ಬೆಂಗಳೂರು, ಏಪ್ರಿಲ್ 08: ಬೆಂಗಳೂರಿನ ವೈಟ್ಫೀಲ್ಡ್ನಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ (Rameshwaram Cafe) ಸಂಭವಿಸಿದ ಬಾಂಬ್ ಸ್ಫೋಟ (Bomb Blast) ಪ್ರಕರಣದಲ್ಲಿ ಬಂಧಿತ ಶಂಕಿತ ಉಗ್ರ ಮಾಜ್ ಮುನೀರ್ ಕೈವಾಡವಿರುವುದು ಧೃಡವಾಗಿದೆ. ಶಂಕಿತ ಉಗ್ರ ಮಾಜ್ ಮುನೀರ್ ಎನ್ಐಎ (NIA) ಕಸ್ಟಡಿಯಲ್ಲಿದ್ದು, ತೀವ್ರ ವಿಚಾರಣೆಗೆ ಒಳಪಡಿಸಿದಾಗ ಸತ್ಯ ಬಾಯಿ ಬಿಟ್ಟಿದ್ದಾನೆ.
ಮಾರ್ಚ್ 1 ರಂದು ರಾಮೇಶ್ವರಂ ಕೇಫೆಯಲ್ಲಿ ಸ್ಫೋಟ ಸಂಭವಿಸಿತ್ತು. ಇದಾದ ಬೆನ್ನಲ್ಲೇ ಎನ್ಐಎ ಅಧಿಕಾರಿಗಳು ಮಾರ್ಚ್ 4ರ ರಾತ್ರಿ ಪರಪ್ಪನ ಅಗ್ರಹಾರ ಸೇರಿದಂತೆ ದೇಶದ 18 ಜೈಲುಗಳ ಮೇಲೆ ಏಕಕಾಲಕ್ಕೆ ದಾಳಿ ಮಾಡಿ ಪರಿಶೀಲಿಸಿದ್ದರು. ಈ ಸಮಯದಲ್ಲಿ ಪರಪ್ಪನ ಅಗ್ರಹಾರದಲ್ಲಿದ್ದ ಶಂಕಿತ ಉಗ್ರ ಮಾಜ್ ಮುನೀರ್ನನ್ನು ಎನ್ಐಎ ಅಧಿಕಾರಿಗಳು ಎಂಟು ದಿನಗಳ ಕಾಲ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದರು.
ಎನ್ಐಎ ಅಧಿಕಾರಿಗಳು ಮಾಜ್ ಮುನೀರ್ ಇದ್ದ ಜೈಲು ಕೋಣೆಯನ್ನು ತಪಾಸಣೆ ನಡೆಸಿದಾಗ ನೋಟ್ ಬುಕ್ ಒಂದರಲ್ಲಿ ಕೆಲವು ಕೋಡ್ ವರ್ಡ್ ಬರೆಯಲಾಗಿತ್ತು. ಇವುಗಳನ್ನು ಡಿಕೋಡ್ ಮಾಡಿದಾಗ ಎನ್ಐಎ ಅಧಿಕಾರಿಗಳಿಗೆ, ಕೆಫೆ ಸ್ಫೋಟ ಸಂಬಂಧ ಲಿಂಕ್ ಲಭ್ಯವಾಗಿತ್ತು. ಮಾಜ್ ಮುನೀರ್ ಜೈಲಿನಲ್ಲಿದ್ದುಕೊಂಡೆ ಸ್ಫೋಟಕ್ಕೆ ಸಂಚು ರೂಪಿಸಿದ್ದನು ಎಂಬುವುದು ಬಯಲಾಯಿತು.
ಇದನ್ನೂ ಓದಿ: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಮತ್ತಿಬ್ಬರನ್ನು ವಶಕ್ಕೆ ಪಡೆದ ಎನ್ಐಎ
ಮಾಜ್ ಮುನೀರ್ ವಿಚಾರಣೆ ನಡೆಸಿದಾಗ ಮುಜಾಮಿಲ್ ಷರೀಫ್ನ ಕೈವಾಡವಿರುವುದೂ ತಿಳಿಯಿತು. ಕೂಡಲೆ ಎನ್ಐಎ ಅಧಿಕಾರಿಗಳು ಮುಜಾಮಿಲ್ ಷರೀಫ್ನನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದರು. ಆಗ ಮುಜಾಮಿಲ್ ಷರೀಫ್ ಮಾಜ್ ಮುನೀರ್ ಕೈವಾಡದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದನು. ಬಳಿಕ ಎನ್ಐಎ ಅಧಿಕಾರಿಗಳು ಮಾಜ್ ಮುನೀರ್ನನ್ನೂ ಬಂಧಿಸಿದರು.
ಮಾಜ್ ಮುನೀರ್ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವನು. ಈತ ಎಂಜಿನಿಯರ್ ಪದವಿಧರನಾಗಿದ್ದಾನೆ. ಈತನು ಕೆಲವು ವರ್ಷಗಳ ಹಿಂದೆ ನಡೆದ ಮಂಗಳೂರು ಗೋಡೆ ಬರಹ ಪ್ರಕರಣದಲ್ಲಿ ಬಂಧಿತನಾಗಿ ಬಳಿಕ ಜಾಮೀನು ಪಡೆದುಕೊಂಡು ಹೊರ ಬಂದಿದ್ದನು. ಅನಂತರ ಶಿವಮೊಗ್ಗ ಪ್ರಾಯೋಗಿಕ ಸ್ಫೋಟ ನಡೆಸಿದ್ದನು. ಈ ಪ್ರಕರಣದಲ್ಲಿ ಬಂಧಿಸಿದಾಗ ಐಸಿಸ್ ಸಂಚು ಬಹಿರಂಗವಾಗಿದೆ.
2013ರಲ್ಲಿ ತೀರ್ಥಹಳ್ಳಿಯಲ್ಲಿ ಆರಂಭವಾಗಿದ್ದ ದಾವಾ ಸೆಂಟರ್ಗೆ ಮಾಜ್ ಮುನೀರ್ ಹೋಗಿದ್ದರು. ದಾವಾ ಸೆಂಟರ್ ಹೆಸರಿನಲ್ಲಿ ವ್ಯಾಟ್ಸಾಪ್ ಗ್ರೂಪ್ ಕೂಡ ಆರಂಭಿಸಿದ್ದನು. ದೇಶ ವಿರೋಧಿ ಕೃತ್ಯದಲ್ಲಿ ಭಾಗಿಯಾಗಲು ಆಸಕ್ತನಾಗಿದ್ದ ಮಾಜ್ 2016ರಲ್ಲಿ ಐಸಿಸ್ ಸಂಘಟನೆ ಸೇರಿಕೊಂಡಿದ್ದನು. 2019ರಲ್ಲಿ CAA, NRC ವಿಚಾರವಾಗಿ ದೇಶದಲ್ಲಿ ಪ್ರತಿಭಟನೆಗಳು ನಡೆದಿದ್ದವು. ಆಗ ಮಾಜ್ ಮುನೀರ್ Ummah News ಹೆಸರಿನಲ್ಲಿ ಟೆಲಿಗ್ರಾಂ ಗ್ರೂಪ್ ರಚಿಸಿದ್ದನು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:55 pm, Mon, 8 April 24