ರಾತ್ರಿ ಸುರಿದ ಮಳೆಗೆ ಬೆಂಗಳೂರಿನ ರಸ್ತೆಗಳು ಜಲಾವೃತ: ಈ ಮಾರ್ಗಗಳಲ್ಲಿ ನಿಧಾನಗತಿಯ ಸಂಚಾರ

ಬೆಂಗಳೂರಿನಲ್ಲಿ ಬುಧವಾರ ರಾತ್ರಿ ಭಾರೀ ಮಳೆಯಿಂದಾಗಿ ನಗರದ ಹಲವೆಡೆ ರಸ್ತೆಗಳು ಜಲಾವೃತ ಹಿನ್ನಲೆ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಕೆಲವೆಡೆ ಮರಗಳು ಧರೆಗುರುಳಿವೆ. ಸಿಬಿ ರಸ್ತೆ, ಹೊರಮಾವು, ಕಸ್ತೂರಿನಗರ ಮತ್ತು ವಿಂಡ್ಸರ್ ಮ್ಯಾನರ್ ಸುತ್ತಮುತ್ತ ಸಂಚಾರ ನಿಧಾನವಾಗಿರಲಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ಟ್ವೀಟ್​ ಮಾಡಿದ್ದಾರೆ.

ರಾತ್ರಿ ಸುರಿದ ಮಳೆಗೆ ಬೆಂಗಳೂರಿನ ರಸ್ತೆಗಳು ಜಲಾವೃತ: ಈ ಮಾರ್ಗಗಳಲ್ಲಿ ನಿಧಾನಗತಿಯ ಸಂಚಾರ
ಉರುಳಿದ ಮಳೆ, ರಸ್ತೆ ಜಲಾವೃತ

Updated on: Sep 11, 2025 | 7:58 AM

ಬೆಂಗಳೂರು, ಸೆಪ್ಟೆಂಬರ್​ 11: ಬೆಂಗಳೂರಿನಲ್ಲಿ ಬುಧವಾರ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ (rain) ನಗರದ ಹಲವೆಡೆ ಅವಾಂತರಗಳು ಸಂಭವಿಸಿವೆ. ಧಾರಾಕಾರ ಮಳೆಯಿಂದಾಗಿ ಬೃಹತ್ ಮರಗಳು ಧರೆಗುರುಳಿವೆ. ಇನ್ನು ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿವೆ. ಹಾಗಾಗಿ ವಾಹನ ಸಂಚಾರಕ್ಕೆ ಅಸ್ತವ್ಯಸ್ತವಾಗಿದೆ. ರಸ್ತೆಗಳಲ್ಲಿ ನೀರು ನಿಂತಿರುವುದರಿಂದ ಕೆಲ ಮಾರ್ಗಗಳಲ್ಲಿ ನಿಧಾನಗತಿಯ ಸಂಚಾರವಿರುವುದಾಗಿ ಬೆಂಗಳೂರು ಸಂಚಾರ ಪೊಲೀಸರು (Bengaluru Traffic Police) ಮಾಹಿತಿ ನೀಡಿದ್ದಾರೆ.

ಈ ಕುರಿತಾಗಿ ಟ್ವೀಟ್​ ಮಾಡಿರುವ ಬೆಂಗಳೂರು ಸಂಚಾರ ಪೊಲೀಸರು ಯಾವ ಮಾರ್ಗಗಳಲ್ಲಿ ಮಳೆಯಿಂದಾಗಿ ರಸ್ತೆಗಳು ಜಲಾವೃತಗೊಂಡಿವೆ ಮತ್ತು ವಾಹನ ಸಂಚಾರದ ಬಗ್ಗೆ ತಿಳಿಸಿದ್ದಾರೆ. ಸಿಬಿ ರಸ್ತೆ ಬಳಿ ನೀರು ನಿಂತಿರುವುದರಿಂದ ಎಎಸ್‌ಸಿ ಸೆಂಟರ್ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ.

ಬೆಂಗಳೂರು ಸಂಚಾರ ಪೊಲೀಸ್​ ಟ್ವೀಟ್​

ಹೊರಮಾವು ಬಳಿ ನೀರು ನಿಂತಿರುವುದರಿಂದ ರಾಮಮೂರ್ತಿನಗರದ ಕಡೆಗೆ, ಇನ್ನು ಕಸ್ತೂರಿನಗರದ ಬಳಿ ನೀರು ನಿಂತಿರುವುದರಿಂದ ಹೆಬ್ಬಾಳ ಕಡೆಗೆ ಮತ್ತು ವಿಂಡ್ಸರ್ ಮ್ಯಾನರ್‌ ಬಳಿ ಕೂಡ ನೀರು ನಿಂತಿರುವುದರಿಂದ ಪಿಜಿ ಹಳ್ಳಿ ಕಡೆಗೆ ನಿಧಾನಗತಿಯ ಸಂಚಾರವಿರಲಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Karnataka Rains: ಕರ್ನಾಟಕದಲ್ಲಿ ಮತ್ತೆ ಮಳೆ ಚುರುಕು, 8 ಜಿಲ್ಲೆಗಳಲ್ಲಿ ಮಳೆಯೋ ಮಳೆ

ಇನ್ನು ರಾತ್ರಿ ಸುರಿದ ಮಳೆಗೆ ನಗರದ ಹಲವೆಡೆ ಬೃಹತ್ ಮರಗಳು ಧರೆಗುರುಳಿವೆ. ಹೀಗಾಗಿ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿದೆ. ನಗರದ 5ನೇ ಮುಖ್ಯ ರಸ್ತೆ ಚಾಮರಾಜಪೇಟೆಯಿಂದ 4ನೇ ಮುಖ್ಯ ರಸ್ತೆಯ ಕಡೆಗೆ ಹೋಗುವ ರಸ್ತೆಯನ್ನು ಬಂದ್​​ ಮಾಡಲಾಗಿದ್ದು, ಪ್ರಯಾಣಿಕರು ಪರ್ಯಾಯ ಮಾರ್ಗವನ್ನು ಬಳಸುವಂತೆ ಸೂಚಿಸಲಾಗಿದೆ.

ಬೆಂಗಳೂರು ಸಂಚಾರ ಪೊಲೀಸ್​ ಟ್ವೀಟ್​

ಚಂದ್ರಿಕಾ ಹೊಟೇಲ್‌ನಿಂದ ಎಲ್‌ಆರ್‌ಡಿಇ ಜಂಕ್ಷನ್‌ ಕಡೆಗೆ ಹೋಗುವ ರಸ್ತೆಯಲ್ಲಿ, ಚಾಮರಾಜಪೇಟೆ 5ನೇ ಮುಖ್ಯ ರಸ್ತೆಯಿಂದ ಶಿವಶಂಕರ್ ವೃತ್ತದ ಕಡೆಗೆ ಮತ್ತು ಶಿವಶಂಕರ್ ವೃತ್ತದಿಂದ ಚಾಮರಾಜಪೇಟೆ 5ನೇ ಮುಖ್ಯ ರಸ್ತೆ ಕಡೆಗೆ ಹೋಗುವ ರಸ್ತೆಯಲ್ಲಿ ಮತ್ತು ಕಾಮಾಕ್ಷಿಪಾಳ್ಯ ಬಸ್ ನಿಲ್ದಾಣದ ಬಳಿ ಮರ ಬಿದ್ದಿರುವುದರಿಂದ ಸುಮನಹಳ್ಳಿ ಕಡೆಗೆ ನಿಧಾನಗತಿಯ ಸಂಚಾರವಿರಲಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.