
ಬೆಂಗಳೂರು, ಜುಲೈ 29: ಬಿಬಿಎಂಪಿ (BBMP) ತನ್ನ ಅಧೀನದಲ್ಲಿರುವ 118 ಮಾರುಕಟ್ಟೆಗಳಿಂದ ನಿರೀಕ್ಷಿತ ಆದಾಯ ಕಂಡುಕೊಳ್ಳುವಲ್ಲಿ ಹೆಣಗಾಡುತ್ತಿದೆ. ಮೂಲಗಳ ಪ್ರಕಾರ, ಬಿಬಿಎಂಪಿಯ ಎಲ್ಲಾ ವಲಯಗಳ ಮಾರುಕಟ್ಟೆಗಳಲ್ಲಿ 5,956 ಅಂಗಡಿಗಳಿದ್ದು, ಈವರೆಗೆ 152.17 ಕೋಟಿ ರೂ. ಆದಾಯ ಬರಬೇಕಿದೆ. ಆದರೆ 2025 ರ ಜೂನ್ ವರೆಗೆ ಕೇವಲ 2.14 ಕೋಟಿ ರೂ.ಗಳನ್ನು ಮಾತ್ರ ಸಂಗ್ರಹ ಮಾಡಿರುವುದಾಗಿ ಗೊತ್ತಾಗಿದೆ. ಮಳಿಗೆಗಳಲ್ಲಿ ವಹಿವಾಟು ನಡೆಸುತ್ತಿರುವ ಸಣ್ಣ ವ್ಯಾಪಾರಿಗಳು ಪಾಲಿಕೆ ಲೆಕ್ಕಾಚಾರಕ್ಕೆ ಅಪಸ್ವರ ಎತ್ತಿದ್ದು, 2015 ರಲ್ಲಿ ಪಾಲಿಕೆ ನಿಗದಿ ಮಾಡಿದ್ದ ಹೊಸ ಬಾಡಿಗೆ ದರ ಅವೈಜ್ಞಾನಿಕವಾಗಿದೆ. ಅಗತ್ಯ ಮೂಲಭೂತ ಸೌಲಭ್ಯ ನೀಡದೆ ಮೂರು ಪಟ್ಟು ಹೆಚ್ಚು ಬಾಡಿಗೆ ದರವನ್ನು ಪರಿಷ್ಕರಣೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಸದ್ಯ ಈ ವಿಚಾರ ನ್ಯಾಯಾಲಯದ ಅಂಗಳದಲ್ಲಿದೆ ಎಂದು ಕೆಆರ್ ಮಾರುಕಟ್ಟೆ ಮಳಿಗೆದಾರರ ಸಂಘದ ಅಧ್ಯಕ್ಷ ದಿವಾಕರ್ ಮಾಹಿತಿ ನೀಡಿದ್ದಾರೆ.
ಬಿಬಿಎಂಪಿ ಪೂರ್ವ ವಲಯದ ಒಟ್ಟು 47 ಮಾರುಕಟ್ಟೆಗಳಲ್ಲಿ 1,742 ಮಳಿಗೆಗಳು ಇದ್ದು, 26.88 ಕೋಟಿ ರೂಪಾಯಿ ಬಾಡಿಗೆ ಹಣ ಬಾಕಿ ಉಳಿದಿದೆ. ಇನ್ನು ಪಶ್ಚಿಮ ವಲಯದಲ್ಲಿ 43 ಮಾರುಕಟ್ಟೆಗಳ ಪೈಕಿ 2,850 ಮಳಿಗೆಗಳಿಂದ 47.35 ಕೋಟಿ ರೂಪಾಯಿ ಹಣ ಬರಬೇಕಿದೆ. ದಕ್ಷಿಣ ವಲಯದ 26 ಮಾರುಕಟ್ಟೆಗಳ ಪೈಕಿ 1,332 ಮಳಿಗೆದಾರರು 74.41 ಕೋಟಿ ಹಾಗೂ ಬೊಮ್ಮನಹಳ್ಳಿ ವಲಯದ 31 ಮಳಿಗೆದಾರರು 1.27 ಕೋಟಿ ರೂ. ಬಾಡಿಗೆ ಹಣ ಬಾಕಿ ಉಳಿಸಿಕೊಂಡಿದ್ದಾರೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.
ಇದನ್ನೂ ಓದಿ: ಟ್ರಾಫಿಕ್ ಜಾಮ್ಗೆ ಮುಕ್ತಿ ನೀಡಲು ಬೆಂಗಳೂರಿನ ಈ ರಸ್ತೆಯಲ್ಲಿ ವಾಹನ ಸಂಚಾರ ಬಂದ್
ಒಟ್ಟಾರೆಯಾಗಿ ಮಳಿಗೆದಾರರು ಹಾಗೂ ಬಿಬಿಎಂಪಿ ನಡುಗೆ ಬಾಡಿಗೆ ದರ ಸಂಬಂಧ ಅಸ್ಪಷ್ಟತೆ ಇನ್ನೂ ಮುಂದುವರೆದಿದೆ. ಅಗತ್ಯ ಸೌಲಭ್ಯಗಳನ್ನು ಕೊಡದೆ ಬಾಡಿಗೆ ದರಗಳನ್ನು ಬೇಕಾಬಿಟ್ಟಿ ನಿಗದಿ ಮಾಡುವುದು ಎಷ್ಟು ಸರಿ ಎಂದು ವ್ಯಾಪಾರಿಗಳು ಪ್ರಶ್ನಿಸಿದರೆ, ಮತ್ತೊಂದೆಡೆ ಪಾಲಿಕೆ ಮಾತ್ರ 150 ಕೋಟಿ ರೂ. ಬಾಕಿ ಉಳಿದಿದೆ ಎಂದು ಲೆಕ್ಕ ಕೊಡುತ್ತಿದೆ. ಇದಕ್ಕೆ ಯಾವಾಗ ತಾರ್ಕಿಕ ಅಂತ್ಯ ದೊರೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.
ವರದಿ: ಲಕ್ಷ್ಮಿ ನರಸಿಂಹ, ಟಿವಿ9, ಬೆಂಗಳೂರು