳ ಮನೆಯಲ್ಲಿದ್ದಾಗ ಮಾರಕಾಸ್ತ್ರಗಳನ್ನ ತೋರಿಸಿ ಕೈಕಾಲು, ಬಾಯಿಗೆ ಸೆಲೋ ಟೇಪ್ ಹಾಕಿ ದರೋಡೆ ನಡೆಸಿದ್ದರು.
ಇದನ್ನೂ ಓದಿ: Viral News: ದರೋಡೆಗೆ ಬಂದು ಬ್ಯಾಂಕನ್ನು ಹೊಗಳಿ ಹೋದ ಕಳ್ಳ!
ಸುಮಾರು 12,50,000 ಮೌಲ್ಯದ ಚಿನ್ನಾಭರಣ ಹಾಗೂ ಹಣವನ್ನ ಕದ್ದು ಪರಾರಿಯಾಗಿದ್ದ ಆರೋಪಿಗಳ ಪೈಕಿ ಮಣಿಕಂಠನ್ ಎಂಬಾತ ದೇವರಾಜೇಗೌಡರ ಮನೆಯ ಸಮೀಪವೇ ಬಾಡಿಗೆಗೆ ಇದ್ದನು. ಮನೆಯಲ್ಲಿ ಯಾರ್ಯಾರು ಇದ್ದರು ಎಂಬ ಸಂಪೂರ್ಣ ಮಾಹಿತಿಯನ್ನು ಈತ ತಿಳಿದುಕೊಂಡಿದ್ದ.
ಹೊಸಕೋಟೆಯ ಅನುಗೊಂಡನಹಳ್ಳಿಯಲ್ಲಿ ಜನವರಿ 23 ರಂದು ಮನೆಗಳ್ಳತನ ಪ್ರಕರಣ ನಡೆದಿತ್ತು. ನಾರಾಯಣಸ್ವಾಮಿ ಎಂಬುವವರ ಮನೆಗೆ ನುಗ್ಗಿದ ಆರೋಪಿಗಳು ಚಾಕು ತೋರಿಸಿ ಕಳ್ಳತನ ಮಾಡಿ ಪರಾರಿಯಾಗಿದ್ದರು.
ಆನೇಕಲ್ ಪಟ್ಟಣದಲ್ಲಿ ಕೀರ್ತನಾ ಎಂಬ ಯುವತಿಯನ್ನು ಮನೆಯಲ್ಲಿ ಕಟ್ಟಿ ಹಾಕಿ ಚಿನ್ನಾಭರಣ ದೋಚಿ ಆರೋಪಿಗಳು ಪರಾರಿಯಾಗಿದ್ದರು.
ಸದ್ಯ ಆರೋಪಿಗಳನ್ನು ಬಂಧಿಸಿದ ಪೊಲೀಸರು, ಒಟ್ಟು ಮೂರು ಪ್ರಕರಣಗಳಿಗೆ ಸಂಬಂಧಿಸಿದಂತೆ 11 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶ ಪಡೆಸಿಕೊಂಡಿದ್ದಾರೆ. ಪ್ರಕರಣ ಭೇದಿಸಿದ ಅತ್ತಿಬೆಲೆ ಪೋಲೀಸರಿಗೆ ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಅವರು ಪ್ರಶಂಸನಾ ಪತ್ರ ನೀಡಿ ಅಭಿನಂದಿಸಿದರು.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ