ಶಾಲೆಯಲ್ಲಿ ಕನ್ನಡ ಮಾತನಾಡಿದ್ದಕ್ಕೆ ದಂಡ: ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಸಮಾಧಾನ, ವರದಿ ನೀಡುವಂತೆ ಶಿಕ್ಷಣ ಇಲಾಖೆಗೆ ಪತ್ರ
ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ, ಅಧಿಕೃತ ಭಾಷೆ. ಹೀಗಿದ್ದರೂ ಕನ್ನಡ ಭಾಷೆಗೆ ಧಕ್ಕೆ ತರುವ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಲೇ ಇವೆ. ರಾಜಧಾನಿ ಬೆಂಗಳೂರಿನಲ್ಲೇ ವಿದ್ಯಾರ್ಥಿಗಳು ಕನ್ನಡದಲ್ಲಿ ಮಾತನಾಡಲು ಹಿಂಜರಿಯುವ ರೀತಿ ಖಾಸಗಿ ಶಾಲೆಗಳು ಉದ್ಧಟತನ ಮೆರಯುತ್ತಿವೆ. ಇದಕ್ಕೆ ಮತ್ತೊಂದು ಘಟನೆ ಸೇರ್ಪಡೆಯಾಗಿದ್ದು, ಪ್ರತಿಷ್ಠಿತ ಶಾಲೆಯೊಂದರಲ್ಲಿ ಕನ್ನಡ ವಿರೋಧಿ ಚಟುವಟಿಕೆ ನಡೆಸಿರುವ ಆರೋಪ ಕೇಳಿಬಂದಿದೆ.

ಬೆಂಗಳೂರು, ಸೆಪ್ಟೆಂಬರ್ 12: ಕನ್ನಡ (Kannada) ಎಂದರೆ ಕೇವಲ ಭಾಷೆಯಲ್ಲ, ಅದು ಕೋಟ್ಯಂತರ ಕನ್ನಡಿಗರ ಅಸ್ತಿತ್ವ ಹಾಗೂ ಆಸ್ಮಿತೆ. ಆದರೆ ರಾಜ್ಯದಲ್ಲೇ ನಾಡ ಭಾಷೆಗೆ ಧಕ್ಕೆ ತರುವಂತಹ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಲೇ ಇವೆ. ಇದಕ್ಕೆ ಮತ್ತೊಂದು ಪ್ರಕರಣ ಸೇರ್ಪಡೆಯಾಗಿದ್ದು, ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಬೆಂಗಳೂರಿನಲ್ಲಿ (Bengaluru) ಸಿಎಂ ಅಧಿಕೃತ ನಿವಾಸ ಕೃಷ್ಣಾ ಬಳಿಯ ಕುಮಾರಕೃಪಾ ರಸ್ತೆಯಲ್ಲಿರುವ ಪ್ರತಿಷ್ಠಿತ ಖಾಸಗಿ ಸಿಂಧಿ ಪ್ರೌಢಶಾಲೆಯಲ್ಲಿ ಕನ್ನಡ ಮಾತನಾಡಿದ ಕಾರಣಕ್ಕೆ ದಂಡ ವಿಧಿಸಿ ಎಚ್ಚರಿಕೆ ನೀಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಅಲ್ಲದೆ, ಕೇವಲ ಆಂಗ್ಲ ಭಾಷೆಯಲ್ಲಿ ಮಾತ್ರ ಸಂವಹನ ನಡೆಸುವಂತೆ ಒತ್ತಡ ಹೇರಲಾಗಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರವೇ ಈ ಆಘಾತಕಾರಿ ವಿಚಾರವನ್ನು ಖಚಿತಪಡಿಸಿದೆ.
ಈ ಬಗ್ಗೆ ಸಿಂಧಿ ಪ್ರೌಢಶಾಲೆಯ ಆಡಳಿತ ಮಂಡಳಿಯ ಬಳಿ ಸ್ಪಷ್ಟನೆ ಕೇಳಲು ಪ್ರಯತ್ನಿಸಲಾಗಿದ್ದು, ಉತ್ತರ ನೀಡಲು ನಿರಾಕರಿಸಿದೆ. ಸದ್ಯ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಪತ್ರ ಬರೆದಿದೆ. ಕೂಡಲೇ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರನ್ನು ವಿಚಾರಸಿ, ನೈಜತೆ ಪರಿಶೀಲಿಸಿ ಒಂದು ವಾರದೊಳಗೆ ವರದಿ ನೀಡುವಂತೆ ಹೇಳಿದೆ. ವಿಳಂಬವಾದಲ್ಲಿ ಶಾಲಾ ಶಿಕ್ಷಣ ಇಲಾಖೆ ಸಚಿವರು ಹಾಗೂ ಪ್ರಧಾನ ಕಾರ್ಯದರ್ಶಿಯವರ ಗಮನಕ್ಕೆ ತರಲಾಗುವುದು ಎಂಬ ಎಚ್ಚರಿಕೆ ನೀಡಲಾಗಿದೆ. ಇಷ್ಟಾದರೂ ಸಿಂಧಿ ಶಾಲೆಯ ಆಡಳಿತ ಮಂಡಳಿ ಘಟನೆಯ ಬಗ್ಗೆ ಉತ್ತರ ನೀಡಲು ಸಿದ್ಧರಿಲ್ಲ.
ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರಕ್ಕೆ ಸಾಲು ಪ್ರಕರಣಗಳಲ್ಲಿ ಹಿಂದೂ ವಿರೋಧಿ ಪಟ್ಟ: ಕಳೆದ ಅವಧಿಯಂತೆ ಈ ಬಾರಿಯೂ ‘ಧರ್ಮ’ ಸಂಕಟ
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರೊಬ್ಬರು ಅಧ್ಯಕ್ಷರ ಗಮನಕ್ಕೆ ತಂದ ಹಿನ್ನೆಲೆ ಪ್ರಕರಣ ಬೆಳಕಿಗೆ ಬಂದಿದೆ. ಬೆಂಗಳೂರಿನಲ್ಲಿ ಖಾಸಗಿ ಶಾಲೆಗಳ ಕನ್ನಡ ವಿರೋಧಿ ನಡೆ ಮುಂದುವರೆಯುತ್ತಲೇ ಇದೆ. ನಾಡು ನುಡಿಯನ್ನು ಇಷ್ಟು ಕೇವಲವಾಗಿ ನೋಡುತ್ತಾ, ವಿದ್ಯಾರ್ಥಿಗಳಿಗೆ ಕನ್ನಡ ಭಾಷೆ ಬಗ್ಗೆ ತುಂಬುತ್ತಿರುವ ತಾತ್ಸಾರ ಭಾವನೆ ಮೂಡುವಂತೆ ವರ್ತಿಸುತ್ತಿರುವ ಖಾಸಗಿ ಶಾಲೆಗಳ ಕೃತ್ಯ ಖಂಡನೀಯ. ಸರ್ಕಾರ ಹಾಗೂ ಶಾಲಾ ಶಿಕ್ಷಣ ಇಲಾಖೆ ಇನ್ನಾದರೂ ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕಿದೆ.
ವರದಿ: ಲಕ್ಷ್ಮಿ ನರಸಿಂಹ, ಟಿವಿ9, ಬೆಂಗಳೂರು
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:07 am, Fri, 12 September 25




