ಬೆಂಗಳೂರು: ಸ್ಫೋಟ ಸಂಭವಿಸಿ ವಾರದ ನಂತರ ರಾಮೇಶ್ವರಂ ಕೆಫೆ ಪುನರಾರಂಭ

| Updated By: ಗಣಪತಿ ಶರ್ಮ

Updated on: Mar 08, 2024 | 10:55 AM

Rameshwaram Cafe: ಬಾಂಬ್ ಸ್ಫೋಟ ಸಂಭವಿಸಿದ ಒಂದು ವಾರದ ಬಳಿಕ ಇದೀಗ ಶಿವರಾತ್ರಿಯ ಸಂದರ್ಭದಲ್ಲಿ ಬೆಂಗಳೂರಿನ ರಾಮೇಶ್ವರಂ ಕೆಫೆ ಪುನರಾರಂಭಗೊಂಡಿದೆ. ಬೆಳಗ್ಗೆಯಿಂದಲೇ ಪೂಜೆ ಪುನಸ್ಕಾರಗಳ ಬಳಿಕ ಗ್ರಾಹಕರ ಸ್ವಾಗತಕ್ಕೆ ಸಜ್ಜಾಗಿರುವ ಕೆಫೆಯಲ್ಲಿ ಬಿಗಿ ಭದ್ರತೆಯನ್ನೂ ಕೈಗೊಳ್ಳಲಾಗಿದೆ. ಯಾವ ರೀತಿಯ ಭದ್ರತೆ ಕೆಫೆಯಲ್ಲಿದೆ ಮತ್ತು ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಗಳೇನು ಎಂಬ ಮಾಹಿತಿ ಇಲ್ಲಿದೆ.

ಬೆಂಗಳೂರು: ಸ್ಫೋಟ ಸಂಭವಿಸಿ ವಾರದ ನಂತರ ರಾಮೇಶ್ವರಂ ಕೆಫೆ ಪುನರಾರಂಭ
ರಾಮೇಶ್ವರಂ ಕೆಫೆ ಪುನರಾರಂಭ
Follow us on

ಬೆಂಗಳೂರು, ಮಾರ್ಚ್​​ 8: ಬಾಂಬ್ ಸ್ಫೋಟ (Bomb Blast) ಸಂಭವಿಸಿದ ನಂತರ ವಾರದ ಬಳಿಕ ಇದೀಗ ಬೆಂಗಳೂರಿನ ರಾಮೇಶ್ವರಂ ಕೆಫೆ (Rameshwaram Cafe) ಮತ್ತೆ ಕಾರ್ಯಾರಂಭ ಮಾಡಿದೆ. ಶಿವರಾತ್ರಿ (Maha Shivratri) ದಿನವೇ ಕೆಫೆ ಪುನರಾರಂಭ ಮಾಡುವುದಾಗಿ ಮ್ಯಾನೇಜ್​​ಮೆಂಟ್ ಈಗಾಗಲೇ ತಿಳಿಸಿತ್ತು. ಅದರಂತೆ ಶುಕ್ರವಾರ ಬೆಳಿಗ್ಗೆಯೇ ಕೆಫೆ ಪುನರಾರಂಭ ಮಾಡಿದೆ. ಕೆಫೆಯಲ್ಲಿ ಬೆಳಗ್ಗೆಯಿಂದಲೇ ಪೂಜಾ ಕೈಂಕರ್ಯಗಳು ನೆರವೇರಿದವು. ಆ ಮೂಲಕ ಮತ್ತೆ ಗ್ರಾಹಕರಿಗೆ ಕೆಫೆ ಮುಕ್ತವಾಗಿದೆ.

ಹೇಗಿದೆ ಭದ್ರತಾ ವ್ಯವಸ್ಥೆ?

ಬಾಂಬ್ ಸ್ಫೋಟದ ಘಟನೆಯಿಂದ ಎಚ್ಚೆತ್ತುಕೊಂಡಿರುವ ರಾಮೇಶ್ವರಂ ಕೆಫೆ ಇದೀಗ ಪುನರಾರಂಭದ ವೇಳೆ ಸೂಕ್ತ ಮುನ್ನೆಚ್ಚರಿಕೆ, ಭದ್ರತಾ ಕ್ರಮಗಳನ್ನು ಕೈಗೊಂಡಿದೆ. ಕೆಫೆಯ ಪ್ರವೇಶ ದ್ವಾರದ ಬಳಿ 2 ಮೆಟಲ್ ಡಿಟೆಕ್ಟರ್ ಅಳವಡಿಕೆ ಮಾಡಲಾಗಿದೆ. ಶನಿವಾರದಿಂದ ಪ್ರತಿ ಗ್ರಾಹಕರನ್ನು ಹ್ಯಾಂಡ್ ಡಿಟೆಕ್ಟರ್ ಮೂಲಕ ತಪಾಸಣೆ ಮಾಡಿಯೇ ಒಳ ಪ್ರವೇಶಕ್ಕೆ ಅನುವು ಮಾಡಿಕೊಡಲಾಗುತ್ತದೆ.

ಕೆಫೆ ಸುತ್ತ ಅಳವಡಿಸಿದ್ದ ಬ್ಯಾರಿಕೇಡ್​ಗಳನ್ನು ಪೊಲೀಸರು ತೆರವುಗೊಳಿಸಿದ್ದಾರೆ. ಈ ಮಧ್ಯೆ, ಪೊಲೀಸ್ ಪಹರೆಯಲ್ಲೇ ಪೂಜಾ ಕಾರ್ಯಕ್ರಮಗಳು ನೆರವೇರಿದವು.

ರಾಮೇಶ್ವರಂ ಕೆಫೆಯಲ್ಲಿ ಮಾರ್ಚ್​ 1ರಂದು ಶುಕ್ರವಾರ ಸಂಭವಿಸಿದ್ದ ಬಾಂಬ್ ಸ್ಫೋಟದಲ್ಲಿ ಐದು ಮಂದಿ ಗಾಯಗೊಂಡಿದ್ದರು. ಬಾಂಬ್ ಇಟ್ಟು ಹೋಗಿದ್ದ ವ್ಯಕ್ತಿಗಾಗಿ ಶೋಧ ಕಾರ್ಯ ಮುಂದುವರಿದಿದ್ದು, ಘಟನೆ ಸಂಬಂಧ ತನಿಖೆಯೂ ಪ್ರಗತಿಯಲ್ಲಿದೆ.

ಈ ಮಧ್ಯೆ, ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಂಚುರೂಪಿಸಿದ ಅನುಮಾನದ ಮೇಲೆ ಬಳ್ಳಾರಿ ಕೇಂದ್ರ ಕಾರಾಗೃಹದಿಂದ ಶಂಕಿತ ಉಗ್ರ ಮಿನಾಜ್ ಅಲಿಯಾಸ್ ಸುಲೇಮಾನ್​ನನ್ನು ಎನ್​ಐಎ ಪೊಲೀಸರು ವಶಕ್ಕೆ ಪಡೆದಿದ್ದು, ತೀವ್ರ ವಿಚಾರಣೆಗೆ ಒಳಪಡಿಸುತ್ತಿದ್ದಾರೆ. ಈತ ಜೈಲಿನಲ್ಲೇ ಕುಳಿತುಕೊಂಡು ಸಂಚು ಹೂಡಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬಳ್ಳಾರಿ ಜೈಲಲ್ಲೇ ಕುಳಿತು ಬೆಂಗಳೂರು ಸ್ಫೋಟಕ್ಕೆ ಸಂಚು ಹೂಡಿದ್ದ ಶಂಕಿತ ಉಗ್ರ ಎನ್​ಐಎ ವಶಕ್ಕೆ

ರಾಮೇಶ್ವರಂ ಕೆಫೆ ಸ್ಫೋಟದ ಬಳಿಕ, ಬೆಂಗಳೂರಿನ ಇತರ ಹೋಟೆಲ್​ಗಳಲ್ಲಿಯೂ ಭದ್ರತಾ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಲು ಹೋಟೆಲ್ ಸಂಘ ಚಿಂತನೆ ನಡೆಸಿತ್ತು. ಮೆಟಲ್ ಡಿಟೆಕ್ಟರ್ಗಳ ಅಳವಡಿಕೆ, ಗ್ರಾಹಕರಿಗೆ ಬ್ಯಾಗುಗಳನ್ನು ಹೊರಗೆ ಬಿಟ್ಟು ಬರುವಂತೆ ಸೂಚನೆ ನೀಡುವುದು ಮತ್ತಿತರ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಹೋಟೆಲ್ ಸಂಘದ ಸಭೆಯಲ್ಲಿ ಸಮಲೋಚನೆ ನಡೆಸಲಾಗಿತ್ತು. ಇದೀಗ ರಾಮೇಶ್ವರಂ ಕೆಫೆ ಮಾತ್ರ ಪುನರಾರಂಭದ ವೇಳೆ ಮೆಟಲ್ ಡಿಟೆಕ್ಟರ್ ಅಳವಡಿಸಿದೆ. ಭದ್ರತಾ ತಪಾಸಣೆಯ್ನೂ ಆರಂಭಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ