ಕರುನಾಡಿಗೂ ತಟ್ಟಿದ ಸೈಕ್ಲೋನ್ ಎಫೆಕ್ಟ್: ಬೆಂಗಳೂರು ಥಂಡಾ, ಇನ್ನೂ ಮೂರು ದಿನ ಮೈಕೊರೆಯುವ ಚಳಿ
ದಿತ್ವಾ ಚಂಡಮಾರುತದ ಪರಿಣಾಮ ಇತ್ತ ಕರ್ನಾಟಕದಲ್ಲಿ ಹವಾಮಾನ ಸಂಪೂರ್ಣ ಬದಲಾವಣೆ ಆಗಿದೆ. ಬೆಂಗಳೂರಿನಲ್ಲಿ ಚಳಿ ಹೆಚ್ಚಾಗಿದ್ದು, ತಾಪಮಾನ 12 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಿಗೆ ಮಳೆ ಮುನ್ಸೂಚನೆ ನೀಡಲಾಗಿದೆ. ಸಾರ್ವಜನಿಕರು ಚಳಿ ಮತ್ತು ಮಳೆಯಿಂದ ಎಚ್ಚರವಹಿಸುವಂತೆ ಇಲಾಖೆ ಸೂಚಿಸಿದೆ.

ಬೆಂಗಳೂರು, ನವೆಂಬರ್ 30: ಬಂಗಾಳಕೊಲ್ಲಿ ಮತ್ತು ಶ್ರೀಲಂಕಾ ಕರಾವಳಿಯಲ್ಲಿ ರೂಪಗೊಂಡ ದಿತ್ವಾ ಚಂಡಮಾರುತದ (Ditwah Cyclone) ಪರಿಣಾಮವಾಗಿ ಕರ್ನಾಟಕದ ಹವಾಮಾನದಲ್ಲಿ ದೊಡ್ಡ ಮಟ್ಟದ ಬದಲಾವಣೆ ಕಂಡುಬಂದಿದೆ. ಬೆಂಗಳೂರಿನಲ್ಲಿ (Bengaluru) ಕಳೆದ ಒಂದು ವಾರದಿಂದ ಚಳಿಯ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಿದ್ದು, ಮಧ್ಯಾಹ್ನದ ವೇಳೆಯಲ್ಲೂ ತಣ್ಣನೆಯ ಗಾಳಿ ಮೈ ಕೊರೆಯುತ್ತಿದೆ. ರಾಜಧಾನಿಯ ತಾಪಮಾನ ಇನ್ನೂ 4 ಡಿಗ್ರಿ ಕುಸಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇನ್ನೂ ಕುಸಿಯಲಿದೆ ಬೆಂಗಳೂರಿನ ತಾಪಮಾನ
ಬೆಂಗಳೂರಿನಲ್ಲಿ ಎರಡು ದಿನಗಳಿಂದ ತಾಪಮಾನ ಹಠಾತ್ ಕುಸಿತಗೊಂಡಿದ್ದು, ಕನಿಷ್ಟ 16 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಮುಂದಿನ ದಿನಗಳಲ್ಲಿ ತಾಪಮಾನ ಮತ್ತಷ್ಟು ಇಳಿಯುವ ಸಾಧ್ಯತೆ ಇದ್ದು, 12 ಡಿಗ್ರಿ ಸೆಲ್ಸಿಯಸ್‌ವರೆಗೆ ಕುಸಿಯಬಹುದೆಂದು ಇಲಾಖೆ ತಿಳಿಸಿದೆ.
ಚಂಡಮಾರುತ ಪರಿಣಾಮ ರಾಜ್ಯದಲ್ಲಿ ಮಳೆ
ದಿತ್ವಾ ಚಂಡಮಾರುತ ತಮಿಳುನಾಡು ಹಾಗೂ ಆಂಧ್ರ ಕರಾವಳಿಗೆ ಅಪ್ಪಳಿಸಿರುವ ಪರಿಣಾಮ, ಕರ್ನಾಟಕದ ಹಲವು ಜಿಲ್ಲೆಗಳಿಗೆ ಮಳೆ ಮುನ್ಸೂಚನೆ ನೀಡಲಾಗಿದೆ. ಕೆಂಗೇರಿ ಸೇರಿದಂತೆ ಬೆಂಗಳೂರಿನ ಹಲವೆಡೆ ಇಂದು ಬೆಳ್ಳಂಬೆಳಿಗ್ಗೆ ಮಳೆ ಸುರಿದಿದೆ. ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ನಗರ ಮತ್ತು ಗ್ರಾಮಾಂತರ, ರಾಮನಗರ, ಮೈಸೂರು, ಮಂಡ್ಯ, ಹಾಸನ, ಕೊಡಗು , ಶಿವಮೊಗ್ಗ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಸೇರಿ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಗುಡುಗು-ಸಿಡಿಲು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಇದೇ ವೇಳೆ ಉತ್ತರ ಕನ್ನಡ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಬೀದರ್, ಗದಗ, ಹಾವೇರಿ, ಕಲಬುರ್ಗಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಒಣ ಹವೆಯೇ ಮುಂದುವರಿಯಲಿದೆ.
ಕರ್ನಾಟಕದ ಹವಾಮಾನದ ಕುರಿತ ಎಕ್ಸ್ ಪೋಸ್ಟ್ ಇಲ್ಲಿದೆ
6.45AM Update: Bengaluru Skyline on this ❄️ Cold-Damp Sunday Morning.
Drizzling 🌧️ across the City. On and off Drizzling is expected throughout the day. Another cold day coming up.
Typical madras cyclone weather this morning!
Time for some hot Coffee 😎 #BengaluruWeather pic.twitter.com/KITpgUd5jP
— Namma Karnataka Weather (@namma_vjy) November 30, 2025
ಇದನ್ನೂ ಓದಿ ದಿತ್ವಾ ಚಂಡಮಾರುತ ಎಫೆಕ್ಟ್: ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ಮಳೆ, ಮೈನಡುಗಿಸುವ ಚಳಿ
ಸಾರ್ವಜನಿರಿಗೆ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ
ಚಳಿಯಿಂದ ನಗರದಲ್ಲಿ ಮಂಜು ಕವಿದ ವಾತಾವರಣವಿದ್ದು, ಬೆಂಗಳೂರಿನ ವಾತಾವರಣ ನೋಡಿದರೆ ಮಿನಿ ಸ್ವಿಜರ್ಲ್ಯಾಂಡ್ನಂತೆ ಎನಿಸುತ್ತಿದೆ. ಮಾಲಿನ್ಯವೂ ಕಡಿಮೆ ಆಗಿರುವುದರಿಂದ ಒಂದು ವಾರದಿಂದ ಬೆಂಗಳೂರು ಹಳೆಯ ಬೆಂಗಳೂರು ರೀತಿಯಲ್ಲಿದೆ ಎಂದು ಕುಟುಂಬ ಸಮೇತ ವಾಕ್ಗೆ ಬಂದ ವಾಯು ವಿಹಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮುಂದಿನ ಮೂರು ದಿನಗಳವರೆಗೆ ರಾಜ್ಯದ ಹವಾಮಾನ ಮಳೆ ಮತ್ತು ಚಳಿಯಿಂದ ಕೂಡಿರುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಸಲಹೆ ನೀಡಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



