
ಬೆಂಗಳೂರು, ಡಿಸೆಂಬರ್ 2: ಲೈಂಗಿಕ ಸಮಸ್ಯೆಗೆ ಚಿಕಿತ್ಸೆ ಕೊಡಿಸುವುದಾಗಿ ನಂಬಿಸಿ ಐಟಿ ಉದ್ಯೋಗಿಯಿಂದ 48 ಲಕ್ಷ ರೂ. ವಂಚಿಸಿದ ಪ್ರಕರಣದಲ್ಲಿ ವಿಜಯ್ ಗುರೂಜಿ (Vijay Guruji) ಎಂಬವರನ್ನು ಬೆಂಗಳೂರಿನ (Bengaluru) ಜ್ಞಾನಭಾರತಿ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ತೇಜಸ್ ಎಂಬ ಟೆಕ್ಕಿ ಲೈಂಗಿಕ ಸಮಸ್ಯೆಯಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಕೆಂಗೇರಿ ಸನೈರಾ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಹೋಗಿ ಬರುವಾಗ ರಸ್ತೆ ಪಕ್ಕದ ಟೆಂಟ್‌ನಲ್ಲಿ ‘‘ಲೈಂಗಿಕ ಸಮಸ್ಯೆಗೆ ಚಿಕಿತ್ಸೆ’’ ಎಂಬ ಬೋರ್ಡ್ ನೋಡಿ ಒಳಗೆ ಹೋಗಿದ್ದರು. ಅಲ್ಲಿ ಭೇಟಿಯಾದ ವ್ಯಕ್ತಿ ವಿಜಯ್ ಗುರೂಜಿಯನ್ನು ಪರಿಚಯಿಸಿ, ಆಯುರ್ವೇದಿಕ್ ಚಿಕಿತ್ಸೆ ಮೂಲಕ ಸಮಸ್ಯೆ ಗುಣವಾಗುತ್ತದೆ ಎಂದು ಭರವಸೆ ನೀಡಿದ್ದರು.
ತೇಜಸ್ ನಂತರ ಟೆಂಟ್ ಗುರೂಜಿಯನ್ನು ಭೇಟಿಯಾಗಿ ‘ದೇವರಾಜ್ ಬೂಟಿ’ ಎಂಬ 1 ಗ್ರಾಂ ಔಷಧಿಗೆ 1.60 ಲಕ್ಷ ರೂ. ದರ ಫಿಕ್ಸ್ ಮಾಡಲಾಗಿತ್ತು. ಯಶವಂತಪುರದ ವಿಜಯಲಕ್ಷ್ಮೀ ಆಯುರ್ವೇದಿಕ್ ಶಾಪ್‌ಗೆ ಹೋಗಿ ಮಾತ್ರೆಗಳು ಮತ್ತು ‘ದೇವರಾಜ್ ಬೂಟಿ’ಯನ್ನು ಖರೀದಿಸುವಂತೆ ಸೂಚಿಸಲಾಗಿತ್ತು. ಆನ್‌ಲೈನ್ ಪೇಮೆಂಟ್ ಮಾಡಬಾರದು, ಯಾರನ್ನೂ ಜೊತೆಗೆ ಕರೆದುಕೊಂಡು ಬರಬಾರದು ಎಂದು ಕಟ್ಟುನಿಟ್ಟಿನ ಷರತ್ತು ಹಾಕಲಾಗಿತ್ತು. ತೇಜಸ್ ಒಂದೇ ಬಾರಿಗೆ ಅಲ್ಲ, ಹಲವಾರು ಬಾರಿ ‘ದೇವರಾಜ್ ಬೂಟಿ’ ಮತ್ತು ‘ಭವನ ಬೂಟಿ ತೈಲ’ಗಳನ್ನು ಖರೀದಿಸುತ್ತಾ ಒಟ್ಟಿನಲ್ಲಿ 48 ಲಕ್ಷ ರೂ. ಖರ್ಚು ಮಾಡಿದ್ದರು.
ಆದರೆ, ಔಷಧಿ ಸೇವಿಸಿದರೂ ಲೈಂಗಿಕ ಸಮಸ್ಯೆ ಪರಿಹಾರವಾಗದೇ, ಆರೋಗ್ಯ ಸ್ಥಿತಿ ಹದಗೆಟ್ಟ ಹಿನ್ನೆಲೆ ತೇಜಸ್ ರಕ್ತ ಪರೀಕ್ಷೆ ಮಾಡಿಸಿದಾಗ ಕಿಡ್ನಿಗೆ ಗಂಭೀರ ಸಮಸ್ಯೆ ಉಂಟಾಗಿದೆ ಎಂಬುದು ಪತ್ತೆಯಾಯಿತು. ಆಯುರ್ವೇದಿಕ್ ಮಿಶ್ರಣವೇ ಕಿಡ್ನಿ ಹಾನಿಗೆ ಕಾರಣ ಎಂದು ವೈದ್ಯರು ಸೂಚಿಸಿದ್ದಾರೆ. ತೇಜಸ್ ಚಿಕಿತ್ಸೆ ಪರಿಣಾಮಕಾರಿಯಲ್ಲ ಎಂದು ಪ್ರಶ್ನಿಸಿದಾಗ ವಿಜಯ್ ಗುರೂಜಿಮ ‘ಸಮಸ್ಯೆ ಇನ್ನೂ ಹೆಚ್ಚಾಗುವಂತೆ ಮಾಡುತ್ತೇನೆ’ ಎಂದು ಬೆದರಿಕೆ ಹಾಕಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರು: ಲೈಂಗಿಕ ಸಮಸ್ಯೆಗೆ ಪರಿಹಾರ ನೆಪದಲ್ಲಿ ಟೆಕ್ಕಿಗೆ ಟೋಪಿ; ಕಿಡ್ನಿಗೂ ಹಾನಿ
ಘಟನೆಯ ಬಗ್ಗೆ ತೇಜಸ್ ಜ್ಞಾನಭಾರತಿ ಪೊಲೀಸರಿಗೆ ದೂರು ನೀಡಿದ್ದರು. ನಂತರ ತನಿಖೆ ನಡೆಸಿದ ಪೊಲೀಸರು ವಿಜಯ್ ಗುರೂಜಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ವಿಜಯಲಕ್ಷ್ಮೀ ಆಯುರ್ವೇದಿಕ್ ಶಾಪ್ ಬಗ್ಗೆಯೂ ತನಿಖೆ ಆರಂಭಿಸಲಾಗಿದೆ.
Published On - 9:09 am, Tue, 2 December 25