ಬೆಂಗಳೂರು, ನವೆಂಬರ್ 15: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಿತ್ಯ ಟ್ರಾಫಿಕ್ ಜಾಮ್ (Bengaluru Traffic Jam) ಕಿರಿಕಿರಿ. ಮೆಟ್ರೋ ಸಿಟಿಯಲ್ಲಿ ವಾಹನ ಸವಾರರು ನಿತ್ಯ ಟ್ರಾಫಿಕ್ನಲ್ಲಿ ಹೆಣಗಾಡ್ತಾರೆ. ಇದೀಗ ಟ್ರಾಫಿಕ್ಗೆ ಕಾರಣ ಏನು ಎಂಬುದನ್ನು ಟ್ರಾಫಿಕ್ ಪೊಲೀಸರೇ (Bengaluru Traffic Police) ಬಿಚ್ಚಿಟ್ಟಿದ್ದಾರೆ. ಟ್ರಾಫಿಕ್ ಜಾಮ್ ಸಂಬಂಧಿಸಿ ಅಚ್ಚರಿಗೊಳ್ಳುವ ಮಾಹಿತಿಯೊಂದನ್ನು ಬೆಂಗಳೂರು ಟ್ರಾಫಿಕ್ ಪೊಲೀಸರ ಅಂಕಿ ಅಂಶ ಬಯಲು ಮಾಡಿದೆ. ಬಿಎಂಟಿಸಿ ಬಸ್ಗಳೇ ಬೆಂಗಳೂರಿನ ಟ್ರಾಫಿಕ್ ಜಾಮ್ಗೆ ಕಾರಣವಾಗುತ್ತಿರುವ ವಿಚಾರವನ್ನ ಬಹಿರಂಗಪಡಿಸಿದೆ.
ಬಿಎಂಟಿಸಿ ಬಸ್ಗಳ ಮೂಲಕ ದಿನನಿತ್ಯ ಲಕ್ಷಾಂತರ ಮಂದಿ ನಗರದ ವಿವಿಧ ಕಡೆಗೆ ಸಂಚಾರ ಮಾಡ್ತಾರೆ. ಆದ್ರೆ ಮಾರ್ಗ ಮಧ್ಯೆನೇ ಬಸ್ಗಳು ನಿತ್ರಾಣವಾಗ್ತಿದ್ದು, ನಡು ರಸ್ತೆಯಲ್ಲಿ ಕೆಟ್ಟು ಹೋಗುವ ಪರಿಣಾಮ ದೊಡ್ಡ ಮಟ್ಟದ ಟ್ರಾಫಿಕ್ ಜಾಮ್ ಉಂಟಾಗ್ತಿದೆ. ದಿನನಿತ್ಯ ನಾಲ್ಕೈದು ಬಸ್ಗಳು ಈ ರೀತಿ ನಡು ರಸ್ತೆಯಲ್ಲಿ ಕೆಟ್ಟೋಗ್ತಿದ್ದು, ಅವುಗಳಿಂದ ಸುಗಮ ಸಂಚಾರಕ್ಕೆ ತೊಂದ್ರೆಯಾಗ್ತಿದೆ. ಈ ವರ್ಷ ನಡು ರಸ್ತೆಯಲ್ಲಿಯೇ ಕೆಟ್ಟು ಹೋದ ಬಸ್ಗಳ ಪೈಕಿ ಬಿಎಂಟಿಸಿ ಮೊದಲ ಸ್ಥಾನದಲ್ಲಿದ್ದು, ಬರೋಬ್ಬರಿ 1,478 ಬಿಎಂಟಿಸಿ ಬಸ್ಗಳು ಕೆಟ್ಟೋಗಿವೆ. ಹೊಸ ಬಸ್ಗಳನ್ನು ಖರೀದಿ ಮಾಡುವುದನ್ನು ಬಿಎಂಟಿಸಿ ನಿಲ್ಲಿಸಿದ್ದು, ಇದರಿಂದ ಈ ಸಮಸ್ಯೆ ಆಗ್ತಿದೆ. ಕೂಡಲೇ ಹೊಸ ಬಸ್ಗಳನ್ನು ಖರೀದಿ ಮಾಡಬೇಕು ಎನ್ನಲಾಗುತ್ತಿದೆ.
ಜನವರಿಯಲ್ಲಿ 152, ಫೆಬ್ರವರಿಯಲ್ಲಿ 158, ಮಾರ್ಚ್ನಲ್ಲಿ 160 ಬಸ್ಗಳು ಕೆಟ್ಟುಹೋಗಿವೆ. ಏಪ್ರಿಲ್ನಲ್ಲಿ 110, ಮೇನಲ್ಲಿ 112, ಜೂನ್ನಲ್ಲಿ 130, ಜುಲೈ 160, ಆಗಸ್ಟ್ 167, ಸೆಫ್ಟೆಂಬರ್159 ಹಾಗೂ ಅಕ್ಟೋಬರ್ 170 ಬಸ್ಗಳು ನಡುರಸ್ತೆಯಲ್ಲಿ ಕೆಟ್ಟುಹೋಗಿವೆ ಎಂಬುದನ್ನು ಬೆಂಗಳೂರು ಟ್ರಾಫಿಕ್ ಪೊಲೀಸರ ಅಂಕಿ ಅಂಶ ಬಯಲು ಮಾಡಿದೆ. ಈ ಬಗ್ಗೆ ಬಿಎಂಟಿಸಿ ಚೀಫ್ ಟ್ರಾಫಿಕ್ ಮ್ಯಾನೇಜರ್ ಪ್ರಭಾಕರ್ ರೆಡ್ಡಿ ಅವರನ್ನು ಪ್ರಶ್ನಿಸಿದಾಗ, 921 ಹೊಸ ಬಸ್ಗಳನ್ನು ಖರೀದಿ ಮಾಡ್ತಿದ್ದೀವಿ ಆ ಬಸ್ಗಳು ಬಂದ ಮೇಲೆ ಹಳೆಯ ಬಸ್ಗಳ ಬದಲಿಗೆ ಹೊಸ ಬಸ್ಗಳನ್ನು ರೋಡಿಗಿಳಿಸ್ತಿವಿ ಎಂದಿದ್ದಾರೆ.
ಬಿಎಂಟಿಸಿ ಜೊತೆಗೆ ಕೆಎಸ್ಆರ್ಟಿಸಿ ಬಸ್ಗಳು ಕೂಡ ನಡುರಸ್ತೆಯಲ್ಲಿಯೇ ಸಂಚಾರ ನಿಲ್ಲಿಸೋದ್ರಿಂದ, ಇತರರಿಗೂ ತೊಂದ್ರೆಯಾಗ್ತಿದೆ. ಸಾರಿಗೆ ಇಲಾಖೆ ಈ ಬಗ್ಗೆ ಗಮನ ಹರಿಸಿ, ಇಂತಹ ಬಸ್ಗಳನ್ನ ಸರಿಪಡಿಸುವ ಕೆಲಸ ಮಾಡ್ಲಿ ಎಂದು ಬೆಂಗಳೂರು ಜನರು ಕೂಡ ಮನವಿ ಮಾಡ್ತಿದ್ದಾರೆ.
ಈ ಬಾರಿಯ ದೀಪಾವಳಿಯ ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರಿಂದ ಓನ್ ಟೂ ಡಬಲ್ ಹಣ ಪೀಕಿದ್ದ ಖಾಸಗಿ ಬಸ್ ಮಾಲೀಕರಿಗೆ ಆರ್ಟಿಒ ಸರಿಯಾಗಿ ಬಿಸಿ ಮುಟ್ಟಿಸಿದೆ. ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರಿಂದ ದುಪ್ಪಟ್ಟು ಹಣ ಪೀಕುತ್ತಿದ್ದ ಖಾಸಗಿ ಬಸ್ ಗಳನ್ನು ತಪಾಸಣೆ ಮಾಡಿದ ರಾಜ್ಯ ಸಾರಿಗೆ ಇಲಾಖೆಯ ಅಧಿಕಾರಿಗಳು, ಸುಮಾರು ಎರಡು ಸಾವಿರ ಬಸ್ಗಳನ್ನು ತಪಾಸಣೆ ಮಾಡಿ 1460 ಕೇಸ್ ದಾಖಲಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಕಂಬಳ: 70 ಎಕರೆ ಜಾಗದಲ್ಲಿ ಕಂಬಳಕ್ಕೆ ತಯಾರಿ, ಸ್ಥಳಕ್ಕೆ ಯುಟಿ ಖಾದರ್ ಭೇಟಿ
ಇನ್ನು ಇದರಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಸುಮಾರು 2 ಕೋಟಿ 14 ಲಕ್ಷ ರೂಪಾಯಿ ಸಂದಾಯವಾಗಿದೆ. ಅನಧಿಕೃತವಾಗಿ ಪಟಾಕಿ ಸಾಗಿಸುತ್ತಿದ್ದ 21 ಬಸ್ ಸೇರಿದಂತೆ ಒಟ್ಟು 36 ಖಾಸಗಿ ಬಸ್ಗಳನ್ನು ಸೀಜ್ ಮಾಡಲಾಗಿದೆ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ರಾಜ್ಯ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ನಟರಾಜ್ ಶರ್ಮ, ಹಬ್ಬದ ಸಂದರ್ಭದಲ್ಲಿ ಖಾಸಗಿ ಬಸ್ ಗಳು ಮಾತ್ರ ಅಲ್ಲ ಕೆಎಸ್ಆರ್ಟಿಸಿ ಬಸ್ನವರು ಕೂಡ ಹೆಚ್ಚಿನ ಹಣ ಪಡೆದುಕೊಳ್ಳುತ್ತಾರೆ. ಅತ್ತಿಬೆಲೆಯಿಂದ ಬರುವ ಬಿಎಂಟಿಸಿ ಬಸ್ಗಳಲ್ಲಿ ಸಾಕಷ್ಟು ಪಟಾಕಿ ಸಪ್ಲೈ ಆಗಿದೆ. ಆದರೆ ಕೆಎಸ್ಆರ್ಟಿಸಿ, ಬಿಎಂಟಿಸಿ ಮೇಲೆ ಯಾಕೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ