Bengaluru Rain: ಬೆಂಗಳೂರಿನಲ್ಲಿ ಬಿರುಗಾಳಿ, ಮಳೆಯಿಂದ ಧರೆಗುರುಳಿದ ಮರಗಳು; ಇನ್ನೂ 5 ದಿನ ಭಾರೀ ಮಳೆ ಸಾಧ್ಯತೆ

| Updated By: ಸುಷ್ಮಾ ಚಕ್ರೆ

Updated on: May 08, 2022 | 7:08 PM

Karnataka Rain Today: ಬೆಂಗಳೂರಿನಲ್ಲಿ ಇಂದು ರಾತ್ರಿ ಮತ್ತು‌ ನಾಳೆ ಮಳೆ ಇರಲಿದ್ದು, ನಾಳೆ ಹಗಲಿನ ವೇಳೆ ಮೋಡ ಕವಿದ ವಾತಾವರಣವಿರಲಿದೆ. ಕೆಲವೆಡೆ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಜ್ಞ ಪ್ರಸಾದ್ ಮುನ್ಸೂಚನೆ ನೀಡಿದ್ದಾರೆ.

Bengaluru Rain: ಬೆಂಗಳೂರಿನಲ್ಲಿ ಬಿರುಗಾಳಿ, ಮಳೆಯಿಂದ ಧರೆಗುರುಳಿದ ಮರಗಳು; ಇನ್ನೂ 5 ದಿನ ಭಾರೀ ಮಳೆ ಸಾಧ್ಯತೆ
ಬೆಂಗಳೂರು ಮಳೆ
Follow us on

Bangalore Rains: ಬೆಂಗಳೂರಿನಲ್ಲಿ ಇಂದು ಕೂಡ ಬಿರುಗಾಳಿ, ಗುಡುಗು ಸಹಿತ ಭಾರೀ ಮಳೆಯಾಗುತ್ತಿದೆ. ಇಂದು ಸಂಜೆ 4 ಗಂಟೆಯಿಂದಲೇ ಬಸವನಗುಡಿ, ಚಾಮರಾಜಪೇಟೆ, ಎಂಜಿ ರಸ್ತೆ, ಕೋರಮಂಗಲ, ಬಿಟಿಎಂ ಲೇಔಟ್, ಬೊಮ್ಮನಹಳ್ಳಿ, ಎಲೆಕ್ಟ್ರಾನಿಕ್ ಸಿಟಿ, ಬೇಗೂರು, ಜಯನಗರ, ಜೆಪಿ ನಗರ, ರಾಜಾಜಿನಗರ, ಮಲ್ಲೇಶ್ವರಂ ಮುಂತಾದೆಡೆ ವಿಪರೀತ ಮಳೆಯಾಗುತ್ತಿದ್ದು, ಹಲವೆಡೆ ಮರಗಳು ಉರುಳಿವೆ. ಬಂಗಾಳಕೊಲ್ಲಿಯಲ್ಲಿ‌ ಮೇಲ್ಮೈ ಸುಳಿಗಾಳಿ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಇನ್ನೂ 5 ದಿನ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ (Bengaluru Rain) ನಾಳೆಯೂ ಮಳೆಯಾಗುವ ಸಾಧ್ಯತೆಯಿದೆ. ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಇಂದು, ನಾಳೆ ಗುಡುಗು ಸಹಿತ ಮಳೆಯಾಗಲಿದೆ.

ಕರ್ನಾಟಕದ ಉತ್ತರ ಒಳನಾಡಿನಲ್ಲಿ ಇನ್ನೂ 5 ದಿನ ಮಳೆ ಸುರಿಯುವ ಸಾಧ್ಯತೆಯಿದೆ. ಕರಾವಳಿಯಲ್ಲಿ ಮೇ 11, 12ರಂದು ಮಳೆಯಾಗುವ ನಿರೀಕ್ಷೆಯಿದೆ ಎಂದು ಟಿವಿ9ಗೆ ಹವಾಮಾನ ತಜ್ಞ ಪ್ರಸಾದ್‌ ಮಾಹಿತಿ ನೀಡಿದ್ದಾರೆ. ಬೆಂಗಳೂರಿನಲ್ಲಿ ಇಂದು ರಾತ್ರಿ ಮತ್ತು‌ ನಾಳೆ ಮಳೆ ಇರಲಿದ್ದು, ನಾಳೆ ಹಗಲಿನ ವೇಳೆ ಮೋಡ ಕವಿದ ವಾತಾವರಣವಿರಲಿದೆ. ಕೆಲವೆಡೆ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಜ್ಞ ಪ್ರಸಾದ್ ಮುನ್ಸೂಚನೆ ನೀಡಿದ್ದಾರೆ.

ಬೆಂಗಳೂರು ಮಾತ್ರವಲ್ಲದೆ ಮಲೆನಾಡು, ದಕ್ಷಿಣ ಒಳನಾಡು, ಕರಾವಳಿ ಜಿಲ್ಲೆಗಳಲ್ಲೂ ಮೇ 11ರವರೆಗೆ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರ್ನಾಟಕದ ದಕ್ಷಿಣ ಒಳನಾಡಿನ ಕೆಲವು ಸ್ಥಳಗಳಲ್ಲಿ ಮತ್ತು ಕರಾವಳಿ ಪ್ರದೇಶಗಳಲ್ಲಿ ಮತ್ತು ಉತ್ತರ ಒಳನಾಡಿನಲ್ಲಿ ಇಂದು ಗುಡುಗು ಸಹಿತ ಮಳೆಯಾಗುತ್ತಿದೆ.

ಗದಗದಲ್ಲಿ ಮಳೆ:
ಗದಗದಲ್ಲಿ ಸಾರಿಗೆ ಸಂಸ್ಥೆಯ ಬಸ್ ಮೇಲೆ ಬೃಹತ್ ಮರ ಬಿದ್ದಿದ್ದು, ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮುಂಡರಗಿ ತಾಲೂಕಿನ ಬಾಗೇವಾಡಿ ಸಮೀಪ ಬಸ್ ಮೇಲೆ ಮರ ಉರುಳಿದೆ. ಇದರಿಂದಾಗಿ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕಲಕೇರಿ- ಮುಂಡರಗಿ ಮಾರ್ಗದಲ್ಲಿ ಪ್ರಯಾಣಿಕರು ಹಾಗೂ ವಾಹನ ಸವಾರರು ಪರದಾಡುತ್ತಿದ್ದಾರೆ. ಗದಗ ಜಿಲ್ಲೆಯ ಹಲವಡೆ ಗಾಳಿ, ಗುಡುಗು, ಸಿಡಿಲು ಸಹಿತ ಭಾರಿ ಮಳೆಯಾಗಿದ್ದು, ಮುಂಡರಗಿ ತಾಲೂಕಿನಲ್ಲಿ 10ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ. ಗದಗ ನಗರದಲ್ಲಿ ಸಿಡಿಲು ಬಡಿದು ತೆಂಗಿನ ಮರ ಧಗಧಗನೆ ಉರಿದಿದೆ. ಸಿಡಿಲಿನ ಅಬ್ಬರಕ್ಕೆ ಅಕ್ಕಪಕ್ಕದ ಮನೆ ಜನರು ಬೆಚ್ಚಿ ಬಿದ್ದಿದ್ದಾರೆ. ಆ ಸ್ಥಳಕ್ಕೆ ಅಗ್ನಿಶಾಮಕದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಅದೃಷ್ಠವಶಾತ್ ಯಾವುದೆ ಪ್ರಾಣ ಹಾನಿ ಸಂಭವಿಸಿಲ್ಲ.


ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ