
ಬೆಂಗಳೂರು, ಡಿಸೆಂಬರ್ 03: ನಿರ್ಮಾಣ ಹಂತದ ಕಟ್ಟಡದಲ್ಲೇ ಟೆಕ್ಕಿ (techie) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ (suicide) ಶರಣಾಗಿರುವಂತಹ ಘಟನೆ ವೈಟ್ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಡೆತ್ನೋಟ್ ಬರೆದಿಟ್ಟು ಮುರುಳಿ ಗೋವಿಂದರಾಜು ಆತ್ಮಹತ್ಯೆಗೆ ಶರಣಾದ ಟೆಕ್ಕಿ. ಘಟನಾ ಸ್ಥಳಕ್ಕೆ ವೈಟ್ಫೀಲ್ಡ್ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ಮುರುಳಿ, ಶಶಿ ನಂಬಿಯಾರ್ ಮತ್ತು ಉಷಾ ನಂಬಿಯಾರ್ ಎಂಬುವವರಿಂದ 2018ರಲ್ಲಿ ಸೈಟ್ ಖರೀದಿಸಿದ್ದರು. ಆದರೆ ಕಟ್ಟಡ ನಿರ್ಮಾಣ ಮಾಡಲು ಬಿಡದೆ ತೊಂದರೆ ನೀಡುತ್ತಿದ್ದರು. ಅಲ್ಲದೆ 20 ಲಕ್ಷ ರೂ ಕೊಡುವಂತೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: ಮದ್ವೆಯಾಗುವ ಕನಸು ಹೊತ್ತು ಮನಸ್ಸು ಕೊಟ್ಟವಳು ದುರಂತ ಸಾವು: ನಟಿ ಆಶಿಕಾ ರಂಗನಾಥ್ ಸಂಬಂಧಿ ಸಾವಿನ ರಹಸ್ಯ ಬಯಲು
ಕಾನೂನು ಬಾಹಿರವಾಗಿ ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆಂದು ಉಷಾ ನಂಬಿಯಾರ್ ದೂರು ಹಿನ್ನಲೆ ಗ್ರೇಟರ್ ಬೆಂಗಳೂರು ಅಥಾರಿಟಿಯಿಂದ ಮುರುಳಿಗೆ ನೋಟಿಸ್ ಬಂದಿತ್ತು. ಇದರಿಂದ ಬೇಸತ್ತ ಮುರಳಿ ಮನನೊಂದು ನಿರ್ಮಾಣ ಹಂತದ ಕಟ್ಟಡದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇನ್ನು ಸಾವಿಗೂ ಮುನ್ನ ಮುರಳಿ ಡೆತ್ನೋಟ್ ಬರೆದಿಟ್ಟಿದ್ದು, ತನಗೆ ಜಿಬಿಎಯಿಂದ ನೋಟಿಸ್ ಕೊಡಿಸಲು ಪಕ್ಕದ ಮನೆಯ ಉಷಾ ನಂಬಿಯಾರ್ ಕಾರಣವಾಗಿದ್ದಾರೆಂದು ಆರೋಪಿಸಿ ಅವರ ಹೆಸರು ಉಲ್ಲೇಖಿಸಿದ್ದಾರೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ವೈಟ್ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಶಶಿ ಮತ್ತು ಉಷಾ ನಂಬಿಯಾರ್ರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ರೈಲಿಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಶಿವಮೊಗ್ಗದ ಪಶುವೈದ್ಯಕೀಯ ಕಾಲೇಜು ರಸ್ತೆ ಬಳಿ ಇಂದು ಬೆಳಗಿನ ಜಾವ ನಡೆದಿದೆ. ಅಶೋಕನಗರ ನಿವಾಸಿ ಈಶ್ವರ್ (30) ಮೃತ ವ್ಯಕ್ತಿ. ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಪ್ರೀತಿಸಿದನಿಂದಲೇ ಲೈಂಗಿಕ ಕಿರುಕುಳ: ಆತ್ಮಹತ್ಯೆ ಮಾಡಿಕೊಂಡ ಸ್ಯಾಂಡಲ್ವುಡ್ ನಟಿಯ ಸಂಬಂಧಿ
ಮೃತ ಈಶ್ವರ್ ಸರ್ಕಾರಿ ಆಯುರ್ವೇದ ಕಾಲೇಜು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ಮದ್ಯವ್ಯಸನಿಯಾಗಿದ್ದ ಎನ್ನಲಾಗಿದೆ. ಸದ್ಯ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.