ಬೆಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ: ತಾಯಿ, ಮಗ ಸಾವು
ಬೆಂಗಳೂರು-ಮೈಸೂರು ರಸ್ತೆಯ ಜುಡಿಯೋ ಬಳಿ ನಡೆದ ಭೀಕರ ಅಪಘಾತದಲ್ಲಿ ತಾಯಿ ಮತ್ತು ಮಗ ದುರ್ಮರಣಕ್ಕೀಡಾಗಿದ್ದಾರೆ. ಬೆಳಗ್ಗೆ 7 ಗಂಟೆಯ ಸುಮಾರಿಗೆ ಬೈಕ್‌ನಲ್ಲಿ ಬಂದ ಇಬ್ಬರೂ ಕಂಟೈನರ್ ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹೆಲ್ಮೆಟ್ ಧರಿಸದೇ ಇದ್ದುದೇ ಸಾವಿಗೆ ಪ್ರಮುಖ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರು, ನವೆಂಬರ್ 30: ಬೆಂಗಳೂರು (Bengaluru) ಮೈಸೂರು ರಸ್ತೆಯ ಜುಡಿಯೋ ಮುಂದೆ ಇಂದು ಬೆಳಗ್ಗೆ ಸಂಭವಿಸಿದ ಭೀಕರ ಅಪಘಾತದಲ್ಲಿ ತಾಯಿ ಹಾಗೂ ಮಗ ದುರ್ಮರಣ ಹೊಂದಿದ್ದಾರೆ. ಬೆಳಗ್ಗೆ 7 ಗಂಟೆ ಸುಮಾರಿಗೆ ತಾಯಿ, ಮಗನ ಬೈಕ್ಗೆ ಕಂಟೈನರ್ ತಗುಲಿದ್ದು, ಬಿದ್ದ ರಭಸಕ್ಕೆ ಇಬ್ಬರೂ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ (Mother-Son Death). ಸ್ಥಳಕ್ಕೆ ಭೇಟಿ ನೀಡಿದ ಬ್ಯಾಟರಾಯನಪುರ ಸಂಚಾರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಕಂಟೈನರ್‌ಗೆ ಬೈಕ್ ತಾಕಿ ಅಪಘಾತ
ಅಶ್ವಿನಿ (41) ಮತ್ತು ಅಭಿಲಾಶ್ (19) ಮೃತ ದುರ್ದೈವಿಗಳು. ತಾಯಿ ಮಗ ಇಬ್ಬರೂ ಕೆ.ಆರ್. ಮಾರ್ಕೆಟ್ ಕಡೆಗೆ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಕಾರು ಮತ್ತು ಕಂಟೈನರ್ ನಡುವಿನ ಸಣ್ಣ ಜಾಗದಲ್ಲಿ ಬೈಕ್ ಚಲಾಯಿಸಲು ಯತ್ನಿಸಿದಾಗ, ಕಂಟೈನರ್‌ಗೆ ಬೈಕ್ ತಾಕಿ ಇಬ್ಬರೂ ರಸ್ತೆ ಮೇಲೆ ಬಿದ್ದಿದ್ದಾರೆ. ಬಿದ್ದ ರಭಸಕ್ಕೆ ಇಬ್ಬರ ತಲೆಗೆ ತೀವ್ರ ಪೆಟ್ಟು ತಗುಲಿದ್ದು, ಕೆಲವೇ ಕ್ಷಣಗಳಲ್ಲಿ ಉಸಿರುಚೆಲ್ಲಿದ್ದಾರೆ.
ಇದನ್ನೂ ಓದಿ ಮನೆ ಮುಂದೆ ಆಟವಾಡುವ ನಿಮ್ಮ ಮಕ್ಕಳ ಬಗ್ಗೆ ಪೋಷಕರೇ ಎಚ್ಚರ! ಮಗುವಿನ ಮೇಲೆ ಹರಿದ ಕಾರು
ಹೆಲ್ಮೆಟ್ ಇದ್ದರೂ ಧರಿಸಿರದ ತಾಯಿ,ಮಗ
ಘಟನಾ ಸ್ಥಳಕ್ಕೆ ಪಶ್ಚಿಮ ವಿಭಾಗ ಸಂಚಾರ ಡಿಸಿಪಿ ಅನೂಪ್ ಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬೈಕ್‌ನಲ್ಲಿ ಹೆಲ್ಮೆಟ್ ಇದ್ದರೂ ಧರಿಸದೆ ಚಾಲನೆ ಮಾಡಿರುವುದು ಅಪಘಾತಕ್ಕೆ ಪ್ರಮುಖ ಕಾರಣವೆಂದು ಪೊಲೀಸರು ತಿಳಿಸಿದ್ದಾರೆ. ಮೃತರು ದೊಡ್ಡಗೊಲ್ಲರಹಟ್ಟಿಯವರಾಗಿದ್ದು, ಅಶ್ವಿನಿ ಆಸ್ಪತ್ರೆಯೊಂದರಲ್ಲಿ ಸೆಕ್ಯೂರಿಟಿ ಗಾರ್ಡನ್ ಆಗಿದ್ದರು. ತಾಯಿಯನ್ನು ಡ್ರಾಪ್ ಮಾಡಲು ಮಗ ಹೊಗುವಾಗ ಈ ಘಟನೆ ನಡೆದಿದೆ. ಮೃತದೇಹಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ ಎಂದಿದ್ದಾರೆ.
ಪ್ರದೀಪ್ ಚಿಕ್ಕಾಟಿ, ಟಿವಿ9 ಬೆಂಗಳೂರು
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




