ಬೆಂಗಳೂರು, ಜುಲೈ.01: ಜಯನಗರ ಅಶೋಕ ಪಿಲ್ಲರ್ ಬಳಿ ಇರುವ ಹಳೆಯ ಹೆರಿಗೆ ಆಸ್ಪತ್ರೆಯನ್ನ ಸದ್ಯಕ್ಕೆ ತಾತ್ಕಾಲಿಕವಾಗಿ ಸ್ಥಳಾಂತರ ಮಾಡಲಾಗಿದೆ. ಆದ್ರೆ, ಇದೇ ಆವರಣದಲ್ಲಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನ ಮಾತ್ರ ಇಲ್ಲೇ ಇರಿಸಲಾಗಿದೆ. ಈ ಕಟ್ಟಡದ ಪರಿಸ್ಥಿತಿ ನೋಡಿದ್ರೆ ರೋಗ ವಾಸಿ ಆಗೋಕ್ಕಿಂತ ಯಾವಾಗ ತಲೆ ಮೇಲೆ ಈ ಕಟ್ಟಡದ ಸಿಮೆಂಟ್ ಬೀಳುತ್ತದೆಯೋ ಅಂತ ಅನಿಸುತ್ತಿದೆ. ಇನ್ನು ಪ್ರಮುಖವಾಗಿ ಈ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಸುಮಾರು ನಾಲ್ಕೈದು ಬಿಬಿಎಂಪಿ (BBMP) ವಾಹನಗಳು ನಿಂತಿದ್ದಾವೆ. ಜೊತೆಗೆ ಕಟ್ಟಡದ ಸುತ್ತ ಕಸದ ರಾಶಿಯನ್ನ ಸುರಿಯಲಾಗಿದೆ. ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳಿಗೆ ದೂರು ಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲ ಅಂತ ದೂರುದಾರರು ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.
ಇನ್ನೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ನಿಜಕ್ಕೂ ಕಣ್ಣು ಮುಚ್ಚಿ ಕುಳಿತಿದ್ದೀರಾ? ಅಥವಾ ನಿಮ್ಮ ಕುಮ್ಮಕ್ಕಿನಲ್ಲೇ ಈ ರೀತಿ ಮಾಡ್ತಿದ್ದಾರಾ ಅನ್ನೋ ಪ್ರಶ್ನೆ ಮೂಡದೇ ಇರದು. ಸಂಪೂರ್ಣ ಗಬ್ಬೇದ್ದು ನಾರುತ್ತಿವೆ ಅಶೋಕ ಪಿಲ್ಲರ್ ಬಳಿಯಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ. ಇಲ್ಲಿ ಬಂದ್ರೆ ರೋಗ ವಾಸಿಯಾಗೋದ್ ಇರಲಿ, ಹೊಸ ರೋಗ ಬರದಿದ್ದರೆ ಸಾಕು ಎನ್ನುವಷ್ಟು ಹೀನ ಪರಿಸ್ಥಿತಿಯಿದೆ.
ಇದನ್ನೂ ಓದಿ: ಪ್ರತಿ 2 ಗಂಟೆಗೆ ಇಬ್ಬರಲ್ಲಿ ಡೆಂಗ್ಯೂ ಲಕ್ಷಣ ಪತ್ತೆ; ಬೆಂಗಳೂರಿನಲ್ಲಿ 2457 ಪ್ರಕರಣ
ಆರೋಗ್ಯ ಕೇಂದ್ರದ ಸುತ್ತ ಕಸ ತಂದು ಸುರಿದಿರುವ ಬಿಬಿಎಂಪಿ ಅಧಿಕಾರಿಗಳು, ಸಿಬ್ಬಂದಿಗಳಿಗೆ ಇಲ್ಲಿ ಸುರಿಯಬೇಡಿ ಎಂದು ಹೇಳಿದ್ರೂ ಕ್ಯಾರೆ ಅಂದಿಲ್ಲ. ಇದರಿಂದ ಪ್ರತಿದಿನ ಜೀವನ ಮಾಡುವುದಕ್ಕೆ ಕಷ್ಟ ಆಗಿದೆ. ಉಸಿರಾಡಲು ಆಗ್ತಿಲ್ಲ. ಮನೆ ತುಂಬಾ ಇಲಿ ಹೆಗ್ಗಣ್ಣಗಳ ಕಾಟ ಆಗಿದೆ. ಡೆಂಗ್ಯೂ ಕಾಯಿಲೆ ಹೆಚ್ಚಾಗ್ತಿದೆ. ನಮಗೆ ತುಂಬಾ ಭಯ ಆಗ್ತಿದೆ ಎಂದು ಪಕ್ಕದ ಮನೆಯ ನಿವಾಸಿ ಸುಮ ಆತಂಕ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ ಬಿಬಿಎಂಪಿಯ ಕೆಲ ಅಧಿಕಾರಿಗಳು ಸಿಬ್ಬಂದಿಗಳಿಂದ ಜನರು ನರಕ ಯಾತನೆ ಅನುಭವಿಸುವಂತಾಗಿದೆ. ಆಸ್ಪತ್ರೆ ಇರೋ ಜಾಗದಲ್ಲಿ ಡಂಪಿಂಗ್ ಯಾರ್ಡ್ ರೀತಿ ಕಸ ಹಾಕಿದ್ರೆ ಎಷ್ಟು ಸರಿ. ಇನ್ನಾದ್ರೂ ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳಲಿ ಎನ್ನುವುದೇ ನಮ್ಮ ಒತ್ತಾಯ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:36 am, Mon, 1 July 24