
ಬೆಂಗಳೂರು, ಜನವರಿ 8: ಮಹಿಳೆಯರಿಗೆ ಉದ್ಯೋಗ ಹಾಗೂ ವಾಸಕ್ಕೆ ಅತ್ಯಂತ ಅನುಕೂಲಕರ ನಗರವಾಗಿ ಬೆಂಗಳೂರು ಹೊರಹೊಮ್ಮಿರುವುದು ಸಮೀಕ್ಷೆಯೊಂದರಿಂದ ತಿಳಿದುಬಂದಿದೆ. ಉತ್ತಮ ಹವಾಮಾನದಿಂದ ದೇಶದ ಇತರ ಭಾಗಗಳ ಜನರನ್ನು ಆಕರ್ಷಿಸುತ್ತಿದ್ದ ಬೆಂಗಳೂರು (Bangalore) ಇದೀಗ ಮಹಿಳಾ ಸ್ನೇಹಿ ಉದ್ಯೋಗದ ವಾತಾವರಣದಲ್ಲಿಯೂ ದೇಶದಲ್ಲೇ ಮೊದಲ ಸ್ಥಾನ ಪಡೆದುಕೊಂಡಿದೆ. ಅವತಾರ್ ಗ್ರೂಪ್ (Avtar Group) ಎಂಬ ವರ್ಕ್ಪ್ಲೇಸ್ ಕಲ್ಚರ್ ಕನ್ಸಲ್ಟಿಂಗ್ ಫರ್ಮ್ ಬಿಡುಗಡೆ ಮಾಡಿದ ‘ಟಾಪ್ ಸಿಟೀಸ್ ವಿಮೆನ್ ಇನ್ ಇಂಡಿಯಾ’ ವರದಿಯಲ್ಲಿ, ಮಹಿಳೆಯರು ಕೆಲಸ ಮಾಡಲು ಹೆಚ್ಚು ಇಚ್ಛಿಸುವ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಅಗ್ರಸ್ಥಾನದಲ್ಲಿದೆ. ಈ ಪಟ್ಟಿಯಲ್ಲಿ ಚೆನ್ನೈ, ಪುಣೆ, ಹೈದರಾಬಾದ್, ಮುಂಬೈ, ಗುರುಗ್ರಾಮ್, ಕೊಲ್ಕತ್ತಾ, ಅಹಮದಾಬಾದ್, ತಿರುವನಂತಪುರಂ ಹಾಗೂ ಕೊಯಮತ್ತೂರು ಕೂಡ ಸ್ಥಾನ ಪಡೆದಿವೆ.
ದೇಶದಾದ್ಯಂತ 125 ನಗರಗಳನ್ನು ಅಧ್ಯಯನ ಮಾಡಿ, ಹಿಂದಿನ ವರ್ಷಗಳ ಮಾಹಿತಿಯೊಂದಿಗೆ ಹೋಲಿಕೆ ನಡೆಸಿ ಈ ವರದಿ ಸಿದ್ಧಪಡಿಸಲಾಗಿದೆ. ನಗರಗಳಲ್ಲಿ ಮಹಿಳೆಯರ ಉದ್ಯೋಗ ಪಾಲ್ಗೊಳ್ಳುವಿಕೆ, ಸುರಕ್ಷತೆ, ವೃತ್ತಿ ಅಭಿವೃದ್ಧಿ, ಹಾಗೂ ಸಾಮಾಜಿಕ–ಆರ್ಥಿಕ ಸೌಲಭ್ಯಗಳನ್ನು ಆಧರಿಸಿ ‘ಸಿಟಿ ಇನ್‌ಕ್ಲೂಷನ್ ಸ್ಕೋರ್’ ನೀಡಲಾಗಿದೆ.
ಸೋಷಿಯಲ್ ಇನ್ಕ್ಲೂಶನ್ (ಸಾಮಾಜಿಕ ಒಳಗೊಳ್ಳುವಿಕೆ) ಅಂಕಗಳಲ್ಲಿ ನಗರಗಳ ವಾಸಯೋಗ್ಯತೆ, ಸುರಕ್ಷತೆ, ಮಹಿಳೆಯರ ಉದ್ಯೋಗ ಪ್ರತಿನಿಧಿತ್ವ ಮತ್ತು ಸಬಲೀಕರಣವನ್ನು ಪರಿಗಣಿಸಲಾಗಿದೆ. ಕೈಗಾರಿಕಾ ಒಳಗೊಳ್ಳುವಿಕೆಯಲ್ಲಿ ಮಹಿಳಾ ಸ್ನೇಹಿ ಉದ್ಯಮಗಳು, ವೃತ್ತಿ ಸಹಾಯಕ ವ್ಯವಸ್ಥೆಗಳು ಹಾಗೂ ಲಿಂಗ ಸಮಾನತೆಯನ್ನು ಉತ್ತೇಜಿಸುವ ಸಂಸ್ಥೆಗಳ ಉಪಸ್ಥಿತಿಯನ್ನು ಗಮನಿಸಲಾಗಿದೆ.
2025ರ ವರದಿಯಲ್ಲಿ ಬೆಂಗಳೂರು 53.29 ಅಂಕಗಳೊಂದಿಗೆ ಮೊದಲ ಸ್ಥಾನವನ್ನು ಕಾಯ್ದುಕೊಂಡಿದೆ. ಮಹಿಳೆಯರಿಗೆ ಅನುಕೂಲಕರ ಉದ್ಯೋಗ ಪರಿಸರ, ತಂತ್ರಜ್ಞಾನ ಹಾಗೂ ಸೇವಾ ಕ್ಷೇತ್ರಗಳಲ್ಲಿ ಹೆಚ್ಚಾದ ಅವಕಾಶಗಳು ಬೆಂಗಳೂರಿಗೆ ಸಂಬಂಧಿಸಿದ ಮುಖ್ಯ ಅಂಶಗಳಾಗಿವೆ. ಚೆನ್ನೈ 49.86 ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದರೆ, ಪುಣೆ (46.27), ಹೈದರಾಬಾದ್ (46.04) ಹಾಗೂ ಮುಂಬೈ (44.49) ಮುಂದಿನ ಸ್ಥಾನಗಳಲ್ಲಿವೆ.
ಗುರುಗ್ರಾಮ್, ನೋಯ್ಡಾ ಹಾಗೂ ದೆಹಲಿ ಕೈಗಾರಿಕಾ ಬೆಳವಣಿಗೆಯಲ್ಲಿ ಮುಂಚೂಣಿಯಲ್ಲಿದ್ದರೂ, ಸುರಕ್ಷತೆ, ಸಾರಿಗೆ ಹಾಗೂ ಜೀವನ ವೆಚ್ಚದಂತಹ ಸಾಮಾಜಿಕ ಅಂಶಗಳಲ್ಲಿ ಹಿನ್ನಡೆಯಲ್ಲಿವೆ ಎಂದು ಸಮೀಕ್ಷಾ ವರದಿ ತಿಳಿಸಿದೆ. ಇದರಿಂದ, ಕೇವಲ ಕೈಗಾರಿಕಾ ಅಭಿವೃದ್ಧಿ ಮಾತ್ರ ಮಹಿಳಾ ಸ್ನೇಹಿ ನಗರ ನಿರ್ಮಾಣಕ್ಕೆ ಸಾಕಾಗುವುದಿಲ್ಲ ಎಂಬ ಅಂಶ ಬಹಿರಂಗವಾಗಿದೆ.
ಸಮೀಕ್ಷಾ ವರದಿಯ ಪ್ರಕಾರ ತಿರುವನಂತಪುರಂ, ಶಿಮ್ಲಾ ಹಾಗೂ ತಿರುಚಿರಾಪಳ್ಳಿ ಸಾಮಾಜಿಕ ಒಳಗೊಳ್ಳುವಿಕೆಯಲ್ಲಿ ಉತ್ತಮ ಸಾಧನೆ ತೋರಿದ್ದರೂ, ದೊಡ್ಡ ಮಟ್ಟದ ಉದ್ಯೋಗಾವಕಾಶಗಳ ಕೊರತೆಯನ್ನು ಎದುರಿಸುತ್ತಿವೆ. ಹೈದರಾಬಾದ್, ಕೊಲ್ಕತ್ತಾ ಮತ್ತು ಪುಣೆಗಳು ಸಾಮಾಜಿಕ ಹಾಗೂ ಕೈಗಾರಿಕಾ ಒಳಗೊಳ್ಳುವಿಕೆಯಲ್ಲಿ ಸಮತೋಲನ ಸಾಧಿಸಿರುವ ನಗರಗಳಾಗಿ ಗುರುತಿಸಿಕೊಂಡಿವೆ.
ಇದನ್ನೂ ಓದಿ: ಕೋಗಿಲು ಲೇಔಟ್: ಅಕ್ರಮ ಮನೆಗೆ 1 ರಿಂದ 2 ಲಕ್ಷ ರೂ. ವಸೂಲಿ, ಸರ್ಕಾರಿ ಭೂಮಿ ಕಬಳಿಸಿ ತನ್ನದೇ ಹೆಸರಿಟ್ಟಿದ್ದ ಆರೋಪಿ!
ಒಟ್ಟಿನಲ್ಲಿ, ಮಹಿಳೆಯರ ವೃತ್ತಿ ಬೆಳವಣಿಗೆ ಮತ್ತು ಸುರಕ್ಷಿತ ಜೀವನಕ್ಕೆ ಬೆಂಗಳೂರು ದೇಶದಲ್ಲೇ ಮಾದರಿ ನಗರವಾಗಿ ಹೊರಹೊಮ್ಮಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಮಹಿಳಾ ಸ್ನೇಹಿ ನೀತಿಗಳು ಹಾಗೂ ಮೂಲಸೌಕರ್ಯಗಳು ರೂಪುಗೊಳ್ಳಬಹುದೆಂಬ ನಿರೀಕ್ಷೆಯನ್ನು ಈ ವರದಿ ಮೂಡಿಸಿದೆ.