1 ಕೋಟಿ ರೂ. ದರೋಡೆ ಮಾಡಿದವರ ಅರ್ಧ ಗಂಟೇಲಿ ಖೆಡ್ಡಾಕ್ಕೆ ಕೆಡವಿದ ಬೆಂಗಳೂರು ಪೊಲೀಸರು! ರೋಚಕ ಕಾರ್ಯಾಚರಣೆ ಹೇಗಿತ್ತು ಗೊತ್ತಾ?

ಅದೊಂದು ನಟೋರಿಯಸ್ ಗ್ಯಾಂಗ್. ಉದ್ಯಮಿಗಳನ್ನೇ ಗುರಿಯಾಗಿಸಿ ದಾಳಿ ಮಾಡುತ್ತಿದ್ದ ದರೋಡೆಕೊರರು ವ್ಯವಹಾರದ ವಿಚಾರ ಸಂಗ್ರಹಿಸಿ ದರೋಡೆ ಸಂಚು ಹೂಡುತ್ತಿದ್ದರು. ಅಡಿಕೆ ಉದ್ಯಮಿ ಬಳಿ ಕಂತೆ ಕಂತೆ ಹಣ ದೋಚಿದ್ದ ಆ ಗ್ಯಾಂಗ್ ಅನ್ನು ಮಿಂಚಿನ ಕಾರ್ಯಾಚರಣೆ ನಡೆಸಿ ಬೆಂಗಳೂರು ಪೊಲೀಸರು ಖೆಡ್ಡಾಕ್ಕೆ ಕೆಡವಿದ್ದಾರೆ. ಕೇವಲ ಅರ್ಧ ಗಂಟೆಯಲ್ಲಿ ಪೊಲೀಸರು ದರೋಡೆಕೋರರ ಹೆಡೆಮುರಿ ಕಟ್ಟಿದ್ದು ಹೇಗೆ ಎಂಬುದನ್ನು ತಿಳಿಯಲು ಮುಂದೆ ಓದಿ.

1 ಕೋಟಿ ರೂ. ದರೋಡೆ ಮಾಡಿದವರ ಅರ್ಧ ಗಂಟೇಲಿ ಖೆಡ್ಡಾಕ್ಕೆ ಕೆಡವಿದ ಬೆಂಗಳೂರು ಪೊಲೀಸರು! ರೋಚಕ ಕಾರ್ಯಾಚರಣೆ ಹೇಗಿತ್ತು ಗೊತ್ತಾ?
ದರೋಡೆಕೋರರಿಂದ ಪೊಲೀಸರು ವಶಪಡಿಸಿಕೊಂಡ ನಗದು
Updated By: Ganapathi Sharma

Updated on: Sep 29, 2025 | 11:13 AM

ಬೆಂಗಳೂರು, ಸೆಪ್ಟೆಂಬರ್ 29: ಅರಸೀಕೆರೆ ಮೂಲದ ಅಡಿಕೆ ವ್ಯಾಪಾರಿ ಹಾಗೂ ಉದ್ಯಮಿ ಮೋಟಾರಾಮ್ ಎಂಬುವರಿಂದ 1.1 ಕೋಟಿ ರೂ. ನಗದು ಹಣವನ್ನು ದೋಚಿದ ದರೋಡೆಕೋರರನ್ನು ಬೆಂಗಳೂರಿನ (Bengaluru) ಹುಳಿಮಾವು ಪೊಲೀಸರು ದರೋಡೆ ನಡೆದ ಕೇವಲ ಅರ್ಧ ಗಂಟೆಯಲ್ಲಿ ಖೆಡ್ಡಾಕ್ಕೆ ಕೆಡವಿದ್ದಾರೆ. ಉದ್ಯಮಿ ಮೋಹನ್ ಅಡಿಕೆ ವ್ಯಾಪಾರಿಯಾಗಿದ್ದು, ತನ್ನ ಸಂಬಂಧಿ ಹೇಮಂತ್ ಎಂಬವರಿಗೆ ಬೆಂಗಳೂರು ನಿವಾಸಿ ಮೋಟರಾಮ್ ಎಂಬುವರ ಬಳಿ ಹಣ ತರಲು ಹೇಳಿದ್ದರು. ಮೋಹನ್ ಮಾಹಿತಿಯಂತೆ ಹುಳಿಮಾವುನ ಅಕ್ಷಯ ನಗರಕ್ಕೆ ಬಂದ ಹೇಮಂತ್, ಮೊಟರಾಮ್​​ಗೆ ಕರೆ ಮಾಡಿದ್ದಾರೆ. ಅಣ್ಣ ಹೇಳಿದ್ದಾರೆ, ಹಣ ಕೊಡಬೇಕಂತೆ ಎಂದಿದ್ದಾರೆ. ಬಳಿಕ ಶನಿವಾರ ಸಂಜೆ ಅಕ್ಷಯನಗರದಲ್ಲಿ ಹಣ ನೀಡಲು ಮೋಟರಾಮ್ ದಂಪತಿ ಬಂದಿದ್ದಾರೆ. ಈ ವೇಳೆ ಕಾರಿನ ಡಿಕ್ಕಿಯಲ್ಲಿ ಎರಡು ಚೀಲ ಹಣ ತುಂಬಿಕೊಂಡು ಬಂದಿದ್ದರು.

ಇನ್ನೇನು ಹೇಮಂತ್ ಹಣ ಪಡೆಯಬೇಕು ಎನ್ನುಷ್ಟರಲ್ಲಿ ಬೈಕ್​ನಲ್ಲಿ ಬಂದ ಇಬ್ಬರು ಆಸಾಮಿಗಳು ಬೆದರಿಸಿದ್ದಾರೆ. ನಂತರ ಅಲ್ಲಿಂದ ಕಾರಿನಲ್ಲಿ ಸ್ಬಲ್ಪ ಮುಂದಕ್ಕೆ ಹೋಗಿದ್ದು, ಈ ವೇಳೆ ಇನ್ನೂ ನಾಲ್ಕೈದು ಬೈಕ್​ಗಳಲ್ಲಿ ಬಂದ ದರೋಡೆಕೋರರ ಗ್ಯಾಂಗ್ ಕಾರನ್ನು ಸುತ್ತುವರಿದು ಅಲ್ಲಿದ್ದ ಮೋಟರಾಮ್ ದಂಪತಿ ಹಾಗೂ ಹೇಮಂತ್​​ಗೆ ಜೀವ ಬೆದರಿಕೆ ಹಾಕಿದ್ದಾರೆ. ಬಳಿಕ ಚೀಲದಲ್ಲಿದ್ದ ಒಂದು ಕೋಟಿಯ ಒಂದು ಲಕ್ಷ ಹಣ ಎಗರಿಸಿ ಎಸ್ಕೇಪ್ ಆಗಿದ್ದಾರೆ.

ಕ್ಷಣಮಾತ್ರದಲ್ಲಿ ಅಲರ್ಟ್ ಆದ ಪೊಲೀಸರು: ರೋಚಕ ಕಾರ್ಯಾಚರಣೆ

ದರೋಡೆ ಗ್ಯಾಂಗ್ ಹಣ ದೋಚುತ್ತಿದ್ದಂತೆಯೇ, ಹೇಮಂತ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆ ಸಂದರ್ಭ, ಸ್ವಲ್ಪ ದೂರದಲ್ಲೇ ಇದ್ದ ಹುಳಿಮಾವು ಪೊಲೀಸರು ಕೂಡಲೇ ಎಚ್ಚೆತ್ತುಕೊಂಡಿದ್ದಾರೆ. ತಕ್ಷಣವೇ ಇತರ ಪೊಲೀಸ್ ಸಿಬ್ಬಂದಿಯನ್ನೂ ಅಲರ್ಟ್ ಮಾಡಿದ್ದಾರೆ. ಪೊಲೀಸರು ಎಲ್ಲೆಡೆಯಿಂದ ಆರೋಪಿಗಳ ಬೆನ್ನತ್ತಿದ್ದಾರೆ. ದರೋಡೆಯಾದ ಕೇವಲ ಎರಡು ಗಂಟೆ ಅವಧಿಯಲ್ಲಿ ನರಸಿಂಹ, ಜೀವನ್, ಕಿಶೋರ್, ವೆಂಕಟರಾಜು, ಚಂದ್ರ ಅಲಿಯಾಸ್ ಚಂದಿರನ್, ಕುಮಾರ್, ರವಿಕಿರಣ್, ನಮನ್ ಎಂಬ ಎಂಟು ಮಂದಿಯನ್ನು ಬಂಧಿಸಿ ಪೊಲೀಸರು 1.1 ಕೋಟಿ ರೂ. ಹಣವನ್ನು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ: ಸೈಬರ್ ವಂಚನೆಯಿಂದ ಪಾರಾಗುವುದು ಹೇಗೆಂದು ವಿವರಿಸಿದ ಸುಧಾಮೂರ್ತಿ: ವಿಡಿಯೋ ನೋಡಿ

ಸದ್ಯ ಈ ಡಕಾಯಿತಿ ಬಗ್ಗೆ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗ್ಯಾಂಗ್ ಬಗ್ಗೆ ಹೆಚ್ಚಿನ ತನಿಖೆ ಕೈಗೊಂಡಿರುವ ಪೊಲೀಸರು ಆರೋಪಿಗಳ ಪೂರ್ವಾಪರ, ಅಪರಾಧ ಕೃತ್ಯಗಳ ಹಿನ್ನೆಲೆ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಕಾರು, ಬೈಕ್​​​ಗಳು ಹಾಗೂ ಹಣ ಜಪ್ತಿಯಾಗಿದ್ದು, ಹೆಚ್ಚಿನ ತನಿಖೆ ಮುಂದುವರೆದಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ