ಬೆಂಗಳೂರಲ್ಲಿ ಹೃದಯಾಘಾತದಿಂದ ಪೊಲೀಸ್ ಕಾನ್ಸ್ಟೇಬಲ್ ಸಾವು
ಹೃದಯಾಘಾತದಿಂದ ಪೊಲೀಸ್ ಕಾನ್ಸ್ಟೇಬಲ್ ಸಾವನ್ನಪ್ಪಿರುವಂತಹ ಘಟನೆ ನಗರದಲ್ಲಿ ನಡೆದಿದೆ. ಮಹಾಂತೇಶ್ ಬಿರಾದಾರ್ ಮೃತ ಪೊಲೀಸ್ ಕಾನ್ಸ್ಟೇಬಲ್.
ಬೆಂಗಳೂರು: ಇಂದು ಬೆಳಗ್ಗೆ ಹೃದಯಾಘಾತದಿಂದ ಪೊಲೀಸ್ ಕಾನ್ಸ್ಟೇಬಲ್ (Police constable) ಸಾವನ್ನಪ್ಪಿರುವಂತಹ ಘಟನೆ ನಗರದಲ್ಲಿ ನಡೆದಿದೆ. ಮಹಾಂತೇಶ್ ಬಿರಾದಾರ್ ಮೃತ ಪೊಲೀಸ್ ಕಾನ್ಸ್ಟೇಬಲ್. ವೈಟ್ಫೀಲ್ಡ್ ಠಾಣೆಯಲ್ಲಿ ಮಹಾಂತೇಶ್ ಕರ್ತವ್ಯ ನಿರ್ವಹಿಸುತ್ತಿದ್ದರು. ಮತ್ತೊಂದು ಪ್ರಕರಣದಲ್ಲಿ ರಜೆಗೆಂದು ತಮ್ಮ ಊರಿಗೆ ಬಂದಿದ್ದ ಸೈನಿಕ (soldier) ಟ್ರ್ಯಾಕ್ಟರ್ ಮೇಲಿಂದ ಬಿದ್ದು ಸಾವನ್ನಪ್ಪಿರುವಂತಹ ಘಟನೆ ಧಾರವಾಡ ತಾಲೂಕಿನ ಗರಗ-ಲೋಕೂರ ಕ್ರಾಸ್‌ನಲ್ಲಿ ನಡೆದಿದೆ. ನಾಗಪ್ಪ ಉದ್ಮೀಶಿ (27) ಮೃತ ಸೈನಿಕ. ಧಾರವಾಡ ತಾಲೂಕಿನ ಹಾರೋಬೆಳವಡಿ ಗ್ರಾಮದವರು ಎಂದು ಗುರುತಿಸಲಾಗಿದೆ. ಗ್ರಾಮಸ್ಥರೊಂದಿಗೆ ಗರಗ ಮಡಿವಾಳೇಶ್ವರ ಜಾತ್ರೆ ಬಂದಿದ್ದು, ಬಳಿಕ ಜಾತ್ರೆ ಮುಗಿಸಿಕೊಂಡು ವಾಪಸ್ಸ್ ಮರಳುತ್ತಿದ್ದಾಗ ಟ್ರ್ಯಾಕ್ಟರ್‌ನಿಂದ ಕೆಳಗೆ ಬಿದ್ದು ತಲೆಗೆ ಪೆಟ್ಟಾಗಿ ದುರ್ಘಟನೆ ನಡೆದಿದೆ. ಗರಗ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.
ಆಕಸ್ಮಿಕ ಅಗ್ನಿ ಅವಘಡ-2 ಮೊಬೈಲ್ ಅಂಗಡಿಗಳು ಬೆಂಕಿಗಾಹುತಿ
ಬೆಂಗಳೂರು ಗ್ರಾಮಾಂತರ: ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿ 2 ಮೊಬೈಲ್ ಅಂಗಡಿಗಳು ಬೆಂಕಿಗಾಹುತಿಯಾಗಿರುವಂತಹ ಘಟನೆ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರ ಬಸ್ ನಿಲ್ದಾಣದಲ್ಲಿ ನಡೆದಿದೆ. ಎರಡು ಮೊಬೈಲ್ ಅಂಗಡಿಗಳ ಜೊತೆಗೆ ಕೆಎಸ್ಆರ್ಟಿಸಿ ಕಚೇರಿ ಕೂಡ ಬೆಂಕಿಗಾಹುತಿ ಆಗಿದೆ. ಬೆಂಕಿ ಕಾಣಿಸುತ್ತಿದ್ದಂತೆ ಅಂಗಡಿಗಳಿಂದ ಜನರು ಹೊರ ಓಡಿ ಬಂದಿದ್ದಾರೆ. ಮೊಬೈಲ್ ಅಂಗಡಿಯಲ್ಲಿದ್ದ ಫೋನ್ಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ತಕ್ಷಣ ಟ್ಯಾಂಕರ್ಗಳ ಮೂಲಕ ಸ್ಥಳಿಯರು ಬೆಂಕಿ ನಂದಿಸಿದ್ದಾರೆ. ವಿಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.
ಇದನ್ನೂ ಓದಿ: ಸಕಲೇಶಪುರ: ಪಶ್ಚಿಮ ಘಟ್ಟದ ಕಾಡ್ಗಿಚ್ಚಿಗೆ ಸಿಲುಕಿ ಬೆಂದು ಹೋಗಿದ್ದ ಫಾರೆಸ್ಟ್ ಗಾರ್ಡ್ ಬೆಂಗಳೂರು ಆಸ್ಪತ್ರೆಯಲ್ಲಿ ಸಾವು
ಕಾಡ್ಗಿಚ್ಚು ನಂದಿಸಲು ಹೋಗಿದ್ದ ನಾಲ್ವರು ಅರಣ್ಯ ಸಿಬ್ಬಂದಿಗೆ ತಗುಲಿದ ಬೆಂಕಿ
ಹಾಸನ: ಕಾಡ್ಗಿಚ್ಚು ನಂದಿಸಲು ಹೋಗಿದ್ದ ನಾಲ್ವರು ಅರಣ್ಯ ಸಿಬ್ಬಂದಿ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿರುವಂತಹ ಘಟನೆ ಜಿಲ್ಲೆಯ ಸಕಲೇಶಪುರ ತಾಲೂಕಿನ ಕಾಡುಮನೆ ಎಸ್ಟೇಟ್ ಬಳಿ ನಡೆದಿದೆ. ಆರ್‌ಆರ್‌ಟಿ ಸಿಬ್ಬಂದಿಯಾದ ತುಂಗೇಶ್ ಹಾಗೂ ಮಹೇಶ್‌ಗೆ ಗಾಯಗಳಾಗಿದ್ದು, ಡಿಆರ್‌ಎಫ್‌ಒ ಮಂಜುನಾಥ್, ಫಾರೆಸ್ಟರ್ ಸುಂದರೇಶ್ ಗಂಭೀರ ಗಾಯಗಳಾಗಿದ್ದು ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳನ್ನು ಅರಣ್ಯದಿಂದ 5 ಕಿ.ಮೀ ದೂರ ಗ್ರಾಮಸ್ಥರು ಹೊತ್ತುತಂದಿದ್ದಾರೆ. ಸದ್ಯ ಗಾಯಾಳುಗಳಿಗೆ ಸಕಲೇಶಪುರ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ: ಲೇಔಟ್ ಪರವಾನಗಿ ನೀಡಲು ಲಂಚಕ್ಕೆ ಕೈಯೊಡ್ಡಿದ ಅಧಿಕಾರಿಗಳು ಲೋಕಾಯುಕ್ತ ಬಲೆಗೆ
ಕಾಡುಮನೆ ಗ್ರಾಮದ ಮಣಿಬೀಡು ದೇವಸ್ಥಾನದ ಸಮೀಪ ಪಶ್ಚಿಮಘಟ್ಟದ ಕಾಡಿನಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ. ಕಾಡ್ಗಿಚ್ಚನ್ನು ನಂದಿಸಲು ನಾಲ್ವರು ಅರಣ್ಯ ಇಲಾಖೆ ಸಿಬ್ಬಂದಿಗಳು ಹೋಗಿದ್ದು, ಈ ವೇಳೆ ಬೆಂಕಿಯಲ್ಲಿ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:47 pm, Sun, 19 February 23