
ಬೆಂಗಳೂರು, ಜನವರಿ 21: ತನ್ನ ವ್ಯಾಪ್ತಿಯಲ್ಲಿದ್ದ ಕೊಲೆ ಪ್ರಕರಣವನ್ನು ನಿರ್ಲಕ್ಷಿಸಿದ್ದಕ್ಕೆ ಕರ್ತವ್ಯ ಲೋಪದ ಆರೋಪದ ಮೇಲೆ ಜ್ಞಾನಭಾರತಿ ಠಾಣೆ ಇನ್‌ಸ್ಪೆಕ್ಟರ್ ಎಂ.ಎಸ್.ರವಿ (Inspector Ravi suspended )ಅಮಾನತುಗೊಳಿಸಿ ನಗರ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಮಂಗಳವಾರ ಆದೇಶಿಸಿದ್ದರು. ಆದರೆ ಈ ಪ್ರಕರಣವೀಗ ಮಹತ್ವದ ತಿರುವು ಪಡೆದಿದ್ದು, ಹವಾಲ ದಂಧೆಯಲ್ಲಿ ತೊಡಗಿಕೊಂಡವ ಮೇಲೆ ದಾಳಿ ನಡೆಸಿದ ಕಾರಣಕ್ಕೆ ಅಧಿಕಾರಿಯನ್ನು ವಜಾಗೊಳಿಸಲಾಯಿತೇ ಎಂಬ ಶಂಕೆ ವ್ಯಕ್ತವಾಗಿದೆ.
ಕಳೆದ ವರ್ಷದ ಸೆಪ್ಟೆಂಬರ್ನಲ್ಲಿ ಮಲ್ಲತ್ತಹಳ್ಳಿಯಲ್ಲಿ ಅನ್ನಪೂರ್ಣೇಶ್ವರಿನಗರ ನಿವಾಸಿ ದೀಪಕ್ ರಾಜ್ (18) ಎಂಬ ಯುವಕನ ಹತ್ಯೆಯಾಗಿತ್ತು. ಆದರೆ, ಜ್ಞಾನಭಾರತಿ ಠಾಣಾಧಿಕಾರಿ ರವಿ ಈ ಕೇಸ್ ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಯಾವುದೇ ಪ್ರಕರಣ ದಾಖಲಿಸಿಕೊಂಡಿರಲಿಲ್ಲ. ಈ ಮಧ್ಯೆ ತಾವರೆಕೆರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದರು. ತನಿಖೆ ವೇಳೆ ಜ್ಞಾನಭಾರತಿ ಠಾಣೆ ವ್ಯಾಪ್ತಿಯಲ್ಲಿ ದುರ್ಘಟನೆ ನಡೆದಿದೆ ಎಂಬುದು ಗೊತ್ತಾಗಿ, ಮತ್ತೆ ಇದೇ ಠಾಣೆಗೆ ಕೇಸ್ ವರ್ಗಾವಣೆ ಮಾಡಿದ್ದರು.
ಹೀಗಾಗಿ ಸೆ.13ರಂದು ಜ್ಞಾನಭಾರತಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದರು. ಈ ಹಿನ್ನೆಲೆಯಲ್ಲಿ ಕರ್ತವ್ಯಲೋಪ ಹಾಗೂ ಕನಿರ್ಲಕ್ಷ್ಯದ ಆರೋಪದ ಮೇರೆಗೆ ಇನ್ಸ್ಪೆಕ್ಟರ್ ರವಿ ವಿರುದ್ಧ ಹಿರಿಯ ಅಧಿಕಾರಿಗಳಿಗೆ ಡಿಸಿಪಿ ವರದಿ ನೀಡಿದ್ದರು. ಆದರೆ ಅಧಿಕಾರಿಯ ಅಮಾನತಿನ ಹಿಂದೆ ಬೇರೆಯೇ ಕಾರಣವಿದೆಯೇ ಎಂಬ ಅನುಮಾನವೀಗ ಕಾಡುತ್ತಿದೆ.
ಜನವರಿ 15ರ ಮುಂಜಾನೆ ನಾಗರಬಾವಿ ಪ್ರದೇಶದಿಂದ ತಮಿಳುನಾಡಿನತ್ತ ಸಾಗುತ್ತಿದ್ದ ಹವಾಲ ಹಣದ ಕುರಿತು ಖಚಿತ ಮಾಹಿತಿ ಪಡೆದಿದ್ದ ಇನ್ಸ್ಪೆಕ್ಟರ್ ರವಿ ಹಾಗೂ ಅವರ ತಂಡ ಆರೋಪಿಗಳನ್ನು ಚೇಸ್ ಮಾಡಿ ನೈಸ್ ರಸ್ತೆ ಟೋಲ್ ಬಳಿ ಕಾರನ್ನು ತಡೆದಿದ್ದರು. ಈ ವೇಳೆ ಹುಳಿಮಾವು ಠಾಣೆಯ ಪೊಲೀಸರಿಗೆ ಸಹ ಸಹಾಯಕ್ಕಾಗಿ ಮಾಹಿತಿ ನೀಡಲಾಗಿದ್ದು, ಬಳಿಕ ಜಂಟಿಯಾಗಿ ದಾಳಿ ನಡೆಸಲಾಗಿದೆ.
ಪೊಲೀಸರು ತಡೆದ ಹುಂಡೈ ಐ-10 ಕಾರಿನ ಪರಿಶೀಲನೆ ವೇಳೆ ಸುಮಾರು 1 ಕೋಟಿ 5 ಲಕ್ಷ ರೂ. ನಗದು ಹಣ ಪತ್ತೆಯಾಗಿದ್ದು, ಹಣವನ್ನು ಸೀಜ್ ಮಾಡಲಾಗಿತ್ತು. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸಿದ್ದಾರ್ಥ, ಸಾಂಬಶಿವ ಹಾಗೂ ದಿನೇಶ್ ಎಂಬ ಮೂವರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗಿತ್ತು. ಆದರೆ ಈ ದಾಳಿಯ ಕುರಿತು ನಗರ ಪೊಲೀಸ್ ಆಯುಕ್ತರು ಹಲವಾರು ಪ್ರಶ್ನೆಗಳನ್ನಿಟ್ಟಿದ್ದಾರೆ.
ಇದನ್ನೂ ಓದಿ ಪ್ರೀತಿಸಿ ಮದುವೆಯಾಗಿ ನಾಲ್ಕೇ ನಾಲ್ಕು ತಿಂಗಳು, ಮೂವರು ಪುರುಷರೊಂದಿಗೆ ಸಿಕ್ಕಿಬಿದ್ದ ಪತ್ನಿಯ ಕೊಲೆಗೈದ ಪತಿ
ಈ ಎಲ್ಲ ಪ್ರಶ್ನೆಗಳ ಹಿನ್ನೆಲೆಯಲ್ಲಿ ಸಂಪೂರ್ಣ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಎಲೆಕ್ಟ್ರಾನಿಕ್ ಸಿಟಿ ಡಿಸಿಪಿಗೆ ನಿರ್ದೇಶನ ನೀಡಿದ್ದಾರೆ. ಹವಾಲ ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ಎಚ್ಚರಿಕೆ ನೀಡಿದ್ದಾರೆ. ಸದ್ಯ ಇನ್ಸ್ಪೆಕ್ಟರ್ ರವಿ ನೀಡಿದ ದೂರಿನ ಆಧಾರದಲ್ಲಿ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಣದ ಒಂದು ಭಾಗ ಮಿಸ್ ಆಗಿರುವ ಆರೋಪವೂ ಕೇಳಿಬರುತ್ತಿದೆ. ಇದನ್ನೇ ಮನಸಲ್ಲಿಟ್ಟುಕೊಂಡು, ಕಳೆದ ವರ್ಷದ ಪ್ರಕರಣದ ಸಬೂಬು ಕೊಟ್ಟು ಇನ್ಸ್ಪೆಕ್ಟರ್ ರವಿಯನ್ನು ವಜಾಗೊಳಿಸಿದ್ದಾರೆಯೇ ಎಂಬ ಶಂಕೆ ವ್ಯಕ್ತವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.