ಬೆಂಗಳೂರು: ವೈದ್ಯರೊಬ್ಬರು ಸರ್ಜರಿಗಾಗಿ ಬರೊಬ್ಬರಿ 3ಕಿ.ಮೀ ಓಡಿರುವಂತಹ ಘಟನೆ ನಗರದಲ್ಲಿ ನಡೆದಿದೆ. ಸರ್ಜಾಪುರ ರಸ್ತೆಯಲ್ಲಿರೋ ಮಣಿಪಾಲ್ ಆಸ್ಪತ್ರೆ ವೈದ್ಯ ಗೋವಿಂದ್ ನಂದಕುಮಾರ್. ದಿನ ನಿತ್ಯ ಕನ್ನಿಂಗ್ ಹ್ಯಾಂ ರೋಡ್‌ನಿಂದ ಸರ್ಜಾಪುರದ ಆಸ್ಪತ್ರೆಯವರೆಗೂ ಹೋಗ್ತಿದ್ರು. ಆಗಸ್ಟ್ 30 ರಂದು ಮಳೆಯಿಂದ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿತ್ತು. ಹೀಗಾಗಿ 3 ಕಿ.ಮೀ.ವರೆಗೂ ಜಾಮ್ ಆಗಿತ್ತು. ಆಸ್ಪತ್ರೆ ತಲುಪಲು ಸುಮಾರು 1ಗಂಟೆಗೂ ಹೆಚ್ಚು ಸಮಯ ಬೇಕಾಗಿತ್ತು. ಅದೇ ದಿನ ಲಾಪ್ರೊಸ್ಕೋಪಿಕ್ ಅಂದ್ರೆ ಪಿತ್ತಕೋಶದ ಶಸ್ತ್ರ ಚಿಕಿತ್ಸೆ ಟೈಮಿಂಗ್ಸ್ ನಿಗದಿಯಾಗಿತ್ತು. ಈ ಹಿನ್ನೆಲೆ ವೈದ್ಯ ಗೋವಿಂದ್ ಟ್ರಾಫಿಕ್‌ನಲ್ಲೇ ಇಳಿದು ಆಸ್ಪತ್ರೆಗೆ ಸುಮಾರು 3 ಕಿ.ಮೀ.ವರೆಗೂ ಓಡಿಕೊಂಡು ಹೋಗಿದ್ದಾರೆ. ಡಾಕ್ಟರ್ ಓಡಿಕೊಂಡು ಹೋಗಿರೋ ವಿಡಿಯೋ ಈಗ ಫುಲ್ ವೈರಲ್ ಆಗುತ್ತಿದೆ. ಸರಿಯಾದ ಸಮಯಕ್ಕೆ ಆಸ್ಪತ್ರೆ ತಲುಪಿ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಿ ವೈದ್ಯ ಗೋವಿಂದ್ ಮಾನವೀಯತೆ ಮೆರೆದಿದ್ದಾರೆ. ಜೊತೆಗೆ ಇತರೆ ವೈದ್ಯರಿಗೆ ಮಾದರಿಯಾಗಿದ್ದಾರೆ.
ಈ ಕುರಿತು ಮಾತನಾಡಿದ ಡಾ. ಗೋವಿಂದ್ ನಂದಕುಮಾರ್ ನಾನು ಟ್ರಾಫಿಕ್ನಲ್ಲು ಸಿಲುಕಿಕೊಂಡಿದ್ದೆ. ಜೊತೆಗೆ ಶಸ್ತ್ರ ಚಿಕಿತ್ಸೆಗೆ ತಡವಾಯಿತಲ್ಲವೆಂದು ನಾನು ಹೆದರಲು ಪ್ರಾರಂಭಿಸಿದೆ. ಗೂಗಲ್ ಮ್ಯಾಪ್ ಹಾಕಿದ್ದರೂ, ಕಾರಿನಲ್ಲಿ ಹೋದರೆ ಅದು 45 ನಿಮಿಷ ಬೇಕು ಎಂದು ತೋರಿಸುತ್ತಿತ್ತು. ಹಾಗಾಗಿ ನಾನು ಓಡಿಕೊಂಡು ಆಸ್ಪತ್ರೆ ತಲುಪಿದೆ. ನನ್ನ ಕಾರು ಚಾಲಕ ಇದ್ದುದರಿಂದ ನಾನು ಕಾರು ಬಿಟ್ಟು ಬರಲು ಸಾಧ್ಯವಾಯಿತು. ಜೊತೆಗೆ ನಾನು ನಿಯಮಿತವಾಗಿ ಜಿಮ್ ಮಾಡುತ್ತಿದ್ದರಿಂದ ಓಡಲು ಸುಲಭವಾಯಿತು. ನಾನು ಆಸ್ಪತ್ರೆಗೆ 3 ಕಿ,ಮೀ ಓಡಿ ಸರಿಯಾದ ಸಮಯಕ್ಕೆ ಶಸ್ತ್ರ ಚಿಕಿತ್ಸೆಗೆ ಹಾಜರಾದೆ ಎಂದು ಡಾ. ಗೋವಿಂದ್ ನಂದಕುಮಾರ್ ಹೇಳಿದರು.
ಈ ರೀತಿಯಾಗಿ ಕಾರು ಬಿಟ್ಟು ಹೋಗುವುದು ಇದೇ ಮೊದಲಲ್ಲ. ಈ ಹಿಂದೆ ಕೂಡ ನಾನು ಶಸ್ತ್ರ ಚಿಕಿತ್ಸೆಗೆ ಕಾರು ಬಿಟ್ಟು ಹೋಗಿದ್ದೇನೆ. ಕೆಲವೊಮ್ಮೆ ಕಾಲ್ನಡಿಗೆಯಲ್ಲಿ ರೈಲು ಮಾರ್ಗವನ್ನು ದಾಟಿ ಹೋಗಿದ್ದೇನೆ ಎಂದು ಅವರು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:27 am, Mon, 12 September 22