ಬೆಂಗಳೂರು: ವಾಕಿಂಗ್ ಮಾಡ್ತಿದ್ದ ನಿವೃತ್ತ ಎಸಿಪಿ ಮೇಲೆ ಹಲ್ಲೆ, ರಾಬರಿ; ಚಿನ್ನಾಭರಣ ದೋಚಿದ್ದ ಮೂವರು ಲಾಕ್

ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರ ಮೇಲೆ ಆಗಂತುಕರಿಂದ ದಾಳಿ ಮಾಡಿ ಸುಲಿಗೆ ಮಾಡಿರುವಂತಹ ಘಟನೆ ಬೆಂಗಳೂರಿನ ಹೆಬ್ಬಾಳದ ವೆಟರ್ನರಿ ಆಸ್ಪತ್ರೆ ಆವರಣದಲ್ಲಿ ನಡೆದಿದೆ. ವಾಕಿಂಗ್ ಮಾಡುತ್ತಿದ್ದ ಸಮಯದಲ್ಲಿ ಆಗಂತುಕರು ದಾಳಿ ಮಾಡಿ ಚಿನ್ನಾಭರಣ ದೋಚಿ ಪರಾರಿ ಆಗಿದ್ದರು. ಸದ್ಯ ಪೊಲೀಸರು ಮೂವರು ಬಂಧಿಸಿದ್ದಾರೆ.

ಬೆಂಗಳೂರು: ವಾಕಿಂಗ್ ಮಾಡ್ತಿದ್ದ ನಿವೃತ್ತ ಎಸಿಪಿ ಮೇಲೆ ಹಲ್ಲೆ, ರಾಬರಿ; ಚಿನ್ನಾಭರಣ ದೋಚಿದ್ದ ಮೂವರು ಲಾಕ್
ಬಂಧಿತರು

Updated on: Sep 12, 2025 | 8:23 AM

ಬೆಂಗಳೂರು, ಸೆಪ್ಟೆಂಬರ್​ 12: ಅವರು ಪೊಲೀಸ್ ಇಲಾಖೆಯ ನಿವೃತ್ತ ಅಧಿಕಾರಿ (Retired officer). ನಿವೃತ್ತ ಜೀವನ ಕಳೆಯುತ್ತಿದ್ದ ಆ ಪೊಲೀಸ್ ಅಧಿಕಾರಿ ಪ್ರತಿನಿತ್ಯ ವಾಕಿಂಗ್​​ಗೆ ಹೋಗುತ್ತಿದ್ದ ಜಾಗದಲ್ಲೇ ಅದೊಂದು ದಿನ ಸಂಕಷ್ಟಕ್ಕೆ ಸಿಲುಕಿದ್ದರು. ವಾಕಿಂಗ್ ಮಾಡುವಾಗಲೇ ಆಗಂತುಕರ ದಾಳಿಗೆ ಒಳಗಾಗಿ ಚಿನ್ನಾಭರಣ ಕಳೆದುಕೊಂಡಿದ್ದರು. ಸದ್ಯ ಆ ಖತರ್ನಾಕ್ ಆಸಾಮಿಗಳನ್ನು ಪೊಲೀಸರು ಹೆಡೆಮುರಿ (arrest) ಕಟ್ಟಿದ್ದಾರೆ.

ಬೆಂಗಳೂರಿನಂತ ದೊಡ್ಡ ನಗರದಲ್ಲಿ ಸುಲಿಗೆ, ರಾಬರಿಗಳು ಹೆಚ್ಚಾಗುತ್ತಿವೆ. ಪ್ರತಿನಿತ್ಯ ನಾಲ್ಕೈದು ಘಟನೆಗಳು ನಡೆಯುತ್ತಲೇ ಇದ್ದು, ಆಟೋ, ಕ್ಯಾಬ್ ಚಾಲಕರು, ಸಾರ್ವಜನಿಕರಿಗೆ ರಾಬರ್ಸ್​​ಗಳು ಕಂಟಕವಾಗ್ತಿದ್ದಾರೆ. ಕಳೆದು ಒಂದು ತಿಂಗಳಲ್ಲಿ 100ಕ್ಕೂ ಹೆಚ್ಚು ಸುಲಿಗೆ, ರಾಬರಿ ಕೇಸ್​ಗಳು ದಾಖಲಾಗಿವೆ. ಸದ್ಯ ಇಂತ ರಾಬರಿ ಪ್ರಕರಣಗಳ ಪಟ್ಟಿಗೆ ನಿವೃತ್ತ ಎಸಿಪಿಯೊಬ್ಬರ ಘಟನೆ ಕೂಡ ಸೇರಿದೆ.

ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲು ವಾರ್ಡನ್​ನಿಂದಲೇ ಕೈದಿಗಳಿಗೆ ಮಾದಕ ವಸ್ತುಗಳ ಪೂರೈಕೆ: ಬಂಧನ

ಕೆಲದಿನಗಳ ಹಿಂದೆ ಹೆಬ್ಬಾಳದ ವೆಟರ್ನರಿ ಆಸ್ಪತ್ರೆ ಆವರಣದಲ್ಲಿ ಸುಬ್ಬಣ್ಣ ಎಂದಿನಂತೆ ಮಾರ್ನಿಂಗ್ ವಾಕಿಂಗ್ ಮಾಡುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಮಾಸ್ಕ್ ಧರಿಸಿದ್ದ ಇಬ್ಬರು ಆಗಂತುಕರು ಸುಬ್ಬಣ್ಣ ಮೇಲೆ ದಾಳಿ ಮಾಡಿದ್ದರು. ಚಾಕು ತೋರಿಸಿ ಕತ್ತಿನಲ್ಲಿದ್ದ ಸರ ಕಸಿದುಕೊಂಡಿದ್ದರು. ಆಗಂತುಕರ ಈ ದಾಳಿ ತಡೆಯಲು ಮುಂದಾದ ಸುಬ್ಬಣ್ಣ ಕೈಗೆ ಚಾಕುವಿನಿಂದ ಹಲ್ಲೆ ಕೂಡ ಮಾಡಿದ್ದಾರೆ. ಬಳಿಕ ಕೈಯಲ್ಲಿದ್ದ ಚಿನ್ನದ ಬ್ರೇಸ್​ ಲೇಟ್​ ಕಿತ್ಕೊಂಡು ಕ್ಷಣಮಾತ್ರದಲ್ಲಿ ಎಸ್ಕೇಪ್ ಆಗಿದ್ದರು. ಬಳಿಕ ಸುಬ್ಬಣ್ಣ ಸಂಜಯ್ ನಗರ ಪೊಲೀಸ್ ಠಾಣೆಗೆ ರಾಬರಿ ಬಗ್ಗೆ ದೂರು ನೀಡಿದ್ದು, ಪೊಲೀಸರು ಡಿಜೆ ಹಳ್ಳಿಯ ಮೂವರು ರಾಬರ್ಸ್​ಗಳನ್ನ ಹೆಡೆಮುರಿ ಕಟ್ಟಿದ್ದಾರೆ.

ಮೂವರ ಬಂಧನ

ಮೊಹಮ್ಮದ್ ಸಲ್ಮಾನ್, ಮೋಸೀನ್, ಮೊಹಮ್ಮದ್ ಇರ್ಫಾನ್ ಬಂಧಿತರು. ಒಂದೇ ಏರಿಯಾದ ಈ ಮೂವರಲ್ಲಿ ಮೋಸಿನ್ ಮತ್ತು ಇರ್ಫಾನ್ ರಾಬರಿ ಮಾಡಿದರೆ, ಸಲ್ಮಾನ್ ತಾನು ಕದ್ದ ಬೈಕ್​ನಲ್ಲಿ ಇನ್ನಿಬ್ಬರಿಗೆ ಸಹಾಯ ಮಾಡಿದ್ದ. ಹೀಗಾಗಿ ಮೂರು ಜನರನ್ನ ಬಂಧಿಸಿರುವ ಸಂಜಯ್ ನಗರ ಪೊಲೀಸರು ಆರೋಪಿಗಳನ್ನ ಜೈಲಿಟ್ಟಿದ್ದಾರೆ.

ಇದನ್ನೂ ಓದಿ: ಬಾಗಿಲು ಒಡೆದಿಲ್ಲ, ಲಾಕ್ ಮುರಿದಿಲ್ಲ: ಚಿನ್ನಾಭರಣ ದೋಚಿದ ಖತರ್ನಾಕ್ ಕಳ್ಳ

ಒಟ್ಟಿನಲ್ಲಿ ಬೆಂಗಳೂರಲ್ಲಿ ಪ್ರತಿನಿತ್ಯ ರಾಬರಿ, ಸುಲಿಗೆ ಕೇಸ್​ಗಳು ಹೆಚ್ಚಾಗುತ್ತಿವೆ. ಮಾರಕಾಸ್ತ್ರಗಳನ್ನ ತೋರಿಸಿ ಜನರನ್ನ ಸುಲಿಗೆ ಮಾಡಲಾಗುತ್ತಿದೆ. ಖಾಕಿ ಪಡೆ ಎಷ್ಟೇ ಅಲರ್ಟ್ ಆಗಿದ್ದರೂ, ಎಷ್ಟೇ ಅರೆಸ್ಟ್ ಮಾಡಿದರೂ ಕ್ರಿಮಿನಲ್ ಬ್ಯಾಕ್ ಗ್ರೌಂಡ್ ಇರುವ ವ್ಯಕ್ತಿಗಳು ಮತ್ತೆ ಮತ್ತೆ ಇದೇ ಕೆಲಸಕ್ಕೆ ಇಳಿದು ಸುಲಭವಾಗಿ ಹಣ ಮಾಡುತ್ತಿದ್ದಾರೆ.

ವರದಿ: ಪ್ರದೀಪ್ ಚಿಕ್ಕಾಟಿ, Tv9, ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.