ಕಳಪೆ, ಅರ್ಧ ಹೆಲ್ಮೆಟ್ ಹಾಕಿ ಬೈಕ್ ಚಲಾಯಿಸುತ್ತೀರಾ? ಕಾದಿದೆ ದಂಡ: ಕಾರ್ಯಾಚರಣೆಗೆ ಬೆಂಗಳೂರು ಪೊಲೀಸರು ಸಜ್ಜು
ಕಳಪೆ, ಗುಣಮಟ್ಟವಿಲ್ಲದ ಹೆಲ್ಮೆಟ್ ಹಾಗೂ ಅರ್ಧ ಹೆಲ್ಮೆಟ್ ಧರಿಸುವ ಬೆಂಗಳೂರಿನ ದ್ವಿಚಕ್ರ ವಾಹನ ಸವಾರರು ಇನ್ನಾದರೂ ಎಚ್ಚೆತ್ತುಕೊಳ್ಳುವುದು ಒಳಿತು. ಇಂಥ ಕಳಪೆ ಹೆಲ್ಮೆಟ್ ಧರಿಸುವವರ ವಿರುದ್ಧ ಬಿರುಸಿನ ಕಾರ್ಯಾಚರಣೆಗೆ ಬೆಂಗಳೂರು ಟ್ರಾಫಿಕ್ ಪೊಲೀಸರು ಸಜ್ಜಾಗಿದ್ದಾರೆ. ಆ ಕುರಿತ ಮಾಹಿತಿ ಇಲ್ಲಿದೆ.
ಬೆಂಗಳೂರು, ಜೂನ್ 24: ದ್ವಿಚಕ್ರ ವಾಹನ ಅಪಘಾತಗಳ ಸಂದರ್ಭ ಸವಾರರ ಸಾವುಗಳಿಗೆ ಪ್ರಮುಖ ಕಾರಣವೆಂದರೆ ತಲೆ ಮತ್ತು ಕುತ್ತಿಗೆ ಗಾಯಗಳಾಗಿವೆ. ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ (Bureau of Indian Standards) ಮಾನದಂಡಕ್ಕೆ ಅನುಗುಣವಾದ ಗುಣಮಟ್ಟದ ಹೆಲ್ಮೆಟ್ (Helmet) ಧರಿಸುವುದರಿಂದ ಇದನ್ನು ತಡೆಯಬಹುದು. ಆದರೆ, ಬೆಂಗಳೂರು ನಗರದಲ್ಲಿ ಕಳಪೆ, ದೋಷಯುಕ್ತ ಮತ್ತು ಅರ್ಧ ಹೆಲ್ಮೆಟ್ ಧರಿಸುವವರ ಸಂಖ್ಯೆ ಹೆಚ್ಚಾಗಿದ್ದು, ಸಮಸ್ಯೆಗೆ ಕಾರಣವಾಗುತ್ತಿದೆ. ಇಂಥವರ ವಿರುದ್ಧ ಕಾರ್ಯಾಚರಣೆ ನಡೆಸಿ ದಂಡ ವಿಧಿಸಲಾಗುವುದು ಎಂದು ಬೆಂಗಳೂರು ಟ್ರಾಫಿಕ್ ಪೊಲೀಸ್ ಮೂಲಗಳು ತಿಳಿಸಿವೆ.
ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 129 (ಎ) ಪ್ರಕಾರ ನಾಲ್ಕು ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳು ಸೇರಿದಂತೆ ಎಲ್ಲರೂ ದ್ವಿಚಕ್ರ ವಾಹನ ಪ್ರಯಾಣದ ವೇಳೆ ಗುಣಮಟ್ಟದ ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದೆ. ಪೊಲೀಸರು ಹೆಲ್ಮೆಟ್‌ಗಳ ಮಹತ್ವದ ಬಗ್ಗೆ ಈಗಾಗಲೇ ಸಾಕಷ್ಟು ಜಾಗೃತಿ ಮೂಡಿಸಿದ್ದಾರೆ. ಆದಾಗ್ಯೂ, ಅನೇಕ ದ್ವಿಚಕ್ರ ವಾಹನ ಸವಾರರು ಅರ್ಧ ಹೆಲ್ಮೆಟ್, ಗಲ್ಲದ ಪಟ್ಟಿಗಳಿಲ್ಲದ ಹೆಲ್ಮೆಟ್ ಮತ್ತು ಪ್ರಮಾಣಿತವಲ್ಲದ ಹೆಲ್ಮೆಟ್ಗಳನ್ನು ಧರಿಸಿರುವುದು ಕಂಡುಬರುತ್ತದೆ. ಇನ್ನು ವಿಶೇಷ ಕಾರ್ಯಾಚರಣೆ ನಡೆಸಿ ಅಂಥವರಿಗೆ ದಂಡ ವಿಧಿಸಲಾಗುವುದು ಎಂದು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ.
ದ್ವಿಚಕ್ರ ವಾಹನ ಸವಾರರು ಮತ್ತು ಹಿಂಬದಿ ಸವಾರರಲ್ಲಿ ಮೂರನೇ ಒಂದು ಭಾಗದಷ್ಟು ಮಂದಿ ಮಾತ್ರ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಗೆ ಅನುಗುಣವಾಗಿ ಸರಿಯಾದ ಹೆಲ್ಮೆಟ್ ಧರಿಸುತ್ತಾರೆ ಎಂದು ನಿಮ್ಹಾನ್ಸ್ ನಿರ್ದೇಶಕಿ ಡಾ. ಪ್ರತಿಮಾ ಮೂರ್ತಿ ಹೇಳಿರುವುದಾಗಿ ‘ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ. ಸಂಚಾರ ನಿಯಮ ಉಲ್ಲಂಘನೆ ಕಾರಣಕ್ಕೆ ಪೊಲೀಸರ ಕೈಗೆ ಸಿಕ್ಕಿಬೀಳುವ ಭಯದಿಂದ ವಾಹನ ಸವಾರರು ಗುಣಮಟ್ಟವಿಲ್ಲದ, ಅಗ್ಗದ ಹೆಲ್ಮೆಟ್ ಧರಿಸಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿರುವುದಾಗಿಯೂ ವರದಿ ಉಲ್ಲೇಖಿಸಿದೆ.
ಇದನ್ನೂ ಓದಿ: ಆನ್ಲೈನ್ ಜಾಬ್ ವಂಚನೆಯಲ್ಲಿಯೂ ಬೆಂಗಳೂರೇ ಕರ್ನಾಟಕ ರಾಜಧಾನಿ!
ಅನೇಕರು ಗುಣಮಟ್ಟವಿಲ್ಲದ ಹೆಲ್ಮೆಟ್ ಧರಿಸಿಕೊಂಡು, ಹೆಲ್ಮೆಟ್ ಹಾಕಿದರೂ ದಂಡ ವಿಧಿಸುತ್ತಿದ್ದೀರಿ ಎಂದು ಪೊಲೀಸರ ಬಳಿ ವಾದಿಸುತ್ತಾರೆ. ಆದರೆ, ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 129 ರ ಅಡಿಯಲ್ಲಿ ಸ್ಟಾಂಡರ್ಡ್ ಅಲ್ಲದ ಹೆಲ್ಮೆಟ್, ಅರ್ಧ ಹೆಲ್ಮೆಟ್ ಧರಿಸುವ ವಾಹನ ಚಾಲಕರಿಗೆ ಪೊಲೀಸರು ದಂಡ ವಿಧಿಸಬಹುದಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬಹುದಾಗಿದೆ ಎಂದು ಅವರು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ