ಒಂದೇ ದಿನದಲ್ಲಿ ಮೂರು ಹೃದಯ ಕಸಿ, ಬೆಂಗಳೂರಿನ ನಾರಾಯಣ ಹೃದಯಾಲಯ ಅಪರೂಪದ ಸಾಧನೆ
ಬೆಂಗಳೂರಿನ ನಾರಾಯಣ ಹೃದಯಾಲಯ ಆಸ್ಪತ್ರೆ ಒಂದು ದಿನದೊಳಗೆ ಯಶಸ್ವಿಯಾಗಿ ಮೂರು ಹೃದಯ ಕಸಿ ಶಸ್ತ್ರಚಿಕಿತ್ಸೆ ಮಾಡಿದ್ದು, ಮೂವರ ಪ್ರಾಣ ಉಳಿಸಿದೆ. ಈ ಮೂಲಕ ನಾರಾಯಣ ಹೃದಯಾಲಯ ಅಪರೂಪದ ದಾಖಲೆ ನಿರ್ಮಿಸಿದ್ದು, ಇದು ದೇಶದಲ್ಲೇ ಮೊದಲು. ಇದರೊಂದಿಗೆ ನಾರಾಯಣ ಇನ್‌ಸ್ಟಿಟ್ಯೂಟ್ ಆಫ್ ಕಾರ್ಡಿಯಾಕ್ ಸೈನ್ಸಸ್ ತಂಡದ ಈ ಅಭೂತಪೂರ್ವ ಸಾಧನೆಯು ಭಾರತದಲ್ಲಿ ಒಂದು ಮೈಲಿಗಲ್ಲು ಸೃಷ್ಟಿಸಿದೆ.

ಬೆಂಗಳೂರು, (ಸೆಪ್ಟೆಂಬರ್ 10): ದೇಶದಲ್ಲೇ ಮೊದಲು ಬೆಂಗಳೂರಿನ ನಾರಾಯಣ ಹೃದಯಾಲಯ ಆಸ್ಪತ್ರೆ (Bengaluru Narayana Institute of Cardiac Sciences) ಒಂದೇ ದಿನದಲ್ಲಿ ಅದೂ ಕೇವಲ 12 ಗಂಟೆಗಳಲ್ಲಿ ಮೂರು ಹೃದಯ ಕಸಿ ಶಸ್ತ್ರಚಿಕಿತ್ಸೆ (heart transplants) ಮಾಡುವಲ್ಲಿ ಯಶಸ್ವಿಯಾಗಿದೆ. ಬೆಂಗಳೂರು ಟ್ರಾಫಿಕ್ ಪೊಲೀಸರು ಮಾಡಿಕೊಟ್ಟ ‘ಗ್ರೀನ್ ಕಾರಿಡಾರ್’ ಸಹಾಯದಿಂದ ವಿವಿಧ ನಗರದ ಖಾಸಗಿ ಆಸ್ಪತ್ರೆಗಳಿಂದ ಹೃದಯಗಳನ್ನು ನಾರಾಯಣ ಆಸ್ಪತ್ರೆಗೆ ರವಾನಿಸಿ ತಕ್ಷಣವೇ ಸಂಬಂಧಪಟ್ಟ ರೋಗಿಗಳಿಗೆ ಹಾಕಲಾಗಿದೆ. ಕೇವಲ 12 ಗಂಟೆಯೊಳಗೆ ಮೂವರು ರೋಗಿಗಳಿಗೆ ಯಶಸ್ವಿಯಾಗಿ ಹೃದಯ ಕಸಿ ಮಾಡಲಾಗಿದೆ. ಇದರೊಂದಿಗೆ ಮೂವರ ಜೀವ ಉಳಿಸಿದ ಅಪರೂಪದ ಸಾಧನೆಯನ್ನು ಬೆಂಗಳೂರಿನ ನಾರಾಯಣ ಹೃದಯಾಲಯ ಮಾಡಿದೆ.
ಯಲಹಂಕದ ಸ್ಪರ್ಶ ಆಸ್ಪತ್ರೆ, ಹೆಬ್ಬಾಳದ ಆಸ್ಟರ್ ಸಿಎಂಐ ಆಸ್ಪತ್ರೆ ಮತ್ತು ಓಲ್ಡ್ ಏರ್‌ಪೋರ್ಟ್ ರಸ್ತೆಯ ಮಣಿಪಾಲ್ ಆಸ್ಪತ್ರೆಯಲ್ಲಿ ದಾನಿಗಳಿಂದ ಹೃದಯಗಳನ್ನು ಹೊರತೆಗೆಯಲಾಗಿದ್ದು, ನಂತರ ಜೀರೋ ಟ್ರಾಫಿಕ್ ಮೂಲಕ ನಾರಾಯಣ ಹೃದಯಾಲಕ್ಕೆ ರವಾನಿಸಲಾಗಿದೆ. ಬಳಿಕ ಹೃದ್ರೋಗ ತಜ್ಞರು, ಶಸ್ತ್ರಚಿಕಿತ್ಸಕರು, ಅರಿವಳಿಕೆ ತಜ್ಞರು, ಪರ್ಫ್ಯೂಷನಿಸ್ಟ್‌ಗಳು ಮೂವರಿಗೆ ಯಶಸ್ವಿಯಾಗಿ ಹೃದಯ ಕಸಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
12 ಗಂಟೆಗಳ ಒಳಗೆ ಈ ಮೂರು ಜೀವಗಳನ್ನು ಉಳಿಸುವಲ್ಲಿ ಯಶಸ್ವಿಯಾಗಿದ್ದು, ಅಂಗಾಂಗ ದಾನದ ಮಹತ್ವವನ್ನು ಹೆಚ್ಚಿಸಿದೆ ಎಂದು ನಾರಾಯಣ ಇನ್‌ಸ್ಟಿಟ್ಯೂಟ್ ಆಫ್ ಕಾರ್ಡಿಯಾಕ್ ಸೈನ್ಸಸ್ (ನಾರಾಯಣ ಹೆಲ್ತ್)ನ ಹಿರಿಯ ಹೃದಯ ಶಸ್ತ್ರಚಿಕಿತ್ಸಕ ಡಾ. ವರುಣ್ ಶೆಟ್ಟಿ ಹರ್ಷ ವ್ಯಕ್ತಪಡಿಸಿದ್ದಾರೆ.
ನಾರಾಯಣ ಹೆಲ್ತ್‌ನ ಹೃದಯ ಕಸಿ ಕಾರ್ಯ ದೇಶದಲ್ಲಿಯೇ ಅತಿ ದೊಡ್ಡದಾಗಿದ್ದು, ಸದ್ಯ ಹೃಯದ ಕಸಿ ಮಾಡಲಾಗಿರುವ ಮೂವರು ರೋಗಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಅವರ ಆರೋಗ್ಯ ಪ್ರಸ್ತುತ ಸ್ಥಿರವಾಗಿದೆ. ಮೂವರು ದಾನಿಗಳು ಅಂಗಾಂಗಗಳನ್ನು ದಾನ ಮಾಡುವ ಧೈರ್ಯಶಾಲಿನಿರ್ಧಾರ ಮಾಡಿ ಔದಾರ್ಯ ಮರೆದಿದ್ದು, ಇದರಿಂದ ಮೂರು ಕುಟುಂಬಗಳಿಗೆ ಬದುಕಲು ಎರಡನೇ ಅವಕಾಶ ನೀಡಿದಂತಾಗಿದೆ ಎಂದರು.




