Bengaluru Rain: ಮುಂದುವರೆದ ಮಳೆ ಅಬ್ಬರ, ಕೇಂದ್ರಿಯ ವಿಹಾರ ಅಪಾರ್ಟ್​​ಮೆಂಟ್​​ನಲ್ಲಿ ಪವರ್ ಕಟ್

| Updated By: ಆಯೇಷಾ ಬಾನು

Updated on: Nov 23, 2021 | 9:49 AM

ಕೇಂದ್ರೀಯ ವಿಹಾರ್‌ ಅಪಾರ್ಟ್‌ಮೆಂಟ್‌ಗೆ 5 ಅಡಿ ಎತ್ತರಕ್ಕೆ ನೀರು ನುಗ್ಗಿತ್ತು. ಸದ್ಯ ಇಂದು ನೀರಿನ ಪ್ರಮಾಣ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದೆ. ಈಗ ಎರಡರಿಂದ ಮೂರು ಅಡಿಗಳಷ್ಟು ಮಾತ್ರ ನೀರು ನಿಂತಿದೆ. ಹೀಗಾಗಿ SDRFನಿಂದ ಬೋಟ್‌ ಮೂಲಕ ನಿವಾಸಿಗಳನ್ನು ಸ್ಥಳಾಂತರಿಸಲಾಗುತ್ತಿದೆ.

Bengaluru Rain: ಮುಂದುವರೆದ ಮಳೆ ಅಬ್ಬರ, ಕೇಂದ್ರಿಯ ವಿಹಾರ ಅಪಾರ್ಟ್​​ಮೆಂಟ್​​ನಲ್ಲಿ ಪವರ್ ಕಟ್
ಬೆಂಗಳೂರು ಮಳೆ
Follow us on

ಬೆಂಗಳೂರು: ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಸಿಲಿಕಾನ್ ಸಿಟಿ ಬೆಂಗಳೂರು ನಲುಗಿ ಹೋಗಿದೆ. ಬೆಂಗಳೂರಿನ ಹಲವೆಡೆ ಇಂದೂ ಕೂಡ ಮಳೆ ಅವಾಂತರ ಮುಂದುವರೆದಿದೆ. ಅದರಲ್ಲೂ ಯಲಹಂಕದ ಕೋಗಿಲು ಕ್ರಾಸ್ನಲ್ಲಿರುವ ಕೇಂದ್ರಿಯ ವಿಹಾರ ಅಪಾರ್ಟ್ಮೆಂಟ್ನ ಬೇಸ್ಮೆಟ್ ಜಲಾಹುತಿಯಾಗಿದೆ. 2 ಸಾವಿರಕ್ಕೂ ಹೆಚ್ಚು ಜನರು, 3 ದಿನಗಳಿಂದ ಮನೆಯಿಂದ ಹೊರಬರಲಾಗದೆ ಪರದಾಡುತ್ತಿದ್ದಾರೆ. ಅಪಾರ್ಟ್‌ಮೆಂಟ್ ಸಮೀಪವೇ ಇದ್ದ ಕೆರೆ ಕೋಡಿಯಿಂದ ಹರಿದ ನೀರು, ನೇರಾನೇರ ಅಪಾರ್ಟ್ಮೆಂಟ್ನತ್ತ ನುಗ್ಗಿದೆ. ಪಾರ್ಕಿಂಗ್ ಬೇಸ್ಮೆಂಟ್ನಲ್ಲಿ 5 ಅಡಿ ಎತ್ತರಕ್ಕೆ ನೀರು ನಿಂತಿದ್ದು ನಿವಾಸಿಗಳು ಕಂಗಾಲಾಗಿದ್ದಾರೆ.

SDRFನಿಂದ ಬೋಟ್‌ ಮೂಲಕ ನಿವಾಸಿಗಳ ಸ್ಥಳಾಂತರ
ಕೇಂದ್ರೀಯ ವಿಹಾರ್‌ ಅಪಾರ್ಟ್‌ಮೆಂಟ್‌ಗೆ 5 ಅಡಿ ಎತ್ತರಕ್ಕೆ ನೀರು ನುಗ್ಗಿತ್ತು. ಸದ್ಯ ಇಂದು ನೀರಿನ ಪ್ರಮಾಣ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದೆ. ಈಗ ಎರಡರಿಂದ ಮೂರು ಅಡಿಗಳಷ್ಟು ಮಾತ್ರ ನೀರು ನಿಂತಿದೆ. ಹೀಗಾಗಿ SDRFನಿಂದ ಬೋಟ್‌ ಮೂಲಕ ನಿವಾಸಿಗಳನ್ನು ಸ್ಥಳಾಂತರಿಸಲಾಗುತ್ತಿದೆ. ಸಿಬ್ಬಂದಿ ನಿವಾಸಿಗಳಿಗೆ ಅಗತ್ಯವಸ್ತುಗಳನ್ನು ಪೂರೈಸುತ್ತಿದ್ದಾರೆ. ಆನ್‌ಲೈನ್‌ನಲ್ಲಿ ಅಗತ್ಯವಸ್ತುಗಳನ್ನ ತರಿಸಿಕೊಳ್ತಿದ್ದಾರೆ. ಮತ್ತೊಂದೆಡೆ ಅಪಾರ್ಟ್‌ಮೆಂಟ್‌ನ ಕಾಂಪೌಂಡ್‌ ಒಡೆದು ಮಳೆ ನೀರನ್ನು ಪಂಪ್ ಮಾಡಿ ಹೊರ ಹಾಕಲಾಗುತ್ತಿದೆ.

ನಿನ್ನೆ ಕೂಡ ಎನ್ಡಿಆರ್ಎಫ್, ಎಸ್.ಡಿಆರ್ಎಫ್, ಸಿವಿಲ್ ಡಿಫೆನ್ಸ್, ಹೋಂ ಗಾರ್ಡ್ ಟೀಮ್ ಸಾವಿರಕ್ಕೂ ಹೆಚ್ಚು ಜನರನ್ನ ರಕ್ಷಿಸಿ ಕರೆತಂದಿದ್ದರು. ಇನ್ನು, ಅಪಾರ್ಟ್ಮೆಂಟ್ ನಿವಾಸಿಗಳ ಚಿಕಿತ್ಸೆಗೂ ವ್ಯವಸ್ಥೆ ಮಾಡಲಾಗಿತ್ತು.

ಮನೆ ಬಾಗಿಲಿಗೆ ಬಂದ ಮೀನು, ಹಾವುಗಳ ದರ್ಶನ
ಕೆರೆ ಕೋಡಿ ಒಡೆದು ನೀರು ಬರ್ತಿದ್ದಂತೆ ಕೆರೆಯಲ್ಲಿದ್ದ ಹಾವುಗಳೆಲ್ಲಾ ನೀರಿನ ಜತೆ ರಸ್ತೆಗೆ ಬಂದಿದ್ದಾವೆ. ಜತೆಗೆ ಮೀನುಗಳು ಕೂಡ ಸೇರಿಕೊಂಡಿವೆ. ಇನ್ನು ಬೇಸ್‌ಮೆಂಟ್‌ ಸಂಪೂರ್ಣ ಜಲಾವೃತ ಹಿನ್ನೆಲೆ ಪವರ್ ಕಟ್‌ ಮಾಡಲಾಗಿದೆ. ಅಪಾರ್ಟ್‌ಮೆಂಟ್‌ನವರು ಇಡೀ ರಾತ್ರಿ ಕತ್ತಲಿನಲ್ಲಿ ಕಾಲ ಕಳೆದಿದ್ದಾರೆ. ಸುಮಾರು 300 ಫ್ಲ್ಯಾಟ್‌ ನಿವಾಸಿಗಳ ಜನಜೀವನ ಅಸ್ತವ್ಯಸ್ತಗೊಂಡಿದೆ.

ನಂಜಪ್ಪ ಬಡಾವಣೆಯಲ್ಲಿ ಎರಡು ಅಪಾರ್ಟ್ಮೆಂಟ್ಗಳು ಜಲಾವೃತ
ಬರೀ ಕೇಂದ್ರಿಯ ವಿಹಾರ ಮಾತ್ರವಲ್ಲ, ವಿದ್ಯಾರಣ್ಯಪುರದ ನಂಜಪ್ಪ ಬಡಾವಣೆಯಲ್ಲಿರುವ ಎರಡು ಅಪಾರ್ಟ್ಮೆಂಟ್ಗಳು ಕೂಡ ಮಳೆಯಿಂದ ಜಲಾವೃತಗೊಂಡಿದ್ದಾವೆ. ಮನೆಯಿಂದ ಹೊರ ಬರಲಾಗದೆ ನಿವಾಸಿಗಳು ಪರದಾಡ್ತಿದ್ದಾರೆ. ವೆಂಕಟಸ್ವಾಮಪ್ಪ ಲೇಔಟ್ನಲ್ಲಿ ರಸ್ತೆಗಳಿಂದ ನೀರು ಮನೆಯೊಳಗೆ ನುಗ್ಗಿತ್ತು. ಇದ್ರಿಂದ ಮನೆಯೆಲ್ಲವೂ ಅಸ್ತವ್ಯಸ್ತವಾಗಿ, ನಿವಾಸಿಗಳು ಹೈರಾಣಾಗಿದ್ದಾರೆ.

ಜವಾಹರ್‌ಲಾಲ್ ನೆಹರು ಸಂಶೋಧನಾ ಕೇಂದ್ರ ಜಲಾವೃತ
ಇನ್ನು ಜಕ್ಕೂರು ಕೆರೆ ನೀರು ನುಗ್ಗಿ ಜವಾಹರ್‌ಲಾಲ್ ನೆಹರು ಸಂಶೋಧನಾ ಕೇಂದ್ರ ಜಲಾವೃತಗೊಂಡಿದೆ. ಕೋಟ್ಯಂತರ ರೂಪಾಯಿ ಬೆಲೆಬಾಳುವ ಲ್ಯಾಬ್ ಮಷೀನ್, ಸಂಶೋಧನೆಗಳು ನೀರು, ವಿದ್ಯುತ್ ಸ್ಥಗಿತದಿಂದಾಗಿ ಹಾಳಾಗಿವೆ. 10-15 ವರ್ಷಗಳಿಂದ ಸಂಗ್ರಹಿಸಿದ್ದ ಸ್ಯಾಂಪಲ್ಸ್‌ ಲಾಸ್ ಆಗಿದೆ. ಜವಾಹರ್‌ಲಾಲ್ ನೆಹರು ಸಂಶೋಧನಾ ಕೇಂದ್ರದಲ್ಲಿ ಪ್ರಮುಖ ಕಾಯಿಲೆಗಳ ಬಗ್ಗೆ ಅಧ್ಯಯನ ಮಾಡಲಾಗುತ್ತಿತ್ತು. ಆದ್ರೆ 2 ದಿನಗಳಿಂದ ಕ್ಯಾಂಪಸ್‌ನಲ್ಲಿ ನೀರು ನಿಂತಿರುವ ಹಿನ್ನೆಲೆ ಕ್ಯಾಂಪಸ್‌ಗೆ ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದ ಕೋಟಿ, ಕೋಟಿ ನಷ್ಟ ಉಂಟಾಗಿದೆ.

HIV, ಫೀಡ್ಸ್, ಮಲೇರಿಯಾ, ಕಿವುಡುತನ, ನರಗಳ ಬಗ್ಗೆ ಹಿಮಾಲಯ, ಕಾಶ್ಮೀರ, ಪಂಜಾಬ್ ಸೇರಿದಂತೆ ದೇಶದ ಮೂಲೆ ಮೂಲೆಯಿಂದ ಮಾನವನ ಸ್ಯಾಂಪಲ್ಸ್ ಸಂಗ್ರಹಿಸಲಾಗಿತ್ತು. ಪ್ರಮುಖ ಖಾಯಿಲೆಗಳ ಬಗ್ಗೆ ಅಧ್ಯಯನ ಮಾಡಲಾಗುತ್ತಿತ್ತು. ಆದ್ರೆ ಇವೆಲ್ಲಾದರ ಪರಿಶ್ರಮ ನೀರಲ್ಲಿ ಹೋಮ ಮಾಡಿದಂತಾಗಿದೆ.

ಇದನ್ನೂ ಓದಿ: ಬೆಂಗಳೂರಿನ ಸಿಂಗಪೂರ್ ಕಾಲೊನಿಯಲ್ಲಿ  ಮಳೆನೀರಿನ ಜೊತೆ ಹಾವುಗಳೂ ಹರಿದು ಬರುತ್ತಿವೆ!