ಪ್ರದೀಪ್ ಆತ್ಮಹತ್ಯೆ ಪ್ರಕರಣ: ಆರೋಪಿಯ ವಿಚಾರಣೆ ವೇಳೆ ಹೊರಬಿತ್ತು ಪ್ರದೀಪ್ ಜೊತೆಗಿನ ವ್ಯವಹಾರದ ಮಾಹಿತಿ
ಪ್ರದೀಪ್ ಆತ್ಮಹತ್ಯೆ ಪ್ರಕರಣ ಸಂಬಂಧ ಪೊಲೀಸರು ಆರೋಪಿಯನ್ನು ವಿಚಾರಣೆ ನಡೆಸಿದಾಗ ಪ್ರದೀಪ್ ಜೊತೆಗಿನ ವ್ಯವಹಾರದ ಮಾಹಿತಿ ಹೊರಬಿದ್ದಿದೆ.
ಬೆಂಗಳೂರು: ತಲೆಗೆ ಗುಂಡು ಹಾರಿಸಿಕೊಂಡು ಉದ್ಯಮಿ ಪ್ರದೀಪ್ ಆತ್ಮಹತ್ಯೆ ಪ್ರಕರಣದ (Pradeep Suicide Case) ತನಿಖೆಯನ್ನು ಮುಂದುವರಿಸಿದ ಕಗ್ಗಲೀಪುರ ಠಾಣಾ ಪೊಲೀಸರಿಗೆ ಸತ್ಯಸಂಗತಿಯೊಂದು ತಿಳಿದುಬಂದಿದೆ. ಆರೋಪಿ ರಾಘವಭಟ್ ವಿಚಾರಣೆ ವೇಳೆ ಪ್ರದೀಪ್ ಜೊತೆ 10 ಲಕ್ಷ ರೂಪಾಯಿ ವ್ಯವಹಾರ ನಡೆದಿರುವುದು ಪತ್ತೆಯಾಗಿದೆ. ಪ್ರದೀಪ್ ಆತ್ಮಹತ್ಯೆಗೂ ಮುನ್ನ ಬರೆದಿಟ್ಟಿದ್ದ ಡೆತ್ನೋಟ್ನಲ್ಲೂ ಹಣಕಾಸನ ವ್ಯವಹಾರದಲ್ಲಿ ನಡೆದ ವಂಚನೆ ಬಗ್ಗೆ ಉಲ್ಲೇಖಿಸಿದ್ದರು.
ಪ್ರದೀಪ್ ಜೊತೆಗಿನ 10 ಲಕ್ಷ ಡೀಲ್ನಲ್ಲಿ ರಾಘವ ಭಟ್ ನಗದು ಮೂಲಕ 3 ಲಕ್ಷ ವಾಪಸ್ ಕೊಟ್ಟಿದ್ದಾನೆ. ಉಳಿದ 7 ಲಕ್ಷವನ್ನು ಚೆಕ್ ಮೂಲಕ ನೀಡಿದ್ದಾನೆ. ಆದರೆ ಪ್ರದೀಪ್ಗೆ ರಾಘವ ಭಟ್ ನೀಡಿದ್ದ ಚೆಕ್ಬೌನ್ಸ್ ಆಗಿತ್ತು. ಈ ಸಂಬಂಧ ಪ್ರದೀಪ್ ನ್ಯಾಯಾಲಯದಲ್ಲಿ ಚೆಕ್ಬೌನ್ಸ್ ಕೇಸ್ ದಾಖಲಿಸಿದ್ದು, ವಿಚಾರಣೆ ನಡೆಯುತ್ತಿತ್ತು. ಇದನ್ನು ಬಿಟ್ಟರೆ ಬೇರೆ ವ್ಯವಹಾರದಲ್ಲಿ ಪಾತ್ರ ಇರುವುದರ ಬಗ್ಗೆ ಮಾಹಿತಿಯಿಲ್ಲ. ಆತ್ಮಹತ್ಯೆ ಮಾಡಿಕೊಂಡ ದಿನ ರಾಘವ ಭಟ್ ಜೊತೆ ಮಾತನಾಡಿಲ್ಲ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಬಜಾಜ್ ಫೈನಾನ್ಸ್ ಕಾರ್ಡ್ ಗ್ರಾಹಕರೇ.. ನಿಮ್ಮ ಕಾರ್ಡ್ ಬಳಸಿ ಶಾಪಿಂಗ್ ಮಾಡೋ ವಂಚಕರಿದ್ದಾರೆ ಎಚ್ಚರ
ಪ್ರಕರಣ ಸಂಬಂಧ ಡೆತ್ನೋಟ್ನಲ್ಲಿ ಗೋಪಿ, ಸೋಮಯ್ಯ, ರಮೇಶ್ ರೆಡ್ಡಿ ಹೆಸರು ಕೂಡ ಉಲ್ಲೇಖವಾಗಿದ್ದು, ಕಗ್ಗಲಿಪುರ ಠಾಣಾ ಪೊಲೀಸರು ನೋಟಿಸ್ ಜಾರಿ ಮಾಡಿದ್ದರೂ ಮೂವರು ಕೂಡ ವಿಚಾರಣೆಗೆ ಹಾಜರಾಗಿಲ್ಲ. ಹೀಗಾಗಿ ಮತ್ತೊಮ್ಮೆ ನೋಟಿಸ್ ನೀಡಲು ಕಗ್ಗಲೀಪುರ ಪೊಲೀಸರ ಚಿಂತನೆ ನಡೆಸಿದ್ದಾರೆ.
ಏನಿದು ಪ್ರಕರಣ?
ಬಿಜೆಪಿ ಶಾಸಕ ಅರವಿಂದ ಲಿಂಬಾಳಿ ಹೆಸರು ಬರೆದಿಟ್ಟು ದಕ್ಷಿಣ ತಾಲೂಕಿನ ನೆಟ್ಟಿಗೆರೆ ಗ್ರಾಮದ ಬಳಿ ಕಾರಿನಲ್ಲೇ ತಲೆಗೆ ಗುಂಡು ಹಾರಿಸಿಕೊಂಡು ಉದ್ಯಮಿ ಪ್ರದೀಪ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಮಾಜಿ ಸಚಿವ ಅರವಿಂದ ಲಿಂಬಾವಳಿ, ಜಿ.ರಮೇಶ್ ರೆಡ್ಡಿ, ಕೆ.ಗೋಪಿ, ಜಯರಾಮ್ ರೆಡ್ಡಿ, ರಾಘವ ಭಟ್, ಸೋಮಯ್ಯ ಹೆಸರು ಉಲ್ಲೇಖಿಸಿ 6 ಜನರ ಮೇಲೆ ಕ್ರಮ ಜರುಗಿಸಿ ನನ್ನ ಸಾವಿಗೆ ನ್ಯಾಯ ಒದಗಿಸಿ ಎಂದು ಪ್ರದೀಪ್ ಡೆತ್ನೋಟ್ನಲ್ಲಿ ಮನವಿ ಮಾಡಿದ್ದಾರೆ. ಹೆಸರಿನ ಮುಂದೆ ಮೊಬೈಲ್ ನಂಬರ್ ಬರೆದು ಪ್ರದೀಪ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಣಕಾಸಿನ ವ್ಯವಹಾರದಲ್ಲಿ ವಂಚನೆ ಸಂಬಂಧ ಪ್ರದೀಪ್ ಆತ್ಮಹತ್ಯೆ ಮಾಡಿಕೊಂಡಿದ್ದು, ಕೆ.ಗೋಪಿ ಮತ್ತು ಸೋಮಯ್ಯ ಅವರಿಗೆ ಅರವಿಂದ ಲಿಂಬಾವಳಿ ಅವರು ಬೆಂಬಲ ನೀಡಿದ್ದಾರೆ ಎಂದು ಪ್ರದೀಪ್ ಉಲ್ಲೇಖಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ