ಬೆಂಗಳೂರು: ಕರ್ನಾಟಕದಲ್ಲಿ 2 ದಿನಗಳಿಂದ ಮುಂಗಾರು ಮಳೆಯ (Monsoon) ಆರ್ಭಟ ಜೋರಾಗಿದೆ. ಬೆಂಗಳೂರಿನಲ್ಲಿ (Bengaluru Rains) ನಿನ್ನೆ ಸುರಿದ ಭಾರೀ ಮಳೆಗೆ ಜನರು ಕಂಗಾಲಾಗಿದ್ದಾರೆ. ವರುಣನ ಆರ್ಭಟಕ್ಕೆ ಬೆಂಗಳೂರಿನ ತಗ್ಗುಪ್ರದೇಶಗಳೆಲ್ಲ ಜಲಾವೃತವಾಗಿವೆ. ಶುಕ್ರವಾರ ಮಧ್ಯಾಹ್ನದಿಂದ ಮಧ್ಯರಾತ್ರಿಯವರೆಗೆ ಮಳೆ ಸುರಿದಿದ್ದು, ಓರ್ವ ಸಿವಿಲ್ ಇಂಜಿನಿಯರ್ ಕೊಚ್ಚಿ ಹೋಗಿದ್ದಾರೆ. ಹಾಗೇ, ಇನ್ನೋರ್ವ ವೃದ್ಧೆ ಸಾವನ್ನಪ್ಪಿದ್ದಾರೆ. ಮಳೆಯಿಂದ ರಸ್ತೆಯ ತುಂಬ ನೀರು ನಿಂತಿದ್ದು, ಹೆಬ್ಬಾಳದ ಟ್ರಾಫಿಕ್ ಪೊಲೀಸ್ ಒಬ್ಬರು ನಿನ್ನೆ ರಾತ್ರಿ ಮಳೆಯಲ್ಲಿಯೇ ರಸ್ತೆಯ ಪಕ್ಕ ಚರಂಡಿಯ ಬಳಿ ಸಿಲುಕಿಕೊಂಡಿದ್ದ ಕಸವನ್ನು ಕ್ಲೀನ್ ಮಾಡಿ, ರಸ್ತೆಯಲ್ಲಿ ನಿಂತಿದ್ದ ಮಳೆನೀರು ಹರಿದು ಹೋಗುವಂತೆ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹೆಬ್ಬಾಳ ಸಂಚಾರ ಪೊಲೀಸ್ ಠಾಣೆಯ ಜಗದೀಶ್ ರೆಡ್ಡಿ ಎಂಬ ಟ್ರಾಫಿಕ್ ಪೊಲೀಸ್ ಹೆಬ್ಬಾಳದಲ್ಲಿ ಚರಂಡಿ ನೀರು ಹರಿದುಹೋಗದಂತೆ ಮರದ ಎಲೆಗಳು, ಕಸ ಸಿಕ್ಕಿಹಾಕಿಕೊಂಡಿರುವುದನ್ನು ಗಮನಿಸಿದ್ದರು. ತಾವೇ ಖುದ್ದಾಗಿ ಆ ಬ್ಲಾಕ್ ಆಗಿದ್ದ ಜಾಗವನ್ನು ಸ್ವಚ್ಛಗೊಳಿಸಿರುವ ಅವರು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಹೆಬ್ಬಾಳ ಟ್ರಾಫಿಕ್ ಪೊಲೀಸ್ ಟ್ವಿಟ್ಟರ್ ಪೇಜಿನಲ್ಲಿ ಈ ವಿಡಿಯೋ ಶೇರ್ ಮಾಡಿಕೊಳ್ಳಲಾಗಿದೆ. ಟ್ರಾಫಿಕ್ ಪೊಲೀಸ್ನ ಈ ಕೆಲಸಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಹೆಬ್ಬಾಳ ಸಂಚಾರ ಠಾಣೆಯ (ಕೋಬ್ರಾ -01) ಜಗದೀಶ ರೆಡ್ಡಿ ರವರು ಹೆಬ್ಬಾಳ ಅಪರ್ಯಾಂಪ್ ನಲ್ಲಿ ವಾಟರ್ ಲಾಂಗಿಗ್ ಆಗಿದ್ದು ಅದನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿರುತ್ತಾರೆ.@BlrCityPolice @DCPTrNorthBCP pic.twitter.com/4weCk4YIQT
— HEBBALA TRAFFIC PS (@hebbaltrafficps) June 17, 2022
ಬೆಂಗಳೂರಿನಲ್ಲಿ ಶುಕ್ರವಾರ ಸಂಜೆ ಸುರಿದ ಮಳೆ ಭಾರೀ ಅನಾಹುತ ಸೃಷ್ಟಿ ಮಾಡಿದೆ. ತುಂಬಿ ಹರಿಯುತ್ತಿದ್ದ ರಾಜಕಾಲುವೆಯಲ್ಲಿ 24 ವರ್ಷದ ಶಿವಮೊಗ್ಗದ ಸಿವಿಲ್ ಇಂಜಿನಿಯರ್ ಯುವಕನೊಬ್ಬ ಕೊಚ್ಚಿ ಹೋಗಿದ್ದಾನೆ. ಈತ ಕೆಆರ್ ಪುರಂ ವ್ಯಾಪ್ತಿಯ ಗಾಯತ್ರಿ ಲೇಔಟ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಎನ್ನಲಾಗಿದೆ. ನಿನ್ನೆ ರಾತ್ರಿ 11ರಿಂದ 12ರ ನಡುವೆ ಸುರಿದ ಮಳೆಗೆ ಚರಂಡಿಗೆ ಹೊಂದಿಕೊಂಡಿರುವ ಕಾಂಪೌಂಡ್ ಗೋಡೆ ಕುಸಿದು ಮನೆ ಬಳಿ ನಿಲ್ಲಿಸಿದ್ದ ಬೈಕ್‌ಗಳ ಮೇಲೆ ಬಿದ್ದಿದೆ. ಈ ವೇಳೆ ಚರಂಡಿ ನೀರಿನಲ್ಲಿ ಕೊಚ್ಚಿಹೋಗುತ್ತಿದ್ದ ಬೈಕ್ ನ್ನು ಮೂವರು ಎಳೆಯಲು ಯತ್ನಿಸಿದ್ದಾರೆ. ಈ ವೇಳೆ ಶಿವಮೊಗ್ಗದ ಮಿಥುನ್ ಎಂಬ ಇಂಜಿನಿಯರ್ ನೀರಿನಲ್ಲಿ ಕೊಚ್ಚಿಹೋಗಿದ್ದಾನೆ.
ಇದನ್ನೂ ಓದಿ: Karnataka Rain: ಬೆಂಗಳೂರು, ಕರಾವಳಿ, ಕೊಡಗು, ಮಲೆನಾಡಿನಲ್ಲಿ ಭಾರೀ ಮಳೆಯಿಂದ ಹಳದಿ ಅಲರ್ಟ್ ಘೋಷಣೆ
ಹಾಗೇ, ನಿನ್ನೆ ತಡರಾತ್ರಿ ಸುರಿದ ಮಳೆಗೆ ಮನೆಯ ಗೋಡೆ ಕುಸಿದು ಮುನಿಯಮ್ಮ ಎಂಬ ಮಹಿಳೆ ಸಾವನ್ನಪ್ಪಿದ್ದಾರೆ. ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾವೇರಿ ನಗರದಲ್ಲಿ ಗೋಡೆ ಕುಸಿದು ಮುನಿಯಮ್ಮ (55) ಎಂಬುವವರು ಸಾವನ್ನಪ್ಪಿದ್ದಾರೆ. ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನು ವೈದೇಹಿ ಆಸ್ಪತ್ರೆಗೆ ರವಾನಿಸಲಾಗಿದೆ.
ಇನ್ನಷ್ಟು ಮಳೆಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:14 pm, Sat, 18 June 22