
ಬೆಂಗಳೂರು, ಅಕ್ಟೋಬರ್ 30: ಐಫೋನ್ 17, ಪ್ರೋಮ್ಯಾಕ್ಸ್, ಸ್ಯಾಮ್ಸಂಗ್ ಎಸ್ 24, ಓಪ್ಪೊ, ರೆಡ್ ಮಿ, ರಿಯಲ್ ಮೀ, ಒನ್‌ಪ್ಲಸ್ ಸರಿದಂತೆ ಕಳವಾಗಿದ್ದ ಸುಮಾರು 3 ಕೋಟಿ ರೂ. ಮೌಲ್ಯದ ವಿವಿಧ ಬ್ರ್ಯಾಂಡ್ಗಳ 1949 ಮೊಬೈಲ್ಗಳನ್ನು ಬೆಂಗಳೂರು (Bengaluru) ನಗರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಳ್ಳರ ಹೆಡೆಮುರಿ ಕಟ್ಟಿದ್ದಾರೆ. ಬೆಂಗಳೂರು ನಗರ ಪೊಲೀಸರು ಬೃಹತ್ ಬೇಟೆಯನ್ನೇ ಆಡಿದ್ದಾರೆ. ಬೆಂಗಳೂರಿನಾದ್ಯಂತ ಒಟ್ಟು 3.36 ಕೋಟಿ ರೂ. ಮೌಲ್ಯದ 1949 ಕಳುವಾದ ಹಾಗೂ ಮಾಲೀಕರು ಕಳೆದುಕೊಂಡಿರುವ ಮೊಬೈಲ್ ಫೋನ್ಗಳನ್ನು ವಶಕ್ಕೆ ಪಡೆದಿದ್ದಾರೆ. ಇವುಗಳನ್ನು ನಗರ ಪೊಲೀಸ್ ಆಯುಕ್ತ ಕಚೇರಿಯಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದು ನಂತರ ಮೊಬೈಲ್ ಕಳೆದುಕೊಂಡ ಮಾಲೀಕರಿಗೆ ಹಿಂದಿರುಗಿಸಿದ್ದಾರೆ.
ಮದನ್,ಶಾಂತಕುಮಾರ್ ಹಾಗೂ ಮೊಹಮ್ಮದ್ ಯಾಸಿನ್ ಎಂಬ ಖದೀಮರು ಒಟ್ಟಿಗೆ ಬಿಎಂಟಿಸಿ ಬಸ್ ಹತ್ತುತ್ತಾ ಇದ್ದರು. ಪ್ರಯಾಣಿಕರ ಗಮನ ಬೇರೆಡೆ ಸೆಳೆದು ಮೊಬೈಲ್ ಕಳ್ಳತನ ಮಾಡುತ್ತಿದ್ದರು. ತಕ್ಷಣ ತಮ್ಮ ಜೊತೆಗೆ ಬಂದವರಿಗೆ ಮೊಬೈಲ್ ಪಾಸ್ ಮಾಡುತ್ತಿದ್ದರು. ಯಾರೂ ಅಕ್ಕ ಪಕ್ಕ ಇಲ್ಲ ಎಂದಾಗ ಅಲ್ಯೂಮಿನಿಯಂ ಫಾಯಿಲ್ನಲ್ಲಿ ಮೊಬೈಲ್ ಸುತ್ತಿ ಜೇಬಲ್ಲಿ ಇಟ್ಟುಕೊಳ್ಳುತ್ತಿದ್ದರು. ಹೀಗೆ ಇಟ್ಟಾಗ ಮೊಬೈಲ್ ನೆಟ್ ವರ್ಕ್ ಸಿಗದೆ ಜಾಮ್ ಆಗುತ್ತದೆ. ಆಗ ಮೊಬೈಲ್ ಮಾಲೀಕ ಕರೆ ಮಾಡಿದರೂ ಕೂಡ ಸ್ವಿಚ್ ಆಫ್ ಬರುತ್ತದೆ. ಈರೀತಿ ಖದೀಮರು ಕೈಚಳಕ ತೋರುತ್ತಿದ್ದರು.
ಇತ್ತ ಕಮಾಂಡ್ ಸೆಂಟರ್ ಅಧಿಕಾರಿ ಮತ್ತು ಸಿಬ್ಬಂದಿ ಕಳವಾದ ಮತ್ತು ಕಳೆದು ಹೋದ ಮೊಬೈ್ಗಳನ್ನು ಪತ್ತೆ ಮಾಡಿದ್ದಾರೆ. ಸಿಇಐಆರ್ ಪೋರ್ಟಲ್ ಮುಖಾಂತರ 894 ಮೊಬೈಲ್ಗಳನ್ನು ಪತ್ತೆ ಮಾಡಿದ್ದರೆ.
ಸಿಇಐಆರ್ ಎಂದರೆ CENTRAL EQUIPMENT IDENTITY REGISTER. ಕಳೆದು ಹೋದ ಮೊಬೈಲ‌್‌ನನ್ನು ಪತ್ತೆ ಮಾಡಲು ಬಳಸುವ ಪೋರ್ಟಲ್ ಇದಾಗಿದ್ದು, ಕಳೆದು ಹೋಗಿರುವ ಮೊಬೈಲ್ನ ಐಎಂಇಐ ನಂಬರ್ ಅನ್ನು ಪೋರ್ಟಲ್ಗೆ ಅಪ್ಲೋಡ್ ಮಾಡಲಾಗುತ್ತದೆ. ಯಾವುದೇ ಸಿಮ್ ಬಳಿಸಿ ಮೊಬೈಲ್ ಆನ್ ಮಾಡಿದಾಗ ದೂರುದಾರ ಹಾಗೂ ಪೊಲೀಸರಿಗೆ ಮೆಸೆಜ್ ಬರುತ್ತದೆ. ಆ್ಯಕ್ಟಿವೇಟ್ ಆಗಿರುವ ಸಿಮ್ ನಂಬರ್ ಸಹ ಈ ಪೋರ್ಟ್ನಲ್ಲಿ ಕಾಣಿಸುತ್ತೆ. ಅಲ್ಲದೇ, ಮೊಬೈಲ್ ಬಳಕೆಯ ಲೊಕೇಶನ್ ಕೂಡ ಗೊತ್ತಾಗುತ್ತದೆ. ಆಗ ಆ ನಂಬರ್ ಟ್ರೇಸ್ ಮಾಡಿ ಮೊಬೈಲ್ ವಶಕ್ಕೆ ಪಡೆಯುವ ಪೊಲೀಸರು ಮಾಲೀಕರಿಗೆ ಹಿಂದಿರುಗಿಸುತ್ತಾರೆ.
ಇದನ್ನೂ ಓದಿ: ಕುಟುಂಬದವರು ಪ್ರಿಯಕರನನ್ನು ಹೊಡೆದು ಕೊಂದಿದ್ದಕ್ಕೆ ತನ್ನ ಕತ್ತು ಸೀಳಿಕೊಂಡ ಯುವತಿ
ಪೊಲೀಸರು ಎಷ್ಟೇ ಮೊಬೈಲ್ ರಿಕವರಿ ಮಾಡಿದರೂ ಕೂಡ ಪ್ರತಿ ದಿನ ಸಾವಿರಾರು ಮೊಬೈಲ್ ಕಳ್ಳರ ಪಾಲಾಗುತ್ತಲೇ ಇದೆ. ಬೇಗ ಹಣ ಮಾಡಲು ಕಳ್ಳರು ಇದನ್ನೇ ಕಾಯಕ ಮಾಡಿಕೊಂಡಿದ್ದಾರೆ. ಇದಕ್ಕೆ ಸಂಪೂರ್ಣವಾಗಿ ಕಡಿವಾಣ ಹಾಕುವ ಕೆಲಸ ಮಾಡಬೇಕಿದೆ.