
ಬೆಂಗಳೂರು, ಜನವರಿ 24: ಸೋಮವಾರ ನಡೆಯಲಿರುವ ಗಣರಾಜ್ಯೋತ್ಸವ ಪೆರೇಡ್‌ಗೆ (Republic Day parade) ಸಂಬಂಧಿಸಿದಂತೆ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಸಿಮಂತ್ ಕುಮಾರ್ ಸಿಂಗ್ ಮಹತ್ವದ ಮಾಹಿತಿ ನೀಡಿದ್ದಾರೆ. ಈ ಬಾರಿ ಪೆರೇಡ್‌ನಲ್ಲಿ ಒಟ್ಟು 516 ಜನ ಭಾಗವಹಿಸಲಿದ್ದು, ಭದ್ರತೆ ಸೇರಿದಂತೆ ಸುಮಾರು 2,000 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಕಾರ್ಯಕ್ರಮ ಬೆಳಿಗ್ಗೆ 8.58ಕ್ಕೆ ಆರಂಭವಾಗಲಿದ್ದು, ಸಾರ್ವಜನಿಕರು ಕಾರ್ಯಕ್ರಮ ಆರಂಭಕ್ಕೂ ಮುನ್ನವೇ ಸ್ಥಳಕ್ಕೆ ಆಗಮಿಸಬೇಕೆಂದು ಕಮಿಷನರ್ ಮನವಿ ಮಾಡಿದ್ದಾರೆ.
ಭದ್ರತಾ ಪರಿಶೀಲನೆಗಾಗಿ ಬೆಳಿಗ್ಗೆ 8 ಗಂಟೆಯೊಳಗೆ ಎಲ್ಲಾ ಸಾರ್ವಜನಿಕರು ಸ್ಥಳಕ್ಕೆ ತಲುಪಬೇಕು. 8 ಗಂಟೆ ನಂತರ ಆಗಮಿಸಿದವರಿಗೆ ಪರಿಶೀಲನೆ ನಡೆಸಲು ಕಷ್ಟವಾಗುವ ಸಾಧ್ಯತೆ ಇರುವುದರಿಂದ ಬೇಗ ಬರುವಂತೆ ಸೂಚಿಸಲಾಗಿದೆ. ಈ ಬಾರಿ ತಮಿಳುನಾಡು ಪೊಲೀಸ್ ಪಡೆ, ಅಸ್ಸಾಂ ರೈಫಲ್ಸ್ (ASF), ಭಾರತೀಯ ಸೇನೆ ಹಾಗೂ ಸಿಆರ್ಪಿಎಫ್ ಸಿಬ್ಬಂದಿ ಪೆರೇಡ್‌ನಲ್ಲಿ ಭಾಗವಹಿಸಲಿದ್ದಾರೆ ಎಂದು ಕಮಿಷನರ್ ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ ಈ ಬಾರಿ ಗಣರಾಜ್ಯೋತ್ಸವದಲ್ಲಿ ಕರ್ನಾಟಕದ ಸ್ತಬ್ಧಚಿತ್ರಕ್ಕಿಲ್ಲ ಅವಕಾಶ, ಭುಗಿಲೆದ್ದ ಆಕ್ರೋಶ
ಸಂಚಾರ ನಿರ್ಬಂಧಗಳ ಕುರಿತು ಮಾಹಿತಿ ನೀಡಿದ ಸಿಮಂತ್ ಕುಮಾರ್, ಜನವರಿ 26 ರಂದು ಬೆಳಿಗ್ಗೆ 8.30ರಿಂದ 10.30ರವರೆಗೆ ಕಬ್ಬನ್ ರಸ್ತೆಯಲ್ಲಿ ಬಿಆರ್ವಿ ಜಂಕ್ಷನ್‌ನಿಂದ ಕಾಮರಾಜ ರಸ್ತೆ ಜಂಕ್ಷನ್‌ವರೆಗೆ ಎರಡೂ ದಿಕ್ಕಿನ ಸಂಚಾರ ನಿರ್ಬಂಧಿಸಲಾಗುತ್ತದೆ ಎಂದು ಹೇಳಿದರು. ಸೆಂಟ್ರಲ್ ಸ್ಟ್ರೀಟ್ ಅನಿಲ್ ಕುಂಬ್ಳೆ ಸರ್ಕಲ್‌ನಿಂದ ಶಿವಾಜಿನಗರ ಬಸ್ ನಿಲ್ದಾಣದವರೆಗೆ ಹಾಗೂ ಕಬ್ಬನ್ ರಸ್ತೆ–ಸಿಟಿಒ ಸರ್ಕಲ್‌ನಿಂದ ಕೆಆರ್ ರಸ್ತೆ ಜಂಕ್ಷನ್‌ವರೆಗೆ ಸಂಚಾರ ನಿರ್ಬಂಧವಿರಲಿದೆ. ಅಲ್ಲದೆ ಎಂಜಿ ರಸ್ತೆ, ಅನಿಲ್ ಕುಂಬ್ಳೆ ಸರ್ಕಲ್‌ನಿಂದ ಕ್ವೀನ್ಸ್ ಸರ್ಕಲ್‌ವರೆಗೆ ಎಲ್ಲಿಯೂ ಪಾರ್ಕಿಂಗ್ ಮಾಡದಂತೆ, ಸಾರ್ವಜನಿಕರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.
ವರದಿ: ನಟರಾಜ್, ಟಿವಿ9 ಬೆಂಗಳೂರು
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.