Bengaluru: ಬರೋಬ್ಬರಿ 7.80 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ; ಏನೇನೆಲ್ಲ ಜಪ್ತಿ?
ಭರ್ಜರಿ ಕಾರ್ಯಾಚರಣೆ ನಡೆಸಿರುವ ಸಿಸಿಬಿ ಪೊಲೀಸರು ಬರೋಬ್ಬರಿ 7.80 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ನ್ನು ಬೆಂಗಳೂರಿನಲ್ಲಿ ಜಪ್ತಿ ಮಾಡಿದ್ದಾರೆ. ಘಟನೆ ಸಂಬಂಧ ನೈಜೀರಿಯಾ ಮೂಲದ ಇಬ್ಬರನ್ನು ಬಂಧಿಸಲಾಗಿದ್ದು, ಆರೋಪಿಗಳು ಹೆಬ್ಬಗೋಡಿಯಲ್ಲಿ ವಾಸವಿದ್ದರು. ಟೆಕ್ಕಿಗಳು, ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡಿಕೊಂಡು ವ್ಯವಹಾರ ನಡೆಸುತ್ತಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ.

ಬೆಂಗಳೂರು, ಸೆಪ್ಟೆಂಬರ್ 29: ಸಿಲಿಕಾನ್ ಸಿಟಿಯಲ್ಲಿ ಬರೋಬ್ಬರಿ 7.80 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ನ್ನು (Drugs) ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಘಟನೆ ಸಂಬಂಧ ನೈಜೀರಿಯಾ ಮೂಲದ ಇಬ್ಬರನ್ನು ಬಂಧಿಸಲಾಗಿದ್ದು, ಆರೋಪಿಗಳನ್ನ ಕೆವಿನ್ ರೋಜರ್, ಥಾಮಸ್ ನವೀದ್ ಚೀಮ್ ಎಂದು ಗುರುತಿಸಲಾಗಿದೆ. ದೆಹಲಿ ಮತ್ತು ಮುಂಬಯಿಂದ ಆರೋಪಿಗಳು ಡ್ರಗ್ಸ್ ತರಿಸಿಕೊಳ್ಳುತ್ತಿದ್ದರು ಎನ್ನಲಾಗಿದ್ದು, ಸಿಸಿಬಿ ಹಾಗೂ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಬಂಧಿತರಿಂದ 3.8 ಕೆಜಿ ಎಂಡಿಎಂಎ ಕ್ರಿಸ್ಟಲ್, ಎಂಡಿಎಂಎ ಬ್ರೌನ್ ಹಾಗೂ ವೈಟ್ ಡ್ರಗ್ಸ್, 42 ಗ್ರಾಂ ತೂಕದ 82 ಎಕ್ಸಟೆಸಿ ಮಾತ್ರೆಗಳು, 23 ಕೆ.ಜಿ. ಗಾಂಜಾ ಹಾಗೂ 482 ಗ್ರಾಂ ಹೈಡ್ರೋ ಗಾಂಜಾ ವಶಕ್ಕೆ ಪಡೆಯಲಾಗಿದೆ. ಹೆಬ್ಬಗೋಡಿಯಲ್ಲಿ ಮನೆ ಮಾಡಿದ್ದ ಆರೋಪಿಗಳು, ಪರಿಚಿತ ಸ್ಥಳಗಳಲ್ಲಿ ಡ್ರಗ್ಸ್ ಪಾರ್ಸೆಲ್ ಇಟ್ಟು ಲೊಕೇಶನ್ ಶೇರ್ ಮಾಡಿ ವ್ಯವಹಾರ ನಡೆಸುತ್ತಿದ್ದರು. ಡ್ರಗ್ಸ್ ಹಣವನ್ನ ಆನ್ ಲೈನ್ ಮೂಲಕ ಸ್ವೀಕರಿಸುತ್ತಿದ್ದರು. ಟೆಕ್ಕಿಗಳು, ವಿದ್ಯಾರ್ಥಿಗಳೇ ಇವರ ಟಾರ್ಗೆಟ್ ಆಗಿತ್ತು ಎಂಬುದು ತನಿಖೆ ವೇಳೆ ಬೆಳಕಿಗೆ ಬಂದಿದೆ.
ಇದನ್ನೂ ಓದಿ: 1 ಕೋಟಿ ರೂ. ದರೋಡೆ ಮಾಡಿದವರ ಅರ್ಧ ಗಂಟೇಲಿ ಖೆಡ್ಡಾಕ್ಕೆ ಕೆಡವಿದ ಬೆಂಗಳೂರು ಪೊಲೀಸರು! ರೋಚಕ ಕಾರ್ಯಾಚರಣೆ ಹೇಗಿತ್ತು ಗೊತ್ತಾ?
ರಾಬರಿ ಗ್ಯಾಂಗ್ ಬಂಧನ
ಬೆಂಗಳೂರು ಹೊರವಲಯದಲ್ಲಿ ರಾಬರಿ ನಸಡೆಸುತ್ತಿದ್ದ ಅಪ್ರಾಪ್ತರ ಗ್ಯಾಂಗ್ ಹೆಡೆಮುರಿಕಟ್ಟುವಲ್ಲಿ ಬೆಂಗಳೂರು ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ. ಆರು ಜನ ಅಪ್ರಾಪ್ತರು ಸೇರಿ ಅಪರಾಧ ಹಿನ್ನಲೆ ಇರೋ ಓರ್ವನನ್ನು ಒಳಗೊಂಡಿದ್ದ ತಂಡವನ್ನ ಬಂಧಿಸಲಾಗಿದೆ. ಕೇವಲ ಮೂರು ದಿನಗಳಲ್ಲಿ 37 ಕಡೆ ಈ ಗ್ಯಾಂಗ್ ರಾಬರಿ ನಡೆಸಿತ್ತು. ಮಾದನಾಯಕನಹಳ್ಳಿ, ದೊಡ್ಡಬಳ್ಳಾಪುರ, ಸೂರ್ಯನಗರ, ನೆಲಮಂಗಲ ಹಾಗೂ ಬ್ಯಾಡರಹಳ್ಳಿ ಭಾಗದಲ್ಲಿ ಗ್ಯಾಂಗ್ ಕೈ ಚಳಕ ತೋರಿಸಿ, ಭಾರಿ ಪ್ರಮಾಣದಲ್ಲಿ ಕಳ್ಳತನ ನಡೆಸಿತ್ತು.
ರಾತ್ರಿ ವೇಳೆ ಮೂರು ಬೈಕ್ಗಳಲ್ಲಿ ಸುತ್ತುತ್ತಿದ್ದ ಈ ಖತರ್ನಾಕ್ ಟೀಂ, ಕಾರಿನಲ್ಲಿ ಬರೋರು ಹಾಗೂ ಲಾರಿಗಳನ್ನು ಅಡ್ಡಹಾಕಿ ಸುಲಿಗೆ ಮಾಡುತ್ತಿತ್ತು. ಚಾಕು ತೋರಿಸಿ ಮೊಬೈಲ್, ಹಣ ಪಡೆದು ಆರೋಪಿಗಳು ಎಸ್ಕೇಪ್ ಆಗುತ್ತಿದ್ದರು. ಹಣ ಕೊಡಲು ನಿರಾಕರಿಸಿದ್ರೆ ಚಾಕು ಹಾಕಿ ಓಡಿ ಹೋಗುತ್ತಿದ್ದರು. ಘಟನೆ ಬಳಿಕ ಎಚ್ಚೆತ್ತುಕೊಂಡ ಪೊಲೀಸರು ಸಿಸಿ ಕ್ಯಾಮರಾ ಪರಿಶೀಲಸಿದಾಗ ಪ್ರಕರಣಗಳ ಹಿಂದೆ ಒಂದು ಟೀಂ ಇರೋದು ಗೊತ್ತಾಗಿತ್ತು. ಆರೋಪಿಗಳ ಸೆರೆಗೆ ವಿಶೇಷ ತಂಡ ರಚಿಸಿದ್ದ ಪೊಲೀಸರು ಗ್ಯಾಂಗ್ ಸದಸ್ಯರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ 9 ಮೊಬೈಲ್ ಗಳನ್ನ ವಶಕ್ಕೆ ಪಡೆಯಲಾಗಿದೆ.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:41 am, Mon, 29 September 25



