ಮನೆ ಮುಂದೆ ಆಟವಾಡುವ ನಿಮ್ಮ ಮಕ್ಕಳ ಬಗ್ಗೆ ಪೋಷಕರೇ ಎಚ್ಚರ! ಮಗುವಿನ ಮೇಲೆ ಹರಿದ ಕಾರು
ನೆಲಮಂಗಲದ ಸುಭಾಷ್ ನಗರದ ಬಳಿ ವೇಗವಾಗಿ ಬಂದ ಕಾರು ಮನೆಯ ಮುಂದೆ ಆಟವಾಡುತ್ತಿದ್ದ ಮೂರು ವರ್ಷದ ಮಗುವಿನ ಮೇಲೆ ಹರಿದ ಘಟನೆ ನಡೆದಿದೆ. ಈ ಭೀಕರ ಅಪಘಾತ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅದೃಷ್ಟವಶಾತ್ ಮಗು ಪ್ರಾಣಾಪಾಯದಿಂದ ಪಾರಾಗಿದೆ. ಮಗುವಿನ ತಲೆ, ಮುಖ ಹಾಗೂ ಬೆನ್ನಿಗೆ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಚಾಲಕನ ಅಜಾಗರೂಕತೆಯೇ ಘಟನೆಗೆ ಕಾರಣ ಎಂದು ಆರೋಪಿಸಲಾಗಿದೆ.

ನೆಲಮಂಗಲ, ನವೆಂಬರ್ 30: ಮನೆಯ ಆವರಣದಲ್ಲಿ ಅಥವಾ ರಸ್ತೆಗಳಲ್ಲಿ ಆಟವಾಡುವ ಮಕ್ಕಳ ಮೇಲೆ ವಾಹನ ಹರಿದ ಸಾಕಷ್ಟು ಘಟನೆಗಳು ಈ ಹಿಂದೆಯೂ ಬೆಳಕಿಗೆ ಬಂದಿದ್ದು, ಅಂಥದ್ದೇ ಭೀಕರ ಘಟನೆ ನೆಲಮಂಗಲದಲ್ಲೂ (Nelamangala) ನಡೆದಿದೆ. ಮನೆಯ ಮುಂದೆ ರಸ್ತೆ ಮೇಲೆ ಆಟವಾಡುತ್ತಿದ್ದ ಮಗುವಿನ ಮೇಲೆ ಕಾರು ಹರಿದ (Car runs Over Child) ಘಟನೆ ನೆಲಮಂಗಲದಲ್ಲಿ ನಡೆದಿದೆ. ಅದೃಷ್ಟವಶಾತ್ ಮಗು ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿಸಿಟಿಯಲ್ಲಿ ಭಯಾನಕ ದೃಶ್ಯ ಸೆರೆ
ನೆಲಮಂಗಲದ ಟಿ ಬಿ ಸ್ಟಾಪ್ ಬಳಿಯ ಸುಭಾಷ್ ನಗರದ ತಿರುವಿನಲ್ಲಿ ವೇಗವಾಗಿ ಬಂದ ಮಾರುತಿ ಎಟ್ರಿಕಾ ಕಾರು ನಿಯಂತ್ರಣ ತಪ್ಪಿ ಮನೆಯ ಮುಂದೆ ಆಟವಾಡುತ್ತಿದ್ದ ಮೂರು ವರ್ಷದ ದಕ್ಷಿತ್ ಎಂಬ ಮಗುವಿನ ಮೇಲೆ ಹರಿದಿದ್ದು, ಸಿಸಿಟಿವಿಯಲ್ಲಿ ಈ ಭಯಾನಕ ದೃಶ್ಯ ಸೆರೆಯಾಗಿದೆ. ಮಗುವಿನ ಚೀರಾಟ ಕೇಳಿದ ಮನೆಮಂದಿ ಮತ್ತು ನೆರೆಹೊರೆಯವರು ಕಂಗಾಲಾಗಿದ್ದು, ತಕ್ಷಣ ಸ್ಥಳಕ್ಕೆ ಧಾವಿಸಿ ಮಗುವನ್ನು ರಕ್ಷಿಸಿದ್ದಾರೆ.
ಇದನ್ನೂ ಓದಿ 11 ತಿಂಗಳ ಮಗು ದುರಂತ ಅಂತ್ಯ: ಚನ್ನಪಟ್ಟಣದಲ್ಲೊಂದು ಮನಕಲಕುವ ಘಟನೆ
ಚಾಲಕ ಬೇಜವಬ್ದಾರಿಯಿಂದ ಕಾರು ಚಲಾಯಿಸಿದ್ದೇ ಈ ಘಟನೆಗೆ ಕಾರಣ ಎಂಬ ಆರೋಪ ಕೇಳಿ ಬಂದಿದೆ. ದಕ್ಷಿತ್‌ನ ತಲೆ, ಮುಖ ಮತ್ತು ಬೆನ್ನಿನ ಭಾಗಕ್ಕೆ ಗಾಯಗಳಾಗಿರುವುದರಿಂದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಚ್ಚರಿಯೆಂಬಂತೆ ಮಗು ಸಾವಿನ ಅಂಚಿನಿಂದ ಪಾರಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಅಪಘಾತದ ಕುರಿತು ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರದೀಪ್ ಚಿಕ್ಕಾಟಿ, ಟಿವಿ9 ಬೆಂಗಳೂರು
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:07 am, Sun, 30 November 25




