
ಬೆಂಗಳೂರು, ಅ,23: ಬೆಂಗಳೂರು ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸಂಚಾರ ದಟ್ಟಣೆಯನ್ನು ನಿಯಂತ್ರಿಸುವ ದೃಷ್ಟಿಯಿಂದ ಗ್ರೇಟರ್ ಬೆಂಗಳೂರು (GBA) ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (BDA) ನೂರಾರು ಕಿಲೋಮೀಟರ್ ಉದ್ದದ ಹೊಸ ರಸ್ತೆಗಳ ನಿರ್ಮಾಣಕ್ಕೆ ಬೃಹತ್ ಯೋಜನೆ ರೂಪಿಸಿದೆ. ಆದರೆ, ಈ ಪ್ರಸ್ತಾವಿತ ರಸ್ತೆಗಳು ಕೇವಲ ರಾಜಕಾಲುವೆ ಹಾಗೂ ಕೆರೆಗಳ ಬಫರ್ ವಲಯಗಳಷ್ಟೇ ಅಲ್ಲದೆ, ನೇರವಾಗಿ ಜಲಮೂಲಗಳ ಮೇಲೆಯೇ ಹಾದುಹೋಗಲಿವೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಇದು ಬೆಂಗಳೂರಿನ ಈಗಾಗಲೇ ಕುಸಿಯುತ್ತಿರುವ ನೀಲಿ-ಹಸಿರು ಪರಿಸರ ಸಂಪತ್ತಿನ ಮೇಲೆ ಗಂಭೀರ ಪರಿಣಾಮ ಬೀರುವ ಆತಂಕವನ್ನು ಸೃಷ್ಟಿಸಿದೆ.
ಜಿಬಿಎ, ಬಿಡಿಎ ಮತ್ತು ಬೆಂಗಳೂರು ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಇತ್ತೀಚೆಗೆ ಪ್ರಕಟಿಸಿರುವ ಸಂಚಾರ ಜಾಲದ ನಕ್ಷೆಗಳ ಪ್ರಕಾರ, ಮುಂಬರುವ ಅಭಿವೃದ್ಧಿ ಕಾರ್ಯಗಳಿಗಾಗಿ ನೂರಾರು ಕಿ.ಮೀ. ರಸ್ತೆಗಳನ್ನು ಗುರುತಿಸಲಾಗಿದೆ. ಒಟ್ಟು 200 ಕೆರೆಗಳು ಮತ್ತು 850 ಕಿ.ಮೀ. ರಾಜಕಾಲುವೆಗಳನ್ನು ಹೊಂದಿರುವ ಜಿಬಿಎ ವ್ಯಾಪ್ತಿಯಲ್ಲಿ, ಹಲವು ಕೆರೆಗಳ ಜಾಗದಲ್ಲೇ ರಸ್ತೆಗಳು ಸಾಗುವಂತೆ ನಕ್ಷೆ ತಯಾರಿಸಲಾಗಿದೆ.
ಪೂರ್ವ ಬೆಂಗಳೂರು: ದೊಡ್ಡಾನೆಕುಂಡಿ ಮತ್ತು ನಳ್ಳೂರುಹಳ್ಳಿ ಕೆರೆಗಳ ಸುತ್ತಮುತ್ತ.
ದಕ್ಷಿಣ ಬೆಂಗಳೂರು: ಬೇಗೂರು ಮತ್ತು ಪುಟ್ಟೇನಹಳ್ಳಿ ಕೆರೆಗಳು.
ಉತ್ತರ ಬೆಂಗಳೂರು: ದೊಡ್ಡಬೊಮ್ಮಸಂದ್ರ ಕೆರೆ ಸೇರಿದಂತೆ ಪ್ರಮುಖ ಜಲಮೂಲಗಳು.
ಇದರ ಜೊತೆಗೆ ಬೆಳ್ಳಂದೂರು ಕೆರೆ, ಪರಪ್ಪನ ಅಗ್ರಹಾರ ಕೇಂದ್ರದ ಬಳಿಯ ಕೆರೆ, ಬಾಸಾಪುರ ಮತ್ತು ಗರಬೆಭಾವಿಪಾಳ್ಯ ಕೆರೆಗಳ ಸುತ್ತಲೂ ಬಹುಮುಖಿ ರಸ್ತೆಗಳನ್ನು ಪ್ರಸ್ತಾವಿಸಲಾಗಿದೆ. ಮೈಲಸಂದ್ರ ಕೆರೆ, ಸುಬೆದಾರಪಾಳ್ಯ ಕೆರೆ, ಅಂಜನಪುರ ಬಡಾವಣೆಯ ಕೆಂಬಾಳ್ಳಿ ಹಾಗೂ ಸೋಂಪುರ ಭಾಗದಲ್ಲೂ ನೈಸ್ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಗುರುತಿಸಲಾಗಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಖಾಸಗಿ ಜಮೀನುಗಳ ಮೂಲಕ ರಸ್ತೆ ನಿರ್ಮಿಸುವುದಕ್ಕಿಂತ, ಕೆರೆಗಳ ಬಫರ್ ವಲಯ ಹಾಗೂ ರಾಜಕಾಲುವೆಗಳ ಪಕ್ಕದಲ್ಲಿ ರಸ್ತೆ ಮಾಡುವುದು ಸುಲಭದ ಮಾರ್ಗ ಎಂದು ಅಧಿಕಾರಿಗಳು ಭಾವಿಸಿರುವಂತೆ ಕಾಣುತ್ತದೆ. ಈ ರಸ್ತೆಗಳ ನಿರ್ಮಾಣದಿಂದ ಇದುವರೆಗೆ ಅಭಿವೃದ್ಧಿ ವಲಯದಿಂದ ದೂರವಿದ್ದ ಹಸಿರು ಪ್ರದೇಶಗಳು ಹಾಗೂ ನಿರ್ಬಂಧಿತ ಜಾಗಗಳು ವಾಣಿಜ್ಯ ಮತ್ತು ರಿಯಲ್ ಎಸ್ಟೇಟ್ ಚಟುವಟಿಕೆಗಳಿಗೆ ಮುಕ್ತವಾಗುವ ಸಾಧ್ಯತೆಯಿದೆ.
ಇದನ್ನೂ ಓದಿ: ಹೆಬ್ಬಾಳ ಟನಲ್ ಯೋಜನೆಗೆ ಕಂಟಕ: 1,128 ಮರಗಳನ್ನು ಕಡಿಯದಂತೆ ಎನ್‌ಜಿಟಿ ತಡೆ; ಬಿಡಿಎ ಪ್ರಸ್ತಾವನೆಗೆ 1,600 ಜನರ ಆಕ್ಷೇಪಣೆ
“ರಸ್ತೆಗಳ ರೇಖಾಚಿತ್ರವನ್ನು ಬಹಳ ಅವೈಜ್ಞಾನಿಕವಾಗಿ ಗುರುತಿಸಲಾಗಿದೆ. ಪುಟ್ಟೇನಹಳ್ಳಿ ಕೆರೆಯಲ್ಲಿ 30 ಅಡಿ ಅಗಲದ ಏರಿಯಿದೆ, ಆದರೆ ಅಲ್ಲಿ 60 ಅಡಿ ಅಗಲದ ರಸ್ತೆ ಪ್ರಸ್ತಾವಿಸಲಾಗಿದೆ. ಇದರಿಂದ ಕೆರೆಯ ನೀರು ಸಂಗ್ರಹಣಾ ಸಾಮರ್ಥ್ಯ ಸಂಪೂರ್ಣ ನಾಶವಾಗಲಿದೆ” ಎಂದು ಸ್ಥಳೀಯ ನಿವಾಸಿ ಲಿಂಗರಾಜ್ ಡಿ ಅಳಲು ತೋಡಿಕೊಂಡಿದ್ದಾರೆ. “ಬೆಂಗಳೂರಿನಲ್ಲಿ ಕೇವಲ ಶೇ. 5ರಷ್ಟು ಮಾತ್ರ ನೀಲಿ-ಹಸಿರು ಸಂಪತ್ತು ಉಳಿದಿದೆ. ಇಂತಹ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಸರ್ಕಾರದ ಇಲಾಖೆಗಳೇ ಕೆರೆ ಮತ್ತು ರಾಜಕಾಲುವೆಗಳನ್ನು ರಕ್ಷಿಸುವ ಬದಲು ಮೂಲಸೌಕರ್ಯ ಮತ್ತು ರಿಯಲ್ ಎಸ್ಟೇಟ್ ಹಿತಾಸಕ್ತಿಗಾಗಿ ಅವುಗಳನ್ನು ಬಲಿ ನೀಡುತ್ತಿರುವುದು ದುರದೃಷ್ಟಕರ” ಎಂದು ಸಿಟಿಜೆನ್ಸ್ ಅಜೆಂಡಾ ಫಾರ್ ಬೆಂಗಳೂರು ಇದರ ಸಂಸ್ಥಾಪಕ ಸಂದೀಪ್ ಅನಿರ್ಧನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ GBA ಮುಖ್ಯ ಆಯುಕ್ತ ಮಹೇಶ್ವರ್ ರಾವ್, ಕಾನೂನಿನ ಪ್ರಕಾರ ಕೆರೆಗಳು ಹಾಗೂ ರಾಜಕಾಲುವೆಗಳ ಬಫರ್ ವಲಯಗಳಲ್ಲಿ ರಸ್ತೆಗಳನ್ನು ನಿರ್ಮಿಸಲು ಅವಕಾಶವಿದೆ ಎಂದು ತಿಳಿಸಿದ್ದಾರೆ. ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಸಲ್ಲಿಸಲು 60 ದಿನಗಳ ಕಾಲಾವಕಾಶವಿದ್ದು, ನಿರ್ದಿಷ್ಟ ಆಕ್ಷೇಪಣೆಗಳು ಬಂದರೆ ಪರಿಶೀಲಿಸಿ ರಸ್ತೆಗಳ ನಕ್ಷೆ ಹಾಗೂ ಜೋಡಣೆಯನ್ನು ಬದಲಾವಣೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಈ ನಕ್ಷೆಗಳು ಅಂತಿಮಗೊಂಡ ಬಳಿಕ ಪರಿಷ್ಕೃತ ಮಹಾಯೋಜನೆ 2015ಕ್ಕೆಸೇರಿಸಲ್ಪಡಲಿವೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ