ಪ್ರೀತಿಸಿದನಿಂದಲೇ ಲೈಂಗಿಕ ಕಿರುಕುಳ: ಆತ್ಮಹತ್ಯೆ ಮಾಡಿಕೊಂಡ ಸ್ಯಾಂಡಲ್ವುಡ್ ನಟಿಯ ಸಂಬಂಧಿ
ಸ್ಯಾಂಡಲ್ವುಡ್ ನಟಿಯ ಸಂಬಂಧಿ ಪ್ರೀತಿಸಿದವನ ಲೈಂಗಿಕ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿರುವಂತಹ ಘಟನೆ ನ.22 ರಂದು ಬೆಂಗಳೂರಿನ ಪಾಂಡುರಂಗ ನಗರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮೃತ ಯುವತಿ ತಂದೆ ದೂರಿನ ಮೇರೆಗೆ ಯುವಕ ಮತ್ತು ಆತನ ತಾಯಿ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಹಾಸನ, ನವೆಂಬರ್ 30: ನಟಿ ಆಶಿಕಾ ರಂಗನಾಥ್ ಸಂಬಂಧಿಯಾದ ಹಾಸನ (Hassan) ಮೂಲದ ಯುವತಿ ಬೆಂಗಳೂರಿನ ಪಾಂಡುರಂಗ ನಗರದಲ್ಲಿರುವ ಸಂಬಂಧಿಕರ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಇದೀಗ ಬೆಳಕಿಗೆ ಬಂದಿದೆ. ಘಟನೆ ನಡೆದು 10 ದಿನವಾಗಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದ ಕಾರಣ ಆಕೆಯ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೃತ ಯುವತಿ ಪ್ರೀತಿಸಿದವನ ಮಾನಸಿಕ ಹಾಗೂ ದೈಹಿಕ ಕಿರುಕುಳವನ್ನು ಸಹಿಸಲಾಗದೆ ಆತ್ಮಹತ್ಯೆಗೆ ಶರಣಾಗಿರುವುದಾಗಿ ತಿಳಿದುಬಂದಿದೆ.
ಲೈಂಗಿಕ ಸಂಪರ್ಕಕ್ಕೆ ಒತ್ತಾಯಿಸುತ್ತಿದ್ದ ಪ್ರೇಮಿ
ಅಚಲ (22) ನಟಿ ಆಶಿಕಾ ರಂಗನಾಥ್ ಅವರ ಮಾವನ ಮಗಳಾಗಿದ್ದು, ಇಂಜಿನಿಯರಿಂಗ್ ಮುಗಿಸಿ ಕೆಲಸಕ್ಕೆ ಸೇರುವ ಹಂತದಲ್ಲಿದ್ದರು.ಆಕೆ ತನ್ನ ದೂರದ ಸಂಬಂಧಿ ಮಯಾಂಕ್ ಜೊತೆ ಸ್ನೇಹ ಬೆಳೆಸಿಕೊಂಡಿದ್ದರು. ಆತನೂ ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ಸಂಪರ್ಕಕ್ಕೆ ಪೀಡಿಸಿದ್ದು, ಇದಕ್ಕೊಪ್ಪದ ಆಕೆಯ ಮೇಲೆ ಮಯಾಂಕ್ ದೈಹಿಕ ಹಲ್ಲೆ, ಮಾನಸಿಕ ಕಿರುಕುಳ ನೀಡುತ್ತಿದ್ದ. ಪದೇಪದೆ ಫೋನ್ ಮಾಡಿ ಬೆದರಿಸುತ್ತಿದ್ದ ಎಂದು ಅಚಲ ಕುಟುಂಬಸ್ಥರು ಆರೋಪಿಸಿದ್ದಾರೆ.
ಡ್ರಗ್ ಅಡಿಕ್ಟ್ ಆಗಿರುವ ಮಯಾಂಕ್‌ನಿಂದ ನಿರಂತರ ಹಿಂಸೆ ಎದುರಿಸುತ್ತಿದ್ದ ಆಕೆ, ಆತ ಮತ್ತೊಂದು ಯುವತಿಯೊಂದಿಗೆ ಸಂಬಂಧ ಹೊಂದಿದ್ದ ವಿಚಾರ ತಿಳಿದು ಮಾನಸಿಕವಾಗಿ ಕುಗ್ಗಿದ್ದರು. ಈ ಎಲ್ಲಾ ಸಮಸ್ಯೆಗಳಿಗೆ ಬೇಸತ್ತ ಅಚಲ ನೇಣಿಗೆ ಶರಣಾಗಿದ್ದಾರೆ ಎಂದು ಆಕೆಯ ಪಾಲಕರು ಹೇಳಿದ್ದಾರೆ. ಈ ಘಟನೆಯ ಸಂಬಂಧ ಹಾಸನದ ಮಯಾಂಕ್ ಹಾಗೂ ಅವನ ತಾಯಿ ಮೈನಾ ವಿರುದ್ಧ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಅಚಲ ಪೋಷಕರು ಆಗ್ರಹಿಸಿದ್ದಾರೆ.
ಇದನ್ನೂ ಓದಿ ಬೆಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ: ತಾಯಿ, ಮಗ ಸಾವು
ನಿನ್ನ ಬಿಟ್ಟು ಬದುಕಲು ಸಾಧ್ಯವಿಲ್ಲ ಎಂದು ಮೆಸೇಜ್ ಮಾಡಿದ್ದ ಅಚಲ
ಪ್ರೇಮಿ ಮಯಾಂಕ್ ತನ್ನನ್ನು ಮೋಸ ಮಾಡಿದ್ದಾನೆಂಬ ಶಂಕೆ ದೃಢಪಟ್ಟ ನಂತರ ಆತನಿಗೆ ಮೆಸೇಜ್ ಮಾಡಿದ್ದ ಅಚಲ, ಜೀವನದಲ್ಲಿ ನಿನ್ನ ಬಿಟ್ಟು ನನಗೆ ಬದುಕಲು ಸಾಧ್ಯವಿಲ್ಲ. ನೀನು ನನಗೆ ಮೋಸ ಮಾಡಿದರೂ ನಿನ್ನನ್ನು ಮರೆಯಲು ಆಗುತ್ತಿಲ್ಲ. ನನ್ನ ಕನಸುಗಳನ್ನು ನೀನು ನುಚ್ಚು ನೂರು ಮಾಡಿದ್ದೀಯ. ನನಗೆ ನೀನು ಮೋಸ ಮಾಡಿಲ್ಲವಾದರೆ ರಾಘವೇಂದ್ರ ಸ್ವಾಮಿ ಮೇಲೆ ಆಣೆ ಮಾಡು. ನೀನು ಮಾಡಿದ ಮೋಸಕ್ಕೆ ತಕ್ಕ ಬೆಲೆ ಕಟ್ಟಲೇ ಬೇಕು ಎಂದು ತನ್ನ ನೋವನ್ನು ಎಳೆ ಎಳೆಯಾಗಿ ವ್ಯಕ್ತಪಡಿಸಿದ್ದರು. ಇಷ್ಟೇ ಅಲ್ಲದೇ ತನ್ನ ನಂಬರ್ ಬ್ಕಾಕ್ ಮಾಡಬೇಡ ಎಂದೂ ಮಯಾಂಕ್ ಬಳಿ ಬೇಡಿಕೊಂಡಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:01 pm, Sun, 30 November 25



